ಬೆಂಗಳೂರು(ಜೂ.15): ಭಾರತ ಹಾಗೂ ಪಾಕಿಸ್ತಾನ ಪ್ರತಿ ಕ್ರಿಕೆಟ್ ಹೋರಾಟ ಕೂಡ ಸ್ಮರಣೀಯ. ಕಾರಣ ಬದ್ಧವೈರಿಗಳ ಕದನದಲ್ಲಿ ಯಾರೂ ಕೂಡ ಸೋಲನ್ನು ಸಹಿಸಲ್ಲ. ಅಭಿಮಾನಿಗಳಿಗೆ ಇದು ಪ್ರತಿಷ್ಠೆಯ ಕಣ. ವಿಶ್ವಕಪ್ ಸೋತರೂ ಚಿಂತೆಯಲ್ಲ, ಆದರೆ ಇಂಡೋ-ಪಾಕ್ ಪಂದ್ಯದಲ್ಲಿ ಸೋಲಬಾರದು ಅಷ್ಟೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಹೋರಾಟದ 5 ಅವಿಸ್ಮರಣೀಯ ಘಟನೆಗಳನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆತಿಲ್ಲ.

1 ವೆಂಕಟೇಶ್ ಪ್ರಸಾದ್ vs ಅಮೀರ್ ಸೊಹೈಲ್
ಭಾರತ ಹಾಗೂ ಪಾಕಿಸ್ತಾನ ವಿಶ್ವಕಪ್ ಹೋರಾಟದಲ್ಲಿ ಹೆಚ್ಚು ಸ್ಮರಣೀಯ ಘಟನೆ ಅಂದರೆ ಅದು ವೆಂಕಟೇಶ್ ಪ್ರಸಾದ್ ಹಾಗೂ ಅಮಿರ್ ಸೊಹೈಲ್ ನಡುವಿನ ಸ್ಲೆಡ್ಜಿಂಗ್. 1996ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನೀಡಿದ 288 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಪಾಕಿಸ್ತಾನಕ್ಕೆ ಅಮೀರ್ ಸೊಹೈಲ್ ಹಾಗೂ ಸೈಯಿದ್ ಅನ್ವರ್ ಉತ್ತಮ ಆರಂಭ ನೀಡಿದ್ದರು. ಅಬ್ಬರಿಸುತ್ತಿದ್ದ ಅಮಿರ್ ಸೊಹೈಲ್, ವೆಂಕಟೇಶ್ ಪ್ರಸಾದ್ ಬೌಲಿಂಗ್‌ನಲ್ಲಿ ಬೌಂಡರಿ ಸಿಡಿಸಿ, ಇಲ್ಲೇ ಮತ್ತೊಂದು ಬೌಂಡರಿ ಸಿಡಿಸುತ್ತೇನೆ ಎಂದು ವಾರ್ನಿಂಗ್ ಮಾಡಿದ್ದರು. ಮರು ಎಸೆತದಲ್ಲಿ ವೆಂಕಟೇಶ್ ಪ್ರಸಾದ್ ಕ್ಲೀನ್ ಬೋಲ್ಡ್ ಮಾಡೋ ಮೂಲಕ ಸೊಹೈಲ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದರು.

 

2 ಜಾವೇದ್ ಮಿಯಾಂದಾದ್ ಮಂಕಿ ಜಂಪ್
1992ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ಮಂಕಿ ಜಂಪ್ ಪ್ರತಿ ವಿಶ್ವಕಪ್ ಟೂರ್ನಿಯಲ್ಲೂ ಸದ್ದು ಮಾಡುತ್ತಿದೆ. ಗೆಲುವಿಗೆ 217 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನ, ರನ್ ಗಳಿಸಲು ಪರದಾಡಿತು. ಕ್ರೀಸ್‌ನಲ್ಲಿ ಜಾವೇದ್ ರನ್‌ಗಾಗಿ ಅದೆಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಸಚಿನ್ ಎಸೆತದಲ್ಲಿ ರನ್ ಕದಿಯಲು ಮಂದಾದ ಜಾವೇದ್‌ಗೆ ಸಾಧ್ಯವಾಗಲಿಲ್ಲ. ರನೌಟ್ ತಪ್ಪಿಸಲು ಹಿಂತಿರುಗಿ ಕೀಪರ್‌ನತ್ತ ಓಡಿದ ಜಾವೇದ್ ಕ್ರೀಸ್ ತಲುಪಿದರು. ಆದರೆ ಥ್ರೋ ಪಡೆದುಕೊಂಡ ಕೀಪರ್ ಕೀರನ್ ಮೊರೆ ರನೌಟ್‌ಗೆ ಮುಂದಾಗಿದ್ದರು. ಇದನ್ನು ಅಣಕಿಸಲು ಹೋದ ಜಾವೇದ್ ಮಂಕಿ ಜಂಪ್ ಮೂಲಕ ತಾವೇ ಅಪಹಾಸ್ಯಕ್ಕೀಡಾದರು.

 

3 ಸಚಿನ್ ತೆಂಡುಲ್ಕರ್ 98 ರನ್(2003ರ ವಿಶ್ವಕಪ್)
ಇಂಡೋ-ಪಾಕ್ ಅವಿಸ್ಮರಣೀಯ ಘಟನೆಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಿಡಿಸಿದ 98 ರನ್ ಕೂಡ ಸ್ಥಾನ ಪಡೆದುಕೊಂಡಿದೆ. 2003ರ ವಿಶ್ವಕಪ್ ಟೂರ್ನಿಯಲ್ಲಿ 276 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ದಿಢೀರ್ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತ್ತು. ಆದರೆ ಸಚಿನ್ ತೆಂಡುಲ್ಕರ್ ಸ್ಫೋಟಕ ಬ್ಯಾಟಿಂಗ್ ಟೀಂ ಇಂಡಿಯಾಗೆ ನೆರವಾಯಿತು. ಸಚಿನ್ 75 ಎಸೆತದಲ್ಲಿ 98 ರನ್ ಸಿಡಿಸಿದ್ದರು. ಈ ಮೂಲಕ ಟೀಂ ಇಂಡಿಯಾ ಸುಲಭವಾಗಿ ಗುರಿ ತಲುಪಿತು.

 

4 ಅಜಯ್ ಜಡೇಜಾ vs ವಕಾರ್ ಯೂನಿಸ್
1996ರ ವಿಶ್ವಕಪ್ ಟೂರ್ನಿಯಲ್ಲಿ ಇಂಡೋ-ಪಾಕ್ ಪಂದ್ಯ ಟಿ20 ಸ್ವರೂಪ ಪಡೆದುಕೊಂಡಿತ್ತು. ವಕಾರ್ ಯೂನಿಸ್ ಮಾರಕ ಬೌಲಿಂಗ್ ಮೂಲಕ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಯುಗ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ರನ್ ಕುಟುಂತ್ತಾ ಸಾಗಿತ್ತು. ಆದರೆ ಅಜಯ್ ಜಡೇಜಾ ಕ್ರೀಸ್‌ಗೆ ಬಂದ ಮೇಲೆ ಎಲ್ಲವೂ ಬದಲಾಯಿತು. ಅಜಯ್ ಜಡೇಜಾ 25 ಎಸೆತದಲ್ಲಿ 45 ರನ್ ಸಿಡಿಸಿದರು. ಅದರಲ್ಲೂ ವಕಾರ್ ಯೂನಿಸ್ ಓವರ್‌ನ 5 ಎಸೆತದಲ್ಲಿ 23 ರನ್ ಸಿಡಿಸಿದ್ದರು. ಈ ಮೂಲಕ ಟೀಂ ಇಂಡಿಯಾ 287 ರನ್ ಸಿಡಿಸಿತು. ಇಷ್ಟೇ ಅಲ್ಲ ಈ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.

 

5 ವಿರಾಟ್ ಕೊಹ್ಲಿ ಶತಕ
2015ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಇಂಡೋ-ಪಾಕ್ ವಿಶ್ವಕಪ್ ಹೋರಾಟದಲ್ಲಿ ಪಾಕಿಸ್ತಾನದ ಸೈಯಿದ್ ಅನ್ವರ್ ಶತಕ ಸಿಡಿಸೋ ಮೂಲಕ ಏಕೈಕ ಆಟಗಾರನ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಕೊಹ್ಲಿ ಸೆಂಚುರಿ ಸಿಡಿಸೋ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಶತಕ ಸಿಡಿಸಿದ ಏಕೈಕ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. ಈ ಪಂದ್ಯದಲ್ಲಿ ಭಾರತ 76 ರನ್ ಗೆಲುವು ಸಾಧಿಸಿತ್ತು.