ಸೌಥಾಂಪ್ಟನ್‌(ಜೂ.05): 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಆರಂಭಗೊಂಡು ಒಂದು ವಾರವಾಗುತ್ತಾ ಬಂದರೂ ಇನ್ನೂ ಭಾರತ ತಂಡವೇಕೆ ಪಂದ್ಯವಾಡಿಲ್ಲ ಎನ್ನುವ ಕುತೂಹಲ, ಬೇಸರ ಪ್ರತಿಯೊಬ್ಬ ಭಾರತೀಯ ಆಟಗಾರನಲ್ಲೂ ಇತ್ತು. ಆ ಕುತೂಹಲಕ್ಕೆ ಬುಧವಾರ ತೆರೆ ಬೀಳಲಿದೆ. ಭಾರತ ತಂಡದ ಬಹುನಿರೀಕ್ಷಿತ ವಿಶ್ವಕಪ್‌ ಅಭಿಯಾನ ಬುಧವಾರ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾ ಸೆಣಸಲಿದೆ.

ವಿರಾಟ್‌ ಕೊಹ್ಲಿ ಒಬ್ಬ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನ್ನುವುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಆದರೆ ಅವರೊಬ್ಬ ಶ್ರೇಷ್ಠ ನಾಯಕ ಎನಿಸಿಕೊಳ್ಳಬೇಕಿದ್ದರೆ ಈ ವಿಶ್ವಕಪ್‌ನಲ್ಲಿ ತಂಡವನ್ನು ಯಶಸ್ಸಿನ ಪಥದಲ್ಲಿ ನಡೆಸಬೇಕಿದೆ.

ಸದ್ಯ ಭಾರತ ತಂಡ ಹಲವು ಶ್ರೇಷ್ಠ ಆಟಗಾರರನ್ನು ಹೊಂದಿದ್ದು ವಿಶ್ವಕಪ್‌ ಗೆಲ್ಲುವ ಸಾಮರ್ಥ್ಯ ಹೊಂದಿದೆ. ಇಂಗ್ಲೆಂಡ್‌, ಆಸ್ಪ್ರೇಲಿಯಾ ಜತೆ ಭಾರತವೂ ಈ ಬಾರಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ. 2 ವರ್ಷಗಳಿಂದ ವಿಶ್ವಕಪ್‌ಗಾಗಿ ತಯಾರಿ ನಡೆಸಿರುವ ಭಾರತ, ತಾನು ಕಲಿತಿರುವ ಪಾಠಗಳನ್ನು ಕಾರ್ಯರೂಪಕ್ಕೆ ತರಲು ಹಾತೊರೆಯುತ್ತಿದೆ. ಭಾರತೀಯ ಆಟಗಾರರಿಗೆ ಅಗತ್ಯ ವಿಶ್ರಾಂತಿ ಸಿಕ್ಕಿದ್ದು, ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿರುವುದು ಹಲವು ರೀತಿಗಳಲ್ಲಿ ಲಾಭವೇ ಆಗಲಿದೆ. ಆಡಿರುವ 2 ಪಂದ್ಯಗಳಲ್ಲಿ ಸೋಲುಂಡಿರುವ ಆಫ್ರಿಕಾಕ್ಕೆ ಗಾಯಾಳುಗಳ ಸಮಸ್ಯೆಯೂ ಕಾಡುತ್ತಿದೆ. ಪ್ರಮುಖ ವೇಗಿಗಳಾದ ಡೇಲ್‌ ಸ್ಟೇನ್‌ ಹಾಗೂ ಲುಂಗಿ ಎನ್‌ಗಿಡಿ ಸೇವೆ ಅಲಭ್ಯವಾಗಲಿದೆ. ಆಫ್ರಿಕಾದ ಸಮಸ್ಯೆಗಳನ್ನೇ ಲಾಭವಾಗಿಸಿಕೊಂಡು ಭಾರತ ಶುಭಾರಂಭ ಮಾಡುವ ಉತ್ಸಾಹದಲ್ಲಿದೆ.

