ನಾವ್ ಮನೆಗೆ ಹೋಗೋದಿಲ್ಲ : ಪಾಕ್ ಕ್ರಿಕೆಟಿಗರು ಕಂಗಾಲು
ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಹೀನಾಯವಾಗಿ ಸೋತ ಬಳಿಕ ಪಾಕಿಸ್ತಾನ ತಂಡದ ಸ್ಥಿತಿ ಹೇಳತೀರದ್ದಾಗಿದೆ. ಒತ್ತಡಕ್ಕೆ ಒಳಗಾಗಿರುವ ನಾಯಕ ಮನಬಂದಂತೆ ಸಹ ಆಟಗಾರರ ಮೇಲೆ ರೇಗಾಡಿದ್ದಾರೆ ಎನ್ನಲಾಗಿದೆ.
ಮ್ಯಾಂಚೆಸ್ಟರ್ [ಜೂ.19] : ಏಕದಿನ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಹೀನಾಯವಾಗಿ ಸೋತ ಬಳಿಕ ಪಾಕಿಸ್ತಾನ ತಂಡದ ಸ್ಥಿತಿ ಹೇಳತೀರದ್ದಾಗಿದೆ. ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ಇನ್ನುಳಿದ 4 ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಸ್ಥಿತಿಯಲ್ಲಿರುವ ಪಾಕಿಸ್ತಾನ ತಂಡದ ಆಟಗಾರರು ಈಗಾಗಲೇ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.
ಭಾನುವಾರ ಪಂದ್ಯ ಮುಗಿದ ಬಳಿಕ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಡ್ರೆಸ್ಸಿಂಗ್ ಕೋಣೆಯಲ್ಲಿ ಸಹ ಆಟಗಾರರ ಮೇಲೆ ಹರಿಹಾಯ್ದರು ಎಂದು ಪಾಕಿಸ್ತಾನ ಮಾಧ್ಯಮವೊಂದು ವರದಿ ಮಾಡಿದೆ. ಜತೆಗೆ ತವರಿಗೆ ತೆರಳಿದಾಗ ಎದುರಾಗಬಹುದಾದ ಕಠಿಣ
ಪರಿಸ್ಥಿತಿ ಬಗ್ಗೆ ತಂಡಕ್ಕೆ ಎಚ್ಚರಿಸಿದ್ದಾರೆ ಎನ್ನಲಾಗಿದೆ.
5 ಪಂದ್ಯಗಳಿಂದ ಕೇವಲ 3 ಅಂಕಗಳಿಸಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಪಾಕಿಸ್ತಾನಿ ಅಭಿಮಾನಿಗಳು ಈಗಾಗಲೇ ಆಕ್ರೋಶಗೊಂಡಿದ್ದು, ಸಾಮಾಜಿಕ ತಾಣಗಳಲ್ಲಿ ತಂಡವನ್ನು ಮನಸ್ಸಿಗೆ ಬಂದಂತೆ ಟೀಕಿಸುತ್ತಿದ್ದಾರೆ. ಸಹಜವಾಗಿಯೇ ಆಟಗಾರರು ಹೆದರಿದ್ದು, ತವರಿಗೆ ವಾಪಸಾಗಲು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಎಲ್ಲರಿಗೂ ಇದೆ ಹಬ್ಬ!: ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನ ಅಭಿಮಾನಿಗಳಿಗೆ ಮಾತ್ರವಲ್ಲ, ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ)ಗೂ ಸಿಟ್ಟು ತರಿಸಿದೆ. ವಿಶ್ವಕಪ್ ಬಳಿಕ ತಂಡದಲ್ಲಿ ಕೆಲ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ ಇದೆ. ಸಹ ಆಟಗಾರರು ತಮ್ಮ ನಾಯಕತ್ವದ ವಿರುದ್ಧ ಪಿಸಿ ಬಿಗೆ ದೂರು ನೀಡಬಹುದು ಎನ್ನುವುದನ್ನು ನಿರೀಕ್ಷೆ ಮಾಡಿರುವ ಸರ್ಫರಾಜ್, ನಿರೀಕ್ಷಣಾ ಜಾಮೀನು ಪಡೆದವರಂತೆ ಹೇಳಿಕೆ ನೀಡಿದ್ದಾರೆ.
ನಾನೊಬ್ಬನೇ ಮನೆಗೆ ಹೋಗುತ್ತೇನೆ ಎಂದು ಭಾವಿಸಿದ್ದರೆ ಅದು ಅವರ ಮೂರ್ಖತನ. ಏನಾದರೂ ಹೆಚ್ಚು ಕಡಿಮೆ ಆದರೆ ಪ್ರತಿಯೊ ಬ್ಬರೂ ಮನೆಗೆ ಹೋಗಬೇಕಾಗುತ್ತದೆ’ ಎಂದು ಸರ್ಫರಾಜ್ ಹೇಳಿರು ವುದಾಗಿ ಪಾಕ್ ಮಾಧ್ಯಮ ವರದಿ ಮಾಡಿದೆ. ಸರ್ಫರಾಜ್‌ರನ್ನು
ನಾಯಕತ್ವದಿಂದ ಕೆಳಗಿಳಿಸಿ ಬಾಬರ್ ಆಜಂಗೆ ನಾಯಕನ ಪಟ್ಟ ನೀಡಬೇಕೆಂದು ಪಾಕ್ ಕ್ರಿಕೆಟ್ ವಲಯದಲ್ಲಿ ಚರ್ಚೆನಡೆಯುತ್ತಿದೆ.
ಟೀಕಿಸಿ, ಆದ್ರೆ ಕೆಟ್ಟ ಪದ ಬೇಡ: ಆಮೀರ್; ಪಾಕಿಸ್ತಾನಿ ಆಟಗಾರರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ನಿಂದಿನೆ ಹೆಚ್ಚುತ್ತಲೇ ಇದೆ. ಅಭಿಮಾನಿ ಗಳ ಮಾತುಗಳನ್ನು ಕೇಳಿ ಬೇಸರಗೊಂಡಿರುವ ವೇಗಿ ಮೊಹಮದ್ ಆಮೀರ್, ‘ನಮ್ಮಿಂದ ತಪ್ಪಾಗಿದೆ, ನಾವು ಟೀಕೆಗೆ ಅರ್ಹರು. ಆದರೆ ದಯವಿಟ್ಟು ಕೆಟ್ಟ ಪದಗಳನ್ನು ಬಳಸಬೇಡಿ’ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ತಮ್ಮ ಪತ್ನಿ ಸಾನಿಯಾ ಮಿರ್ಜಾರನ್ನು ಅಭಿಮಾನಿಗಳು ಟೀಕಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಹಿರಿಯ ಆಟಗಾರ ಶೋಯಿಬ್ ಮಲಿಕ್, ‘ಟೀಕೆ, ಟ್ರೋಲ್‌ಗಳಿಗೆ ಕುಟುಂಬ ಸದಸ್ಯರನ್ನು ಎಳೆಯಬೇಡಿ’ ಎಂದು ಕೇಳಿಕೊಂಡಿದ್ದಾರೆ.