ಮ್ಯಾಂಚೆಸ್ಟರ್(ಜು.09): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದ ತಾತ್ಕಾಲಿಕ ಸ್ಥಗಿತಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ 46.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಪಂದ್ಯ ಮತ್ತೆ ಆಯೋಜಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯವನ್ನು ಜುಲೈ 10ಕ್ಕೆ(ಮೀಸಲು) ಮುಂದೂಡಲಾಗಿದೆ.

 

ಮೀಸಲು(ಜು.10)ದಿನದಲ್ಲಿ ಪಂದ್ಯ ಮುಂದುವರಿಯಲಿದೆ.  ಹೀಗಾಗಿ  ನ್ಯೂಜಿಲೆಂಡ್‌ಗೆ ಇನ್ನು 3.5 ಓವರ್ ಬಾಕಿ ಇದೆ. 46.1 ಓವರ್‌ ಮುಕ್ತಾಯಗೊಂಡಿದ್ದು, 46.2ನೇ ಓವರ್‌ನಿಂದ ಪಂದ್ಯ ಆರಂಭಗೊಳ್ಳಲಿದೆ.  ನಾಳೆ(ಜು.10) ಮಳೆ ಅಡ್ಡಿಯಾಗದಿದ್ದರೆ ಸಂಪೂರ್ಣ ಪಂದ್ಯ. ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ 3 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ.

ಇಂದು(ಜು.09) ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ನಿರೀಕ್ಷಿತ ಆರಂಭ ಸಿಗಲಿಲ್ಲ. ಭಾರತದ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿದ  ಕಿವೀಸ್ ಎಚ್ಚರಿಕೆಯ ಹೆಜ್ಜೆ ಇಟ್ಟಿತು.  ಮಾರ್ಟಿನ್ ಗಪ್ಟಿಲ್ 1 , ಹೆನ್ರಿ ನಿಕೋಲಸ್   28 , ನಾಯಕ ಕೇನ್ ವಿಲಿಯಮ್ಸನ್ 67,  ಜೇಮ್ಸ್ ನೀಶನ್ 12, ಕೊಲಿನ್ ಡೇ ಗ್ರ್ಯಾಂಡ್‌ಹೊಮ್ಮೆ 16 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ರಾಸ್ ಟೇಲರ್ ಅಜೇಯ 67 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 46.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ 211 ರನ್ ಸಿಡಿಸಿದೆ.