ಮುಂಬೈ(ಜು.12): 2019ರ ವಿಶ್ವಕಪ್ ಸೆಮಿ ಫೈನಲ್’ನಲ್ಲಿ ಮುಗ್ಗರಿಸಿರುವ ಭಾರತ ತಂಡದಲ್ಲಿ ಇದೀಗ ಸೋಲಿನ ಚರ್ಚೆಗೆ ನಾಂದಿ ಹಾಡಲಾಗಿದೆ. ಟೀಂ ಇಂಡಿಯಾ ಭಾರತಕ್ಕೆ ಬರುತ್ತಿದ್ದಂತೇ ಈ ಕುರಿತು ಚರ್ಚೆಗೆ ಬಿಸಿಸಿಐ ಮುಂದಾಗಲಿದೆ.

ಪ್ರಮುಖವಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಸೋಲಿಗೆ ಬ್ಯಾಟ್ಸಮನ್’ಗಳ ವೈಫಲ್ಯ ಕಾರಣವಾಗಿದ್ದು, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್’ಗೆ ಸಂಕಷ್ಟ ಎದುರಾಗಿದೆ.  

ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್‌ಗೆ ಕೊಕ್ ನೀಡುವ ಸಾಧ್ಯತೆಗಳಿದ್ದು, ಬಂಗಾರ್ ತಮ್ಮ ಕರ್ತವ್ಯವನ್ನು ಮತ್ತಷ್ಟು ಉತ್ತಮವಾಗಿ ನಿಭಾಯಿಸಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಮಧ್ಯೆ ವಿಶ್ವಕಪ್ ನಂತರವೂ ಮುಖ್ಯ ಕೋಚ್ ರವಿಶಾಸ್ತ್ರಿ ಜೊತೆಗಿನ ಒಪ್ಪಂದವನ್ನು 45 ದಿನಗಳ ಕಾಲ ಮುಂದುವರೆಸಲಾಗಿದೆ. ಹೀಗಾಗಿ ರವಿಶಾಸ್ತ್ರಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 

ಇನ್ನು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ಮೂಡಿ ಬಂದಿರುವುದರಿಂದ ಬೌಲಿಂಗ್ ಕೋಚ್ ಭರತ್ ಅರುಣ್ ಅವರಿಗೆ ಯಾವುದೇ ಕಂಟಕ ಇಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹಾಗೆಯೇ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರಿಗೂ ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ.

ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಜೊತೆ ಸಭೆ ನಡೆಸಲಿರುವ ಬಿಸಿಸಿಐ ಆಡಳಿತಾತ್ಮಕ ಸಮಿತಿ, ಭಾರತದ ಸೋಲಿಗಿರುವ ಕಾರಣಗಳ ಕುರಿತು ಚರ್ಚೆ ನಡೆಸಲಿದೆ.