ಧೋನಿಗಿಂದು 38ನೇ ಹುಟ್ಟುಹಬ್ಬದ ಸಂಭ್ರಮ
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಧೋನಿಯ ಬಗೆಗಿನ ಕೆಲ ಇಂಟ್ರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ ನೋಡಿ...
ಬೆಂಗಳೂರು[ಜು.07]: ’ಕ್ಯಾಪ್ಟನ್ ಕೂಲ್’ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಭಾನುವಾರವಾದ ಇಂದು ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ವಿಶ್ವಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಧೋನಿ 07 ಜುಲೈ 1981ರಲ್ಲಿ ಜನಿಸಿದ್ದರು. ಪತ್ನಿ ಸಾಕ್ಷಿ, ಮಗಳು ಝಿವಾ ಹಾಗೂ ಟೀಂ ಇಂಡಿಯಾ ಕ್ರಿಕೆಟ್ ಧೋನಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಧೋನಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮುನ್ನ ದಿನ ಐಸಿಸಿ ಕೂಡಾ ‘ಧೋನಿ ಬರೀ ಹೆಸರಲ್ಲ‘ ಕ್ರಿಕೆಟಿಗನಿಗೆ ನುಡಿನಮನ ಸಲ್ಲಿಸಿತ್ತು: ಧೋನಿಗೆ ICC ನುಡಿನಮನ : ’MSD ಬರೀ ಹೆಸರಲ್ಲ’..!
23 ಡಿಸೆಂಬರ್ 2004ರಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಧೋನಿ, ಚೊಚ್ಚಲ ಪಂದ್ಯದಲ್ಲೇ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದರು. ಆದರೆ ಆ ಬಳಿಕ ಧೋನಿ ವಿಕೆಟ್ ಕೀಪರ್, ಶ್ರೇಷ್ಠ ಮ್ಯಾಚ್ ಫಿನೀಶರ್ ಆಗಿ ಹೊರಹೊಮ್ಮಿದ್ದು ಕ್ರಿಕೆಟ್ ಅಭಿಮಾನಿಗಳ ಕಣ್ಣ ಮುಂದೆ ನಡೆದ ಅಚ್ಚರಿ. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ ಏಕೈಕ ನಾಯಕ ಎನ್ನುವ ದಾಖಲೆ ಧೋನಿ ಹೆಸರಿನಲ್ಲಿದೆ. ಐಸಿಸಿಯ ಮೂರು ಪ್ರಮುಖ ಪ್ರಶಸ್ತಿ ಗೆದ್ದುಕೊಡುವುದು ಸುಲಭದ ಮಾತಲ್ಲ ಬಿಡಿ.
ರಾಂಚಿ ಎಂಬ ಚಿಕ್ಕ ಗ್ರಾಮದಿಂದ ಬಂದ ಹುಡುಗ ವಿಕೆಟ್ ಕೀಪರ್ ಆಗಿ, ಬಳಿಕ ಭಾರತ ಕಂಡ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದ್ದು ನಿಜಕ್ಕೂ ಪವಾಡವೇ ಸರಿ. ಇಂದಿಗೂ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳಿಗೆ ಧೋನಿ ಐಕಾನ್ ಆಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಅಚ್ಚರಿಯಂಬಂತೆ 2007ರಲ್ಲಿ ಟೀಂ ಇಂಡಿಯಾ ನಾಯಕತ್ವ ಹೊತ್ತುಕೊಂಡ ಧೋನಿ 200 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅದರಲ್ಲಿ ಭಾರತ 110 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇಂದಿನವರೆಗೆ ಧೋನಿ 90 ಟೆಸ್ಟ್, 348 ಏಕದಿನ ಹಾಗೂ 98 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 15 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾ ಎದುರಿಸುತ್ತಿದ್ದ ವಿಕೆಟ್ ಕೀಪರ್ ಸಮಸ್ಯೆಯನ್ನು ದೂರಮಾಡಿದ್ದರು. ವಿಕೆಟ್ ಹಿಂದೆ ಕ್ಯಾಚ್ ಹಾಗೂ ಸ್ಟಂಪಿಂಗ್’ಗೆ ಧೋನಿಗೆ ಸರಿಸಾಟಿ ಮತ್ತೊಬ್ಬರಿಲ್ಲ.
ಪ್ರಸ್ತುತ ಬ್ಯಾಟಿಂಗ್’ನಲ್ಲಿ ಧೋನಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದರೂ, ಯಾವುದೇ ಕ್ಷಣದಲ್ಲಾದರೂ ಕಮ್’ಬ್ಯಾಕ್ ಮಾಡುವ ಸಾಮರ್ಥ್ಯ ಧೋನಿಗಿದೆ. ಸುವರ್ಣನ್ಯೂಸ್.ಕಾಂ ಬಳಗದಿಂದ ಮಹೇಂದ್ರ ಸಿಂಗ್ ಧೋನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಯಗಳು...