ಬರ್ಮಿಂಗ್‌ಹ್ಯಾಮ್(ಜು.11): ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಆತಿಥೇಯ ಇಂಗ್ಲೆಂಡ್ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಈ ಮೂಲಕ ಜುಲೈ 14 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.  ಇಂಗ್ಲೆಂಡ್ ವಿರುದ್ದ ಮುಗ್ಗರಿಸಿದ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ.

"

ಗೆಲುವಿಗೆ 224 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ಆರಂಭದಲ್ಲೇ ಗೆಲುವಿನ ಸೂಚನೆ ನೀಡಿತು. ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟ ಆಸ್ಟ್ರೇಲಿಯಾದ ಕೊನೆಯ ಆಸೆಯನ್ನೂ ನುಚ್ಚು ನೂರು ಮಾಡಿತು. ಕಾರಣ ಈ ಜೋಡಿ ಮೊದಲ ವಿಕೆಟ್‌ಗೆ 124 ರನ್ ಜೊತೆಯಾಟ ನೀಡಿತು. ಬೈರ್‌ಸ್ಟೋ 34 ರನ್ ಸಿಡಿಸಿ ಔಟಾದರು. ಆಸೀಸ್ ಮೊದಲ ವಿಕೆಟ್ ಕಬಳಿಸಿದರೂ ಸಂಭ್ರಮ ಇರಲಿಲ್ಲ.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೇಸನ್ ರಾಯ್ 85 ರನ್ ಕಾಣಿಕೆ ನೀಡಿದರು. ಈ ಮೂಲಕ ಇಂಗ್ಲೆಂಡ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಜೋ ರೂಟ್ ಹಾಗೂ ನಾಯಕ ಇಯಾನ್ ಮಾರ್ಗನ್ ಆಸ್ಟ್ರೇಲಿಯಾ ಸೆಮಿಫೈನಲ್ ಉಸಿರಾಟವನ್ನೇ  ನಿಲ್ಲಿಸಿದರು. ರೂಟ್ ಅಜೇಯ 48 ರನ್ ಹಾಗೂ ಮಾರ್ಗನ್ ಅಜೇಯ 45 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 32.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಇಂಗ್ಲೆಂಡ್ 8 ವಿಕೆಟ್ ಗೆಲುವಿನೊಂದಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿತು. ಇದೀಗ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಯಾರು ಗೆದ್ದರು ಇತಿಹಾಸ ನಿರ್ಮಾಣವಾಗಲಿದೆ. ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆಲ್ಲೋ ಸುವರ್ಣ ಅವಕಾಶ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಕ್ಕಿದೆ. ಇತ್ತ ಸೋಲಿನೊಂದಿಗೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿತ್ತು.