ಲಂಡನ್[ಜೂ.08]: ಕಿವೀಸ್ ಮಧ್ಯಮ ವೇಗಿ ಜೇಮ್ಸ್ ನೀಶಮ್[31/5] ಮಾರಕ ದಾಳಿಗೆ ತತ್ತರಿಸಿದ ಆಫ್ಘಾನಿಸ್ತಾನ ಕೇವಲ 172 ರನ್ ಗಳಿಗೆ ಸರ್ವಪತನ ಕಂಡಿದ್ದು, ನ್ಯೂಜಿಲೆಂಡ್ ಗೆ ಸಾಧಾರಣ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಫ್ಘಾನಿಸ್ತಾನ ಉತ್ತಮ ಆರಂಭವನ್ನೇ ಪಡೆಯಿತು. ಬಲಿಷ್ಠ ನ್ಯೂಜಿಲೆಂಡ್ ಬೌಲರ್’ಗಳನ್ನು ಸಮರ್ಥವಾಗಿ ಎದುರಿಸಿದ ಆಫ್ಘನ್ ಆರಂಭಿಕರಾದ ಹಜರುತ್ತುಲ್ಲಾ ಝಜೈ-ನೂರ್ ಅಲಿ ಜದ್ರಾನ್ ಜೋಡಿ ಮೊದಲ ವಿಕೆಟ್’ಗೆ 10.5 ಓವರ್’ಗಳಲ್ಲಿ 66 ರನ್ ಕಲೆಹಾಕಿತು. ಹಜರುತ್ತುಲ್ಲಾ ಝಜೈ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನೊಂದಿಗೆ 34 ರನ್ ಬಾರಿಸಿದರೆ, ನೂರ್ ಅಲಿ ಜದ್ರಾನ್ 38 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್ ಬಾರಿಸಿದರು.

4 ರನ್ ಗಳ ಅಂತರದಲ್ಲಿ 4 ವಿಕೆಟ್ ಪತನ: ಒಂದು ಹಂತದಲ್ಲಿ 66 ರನ್ ಬಾರಿಸಿ ಬೃಹತ್ ಮೊತ್ತ ಕಲೆಹಾಕುವ ಕನಸಿನಲ್ಲಿದ್ದ ಆಫ್ಘನ್ ಪಡೆಗೆ ಜೇಮ್ಸ್ ನೀಶಮ್ ಆಘಾತ ನೀಡಿದರು. ಝಜೈ ವಿಕೆಟ್ ಪಡೆದ ನೀಶಮ್ ಕಿವೀಸ್’ಗೆ ಮೊದಲ ಯಶಸ್ಸು ಒದಗಿಸಿದರು. ಇದರ ಬೆನ್ನಲ್ಲೇ ನೂರ್ ಅಲಿಯನ್ನು ಲೂಕಿ ಫರ್ಗ್ಯೂಸನ್ ಬಲಿ ಪಡೆದರು. ಮರು ಓವರ್’ನಲ್ಲಿ ನೀಶಮ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ರೆಹಮತ್ ಶಾ ಅವರನ್ನು ಶೂನ್ಯಕ್ಕೆ ಪೆವಿಲಿಯನ್’ಗೆ ಅಟ್ಟಿದರು. ಮತ್ತೊಂದು ಓವರ್’ನಲ್ಲಿ ನಾಯಕ ಗುಲ್ಬದ್ದೀನ್ ನೈಬ್’ಗೆ ಪೆವಿಲಿಯನ್ ನೀಶಮ್ ದಾರಿ ತೋರಿಸಿದರು. ಈ ವೇಳೆ ಆಫ್ಘಾನಿಸ್ತಾನ 14.1 ಓವರ್’ಗಳಲ್ಲಿ 70 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಮತ್ತೆ ನಾಟಕೀಯ ಕುಸಿತ: ಮಧ್ಯಮ ಕ್ರಮಾಂಕದಲ್ಲಿ ಹಸ್ಮತುಲ್ಲಾ ಶಾಹಿದಿ[59] ಹೊರತುಪಡಿಸಿ ಉಳಿದ್ಯಾವ ಆಫ್ಘನ್ ಬ್ಯಾಟ್ಸ್’ಮನ್’ಗಳು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಹಸ್ಮತುಲ್ಲಾ ಶಾಹಿದಿ 99 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ 59 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ನಬೀ[9], ನಜೀಬುಲ್ಲಾ ಜದ್ರಾನ್[4], ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಇಕ್ರಾಮ್ ಅಲಿಖಿಲ್[2], ರಶೀದ್ ಖಾನ್[0] ನಿರಾಸೆ ಮೂಡಿಸಿದರು. ಆಫ್ತಾಬ್ ಆಲಂ[14] ಸ್ವಲ್ಪಹೊತ್ತು ಹಸ್ಮತುಲ್ಲಾ ಶಾಹಿದಿಗೆ ಸಾಥ್ ನೀಡಿದರು.   

ಸಂಕ್ಷಿಪ್ತ ಸ್ಕೋರ್
ಆಫ್ಘಾನಿಸ್ತಾನ: 172/10
ಹಸ್ಮತುಲ್ಲಾ ಶಾಹಿದಿ:59
ಜೇಮ್ಸ್ ನೀಶಮ್: 31/5
[* ಆಫ್ಘಾನಿಸ್ತಾನ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]