ಮುಖಭಂಗಕ್ಕೊಳಗಾಗಿರುವ ಎದುರಾಳಿ ಸದಾ ಅಪಾಯಕಾರಿ ಎನ್ನುವುದು ಕೋಚ್‌ ರವಿಶಾಸ್ತ್ರಿಗೆ ತಿಳಿದಿದ್ದು, ತಂಡದ ಆಟಗಾರರಿಗೆ ಎಚ್ಚರಿಕೆಯಿಂದಿರಲು ಸೂಚಿಸಿರುತ್ತಾರೆ. ಇಲ್ಲಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದರೂ, ವಾತಾವರಣಕ್ಕೆ ತಕ್ಕಂತೆ ತಂಡದ ಸಂಯೋಜನೆ ರಚಿಸುವ ಒತ್ತಡ ಕೊಹ್ಲಿ ಮೇಲಿದೆ. ಕೆಲ ಕಠಿಣ ಪ್ರಶ್ನೆಗಳು ಭಾರತೀಯ ನಾಯಕನ ಮುಂದಿವೆ. 3ನೇ ವೇಗಿ ರೂಪದಲ್ಲಿ ಭುವನೇಶ್ವರ್‌ ಕುಮಾರ್‌ರನ್ನು ಕಣಕ್ಕಿಳಿಸಲಾಗುತ್ತದೆಯೋ?, ಅಭ್ಯಾಸ ಪಂದ್ಯದಲ್ಲಿ ಮಿಂಚಿದ ರವೀಂದ್ರ ಜಡೇಜಾಗೆ ಮನ್ನಣೆ ನೀಡಬೇಕೋ ಇಲ್ಲವೇ ಕಳೆದ 22 ತಿಂಗಳಿಂದ ಒಟ್ಟಿಗೆ ಯಶಸ್ಸು ಕಂಡಿರುವ ಕುಲ್ದೀಪ್‌ ಯಾದವ್‌-ಯಜುವೇಂದ್ರ ಚಹಲ್‌ಗೆ ಸ್ಥಾನ ನೀಡಬೇಕೋ?, ಕಳೆದ ಒಂದು ತಿಂಗಳಲ್ಲಿ ಒಂದೂ ಪಂದ್ಯವಾಡದ ಕೇದಾರ್‌ ಜಾಧವ್‌ ಆಡಿಸಬೇಕೋ ಇಲ್ಲವೇ ವಿಜಯ್‌ ಶಂಕರ್‌ಗೆ ಅವಕಾಶ ನೀಡಬೇಕೋ?, ಆರಂಭಿಕ ಪಂದ್ಯಕ್ಕೂ ಮುನ್ನ ಕೊಹ್ಲಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದುಕೊಳ್ಳಬೇಕಿದೆ.

ಇತ್ತೀಚಿನ ದಿನಗಳಲ್ಲಿ ರೋಹಿತ್‌ ಶರ್ಮಾ ಹಾಗೂ ಶಿಖರ್‌ ಧವನ್‌ ನಿರೀಕ್ಷಿತ ಲಯ ಪ್ರದರ್ಶಿಸದೆ ಇದ್ದರೂ, ಭಾರತ ತಂಡ ತನ್ನ ಆರಂಭಿಕ ಜೋಡಿ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ. ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದು, ಅವರ ಆಟ ವಿಶ್ವಕಪ್‌ನುದ್ದಕ್ಕೂ ಮಹತ್ವದಾಗಲಿದೆ. ಕೆ.ಎಲ್‌.ರಾಹುಲ್‌ 4ನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿದ್ದಾರೆ. ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ ಮಧ್ಯಮ ಕ್ರಮಾಂಕದ ಆಧಾರವೆನಿಸಿದ್ದು, ಕೊನೆ 10 ಓವರ್‌ಗಳಲ್ಲಿ ಭಾರತ ಎಷ್ಟು ರನ್‌ ಗಳಿಸಲಿದೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚಿದೆ.

ಆಫ್ರಿಕಾಕ್ಕೆ ಆಮ್ಲಾ ಬಲ: ಇಂಗ್ಲೆಂಡ್‌, ಬಾಂಗ್ಲಾದೇಶ ವಿರುದ್ಧ ಸೋಲುಂಡಿದ್ದ ದ.ಆಫ್ರಿಕಾ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದೆ. ಆದರೂ ಆರಂಭಿಕ ಬ್ಯಾಟ್ಸ್‌ಮನ್‌ ಹಾಶೀಂ ಆಮ್ಲಾ ಫಿಟ್‌ ಆಗಿದ್ದು, ಪಂದ್ಯಕ್ಕೆ ಲಭ್ಯರಿದ್ದಾರೆ ಎನ್ನುವ ಸುದ್ದಿ ಹರಿಣ ಪಾಳೆಯದಲ್ಲಿ ಸಂತಸ ಮೂಡಿಸಿದೆ. ಕ್ವಿಂಟನ್‌ ಡಿ ಕಾಕ್‌, ನಾಯಕ ಫಾಫ್‌ ಡುಪ್ಲೆಸಿ, ಜೆ.ಪಿ.ಡುಮಿನಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ. ಮಧ್ಯಮ ಕ್ರಮಾಂಕ ದುರ್ಬಲವಾಗಿ ತೋರುತ್ತಿದ್ದು, ಈ ಪಂದ್ಯದಲ್ಲೂ ಸಮಸ್ಯೆ ಎದುರಿಸಿದರೆ ಅಚ್ಚರಿಯಿಲ್ಲ. ಕಗಿಸೋ ರಬಾಡ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, 40 ವರ್ಷದ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಮೇಲೆ ಎಲ್ಲರ ಕಣ್ಣಿದೆ.

