ನಾಟಿಂಗ್‌ಹ್ಯಾಮ್[ಜೂ.03]: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್’ನ 5ನೇ ದಿನವಾದ ಸೋಮವಾರ ಆತಿಥೇಯ ಇಂಗ್ಲೆಂಡ್ ಹಾಗೂ ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗು ಬಡಿದು ಶುಭಾರಂಭ ಮಾಡಿರುವ ಆತಿಥೇಯ ಇಂಗ್ಲೆಂಡ್ ಇದೀಗ ಪಾಕಿಸ್ತಾನ ವಿರುದ್ಧ ಮತ್ತೊಂದು ಗೆಲುವಿನ ಲೆಕ್ಕಚಾರದಲ್ಲಿ ಕಣಕ್ಕಿಳಿಯುತ್ತಿದೆ. ಅತ್ತ ಕಳಪೆ ಫಾರ್ಮ್‌ನಲ್ಲಿರುವ ಪಾಕಿಸ್ತಾನ, ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿ, ಟೂರ್ನಿಯಲ್ಲಿ ಜಯದ ಖಾತೆ ತೆರೆಯುವ ಉತ್ಸಾಹದಲ್ಲಿದೆ. ಇಂಗ್ಲೆಂಡ್ ತಂಡ ಪ್ರಚಂಡ ಬ್ಯಾಟ್ಸ್‌ಮನ್’ಗಳನ್ನು ಹೊಂದಿದ್ದರೆ, ಪಾಕಿಸ್ತಾನ ಅದ್ಭುತ ಬೌಲರ್’ಗಳ ಪಡೆಯನ್ನು ಹೊಂದಿದೆ. ಇಂಗ್ಲೆಂಡ್ ತಂಡದಲ್ಲಿ ಹೊಡಿಬಡಿ ದಾಂಡಿಗರೇ ಹೆಚ್ಚಾಗಿದ್ದಾರೆ. ಜೇಸನ್ ರಾಯ್, ಜೋ ರೂಟ್, ಮಾರ್ಗನ್, ಸ್ಟೋಕ್ಸ್, ಬಟ್ಲರ್ ವರ್ಸಸ್ ಮೊಹಮದ್ ಅಮೀರ್, ವಹಾಬ್ ರಿಯಾಜ್, ಶಾಹಿನ್ ಅಫ್ರಿದಿ, ಹಸನ್ ಅಲಿ ನಡುವಿನ ಪೈಪೋಟಿ ಭಾರಿ ಕುತೂಹಲ ಮೂಡಿಸಿದೆ. 

ಬಲಾಢ್ಯ ಬ್ಯಾಟಿಂಗ್ ಪಡೆ: ವಿಶ್ವಕಪ್‌ಗೂ ಮುನ್ನವೇ ಪಾಕಿಸ್ತಾನವನ್ನು ಬಗ್ಗು ಬಡಿದ ಶ್ರೇಯ ಹೊಂದಿರುವ ಇಂಗ್ಲೆಂಡ್, ಪಾಕ್ ವಿರುದ್ಧ ಮತ್ತೊಮ್ಮೆ ಇದೇ ಮಾದರಿಯ ಫಲಿತಾಂಶಕ್ಕೆ ಎದುರು ನೋಡುತ್ತಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 104 ರನ್ ಗಳಿಂದ ಸೋಲಿಸಿದ ಇಂಗ್ಲೆಂಡ್, ಪಾಕ್ ವಿರುದ್ಧ ಮತ್ತದೇ ಭಾರೀ ಜಯದ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ. ಜೇಸನ್ ರಾಯ್, ಬೇರ್‌ಸ್ಟೋವ್, ರೂಟ್, ಮಾರ್ಗನ್, ಸ್ಟೋಕ್ಸ್, ಬಟ್ಲರ್, ಮೋಯಿನ್ ಅಲಿ ಅವರಂತಹ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಇಂಗ್ಲೆಂಡ್, ಪಾಕಿಸ್ತಾನ ತಂಡಕ್ಕೆ ಮಗ್ಗಲ ಮುಳ್ಳಾಗಿದೆ. ಈ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದರೆ, ಪಂದ್ಯದ ಫಲಿತಾಂಶವನ್ನು ಏಕಪಕ್ಷೀಯವಾಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮೊದಲ ಪಂದ್ಯದಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳು ಅರ್ಧಶತಕದ ಕಾಣಿಕೆ ನೀಡಿದ್ದರು. ಬಲಿಷ್ಠ ಬ್ಯಾಟಿಂಗ್ ಪಡೆಯ ಜತೆಗೆ ಉತ್ತಮ ವೇಗಿಗಳನ್ನು ಇಂಗ್ಲೆಂಡ್ ತಂಡ ಹೊಂದಿದೆ. ಕ್ರಿಸ್ ವೋಕ್ಸ್, ಯುವ ವೇಗಿ ಜೋಫ್ರಾ ಆರ್ಚರ್, ಪ್ಲಂಕೆಟ್, ಸ್ಟೋಕ್ಸ್ ಉತ್ತಮ ಲಯದ ಲ್ಲಿದ್ದಾರೆ. ಸ್ಪಿನ್ನರ್‌ಗಳಾದ ಆದಿಲ್ ರಶೀದ್ ಹಾಗೂ ಮೋಯಿನ್ ಅಲಿ ಇಂಗ್ಲೆಂಡ್‌ನ ಪ್ರಮುಖ ಟ್ರಂಪ್ ಕಾರ್ಡ್‌ಗಳಾಗಿದ್ದಾರೆ. .

ಕಳಪೆ ಲಯದಲ್ಲಿ ಪಾಕ್: ಸದ್ಯ ಪಾಕಿಸ್ತಾನ ತಂಡ ಕಳಪೆ ಲಯದಲ್ಲಿದೆ. ತಾನಾಡಿರುವ ಕಳೆದ 11 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ವಿಶ್ವಕಪ್ ಆರಂಭಕ್ಕೂ ಮುನ್ನ, ಆಸೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವೈಫಲ್ಯ ಕಂಡ ಪಾಕಿಸ್ತಾನ ಸೋಲಿಗೆ ಶರಣಾಯಿತು. ಆದರೆ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳಪೆ ಲಯದಲ್ಲಿ ಕಾಲಿಟ್ಟರೂ ಪಾಕಿಸ್ತಾನ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಇದೀಗ ಮತ್ತದೇ ಪವಾಡವನ್ನು ಸೃಷ್ಟಿಸುವ ಉತ್ಸುಕದಲ್ಲಿ ನಾಯಕ ಸರ್ಫರಾಜ್ ಬಳಗವಿದೆ.

ಇದೇ ಪಿಚ್‌ನಲ್ಲಿ ವಿಂಡೀಸ್ ವಿರುದ್ಧ ಕೇವಲ 105 ರನ್‌ಗಳಿಗೆ ಪಾಕಿಸ್ತಾನ ಆಲೌಟ್ ಆಗಿತ್ತು. ವಿಂಡೀಸ್ ವೇಗಿಗಳ ದಾಳಿಗೆ ನಲುಗಿದ ಪಾಕ್ ಅಲ್ಪ ಮೊತ್ತಕ್ಕೆ ಕುಸಿದಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂತಹದ್ದೇ ಕಳಪೆ ಪ್ರದರ್ಶನ ನೀಡಿದರೆ ಸೋಲು ಖಚಿತವಾಗಲಿದೆ. ಅಗ್ರ ಕ್ರಮಾಂಕದಲ್ಲಿ ಇಮಾಮ್ ಉಲ್ ಹಕ್, ಫಖರ್ ಜಮಾನ್, ಬಾಬರ್ ಅಜಾಂ, ಹ್ಯಾರೀಸ್ ಸೊಹೈಲ್ ಉತ್ತಮ ಆರಂಭ ದೊರಕಿಸ ಕೊಡಬೇಕಿದೆ. ಇಂಗ್ಲೆಂಡ್ ವೇಗಿಗಳನ್ನು ಸಮರ್ಥವಾಗಿ ಎದುರಿಸುವ ಅಗತ್ಯವಿದೆ. ಮಧ್ಯಮ ಕ್ರಮಾಂಕದಲ್ಲಿ ಹಫೀಜ್, ಇಮಾದ್ ಜವಾಬ್ದಾರಿ ಯುತ ಬ್ಯಾಟಿಂಗ್ ನಡೆಸಿದರೆ, ದೊಡ್ಡ ಮೊತ್ತ ದಾಖಲಿಸಬಹುದಾಗಿದೆ. ಸರ್ಫರಾಜ್’ರನ್ನು, ಮಾಜಿ ವೇಗಿ ