ಸೌಥಾಂಪ್ಟನ್[ಜೂ.05]: ಭಾರತ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟಿಗರರಾದ ಹಾಶೀಂ ಆಮ್ಲಾ ಮತ್ತು ಇಮ್ರಾನ್ ತಾಹಿರ್ ಸೌಥಾಂಪ್ಟನ್’ನಲ್ಲಿರುವ ಮಸೀದಿಗೆ ತೆರಳಿ ಈದ್ ಪ್ರಾರ್ಥನೆ ಸಲ್ಲಿಸಿದ್ದಾರೆ.

ರಂಜಾನ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದ ಈ ಇಬ್ಬರು ಕ್ರಿಕೆಟಿಗರು, ಪರಸ್ಪರ ಶುಭ ಕೋರಿಕೊಂಡರು. ಆ ಬಳಿಕ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ಕ್ರಿಕೆಟಿಗರ ಜತೆ ಅಂಪೈರ್ ಅಲೀಮ್ ದರ್ ಕೂಡಾ ಸಾಥ್ ನೀಡಿದ್ದರು. ಈ ವಿಶ್ವಕಪ್ ಟೂರ್ನಿಯ ಬಳಿಕ 40 ವರ್ಷದ ತಾಹಿರ್ ಸೀಮಿತ ಓವರ್ ಗಳ ಕ್ರಿಕೆಟಿಗೆ ನಿವೃತ್ತಿ ಹೇಳಲಿದ್ದಾರೆ.  ಇಂಗ್ಲೆಂಡ್ ವಿರುದ್ಧ ಉದ್ಘಾಟನಾ ಪಂದ್ಯವನ್ನಾಡಿದ್ದ 36 ವರ್ಷದ ಹಾಶೀಂ ಆಮ್ಲಾ, ಗಾಯದ ಸಮಸ್ಯೆಯಿಂದಾಗಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಇನ್ನು ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿದ್ದ ಪಾಕಿಸ್ತಾನ ತಂಡವು ನಾಟಿಂಗ್’ಹ್ಯಾಮ್ ಚರ್ಚ್’ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತು. ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್’ನಲ್ಲಿನ ಮಸೀದಿ ಮೇಲೆ ದಾಳಿಯಾದ ಬಳಿಕ ಪಾಕಿಸ್ತಾನ ತಂಡಕ್ಕೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಮಾರ್ಚ್’ನಲ್ಲಿ ನ್ಯೂಜಿಲೆಂಡ್ ತೆರಳಿದ್ದ ಬಾಂಗ್ಲಾದೇಶ ತಂಡದ ಕ್ರಿಕೆಟಿಗರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ತೆರಳಿದ್ದ ವೇಳೆಯೇ ಭಯೋತ್ಫಾದಕರು ಗುಂಡಿನ ದಾಳಿ ನಡೆಸಿ 51 ಜನರನ್ನು ಭೀಕರವಾಗಿ ಹತ್ಯೆ ಮಾಡಿದ್ದರು.