2011ರ ಬಳಿಕ ಆಫ್ರಿಕಾ ಮೇಲೆ ಭಾರತ ಸವಾರಿ

2011ರ ಏಕದಿನ ವಿಶ್ವಕಪ್‌ ಬಳಿಕ ಭಾರತ ತಂಡ ಐಸಿಸಿ ಟೂರ್ನಿಗಳಲ್ಲಿ ದ.ಆಫ್ರಿಕಾ ವಿರುದ್ಧ ಸೋಲು ಕಂಡಿಲ್ಲ. 2012ರ ಟಿ20 ವಿಶ್ವಕಪ್‌, 2013ರ ಚಾಂಪಿಯನ್ಸ್‌ ಟ್ರೋಫಿ, 2014ರ ಟಿ20 ವಿಶ್ವಕಪ್‌, 2015ರ ಏಕದಿನ ವಿಶ್ವಕಪ್‌, 2017ರ ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳಲ್ಲಿ ದ.ಆಫ್ರಿಕಾ ವಿರುದ್ಧ ಭಾರತ ಜಯ ಸಾಧಿಸಿದೆ.

ಪಿಚ್‌ ರಿಪೋರ್ಟ್‌

ಮೋಡ ಕವಿದ ವಾತಾವರಣ, ಸಣ್ಣ ಪ್ರಮಾಣದ ಮಳೆ ನಿರೀಕ್ಷೆ ಇದ್ದು ಪಿಚ್‌ ವೇಗಿಗಳಿಗೆ ನೆರವು ನೀಡಬಹುದು. ಸಾಮಾನ್ಯವಾಗಿ ರೋಸ್‌ ಬೌಲ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿರಲಿದ್ದು, ಹಲವು ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಲಾಭ ಜಾಸ್ತಿ ಎನ್ನಲಾಗಿದೆ.


ಒಟ್ಟು ಮುಖಾಮುಖಿ: 83

ಭಾರತ: 34

ದ.ಆಫ್ರಿಕಾ: 46

ರದ್ದು: 03

ವಿಶ್ವಕಪ್‌ನಲ್ಲಿ ಭಾರತ vs ದ.ಆಫ್ರಿಕಾ

ಪಂದ್ಯ: 04

ಭಾರತ: 01

ದ.ಆಫ್ರಿಕಾ: 03

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ(ನಾಯಕ), ಕೆ.ಎಲ್‌.ರಾಹುಲ್‌, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ.

ದ.ಆಫ್ರಿಕಾ: ಕ್ವಿಂಟನ್‌ ಡಿ ಕಾಕ್‌, ಹಾಶೀಂ ಆಮ್ಲಾ, ಏಡನ್‌ ಮಾರ್ಕ್ರಮ್‌, ಫಾಫ್‌ ಡು ಪ್ಲೆಸಿ (ನಾಯಕ), ರಸ್ಸಿ ವಾನ್‌ ಡುಸ್ಸೆನ್‌, ಜೆ.ಪಿ.ಡುಮಿನಿ, ಕ್ರಿಸ್‌ ಮೋರಿಸ್‌, ಆ್ಯಂಡಿಲೆ ಫೆಲುಕ್ವಾಯೋ, ಕಗಿಸೋ ರಬಾಡ, ಡ್ವೇನ್‌ ಪ್ರಿಟೋರಿಯಸ್‌, ಇಮ್ರಾನ್‌ ತಾಹಿರ್‌.

ಸ್ಥಳ: ಸೌಥಾಂಪ್ಟನ್‌

ಆರಂಭ: ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1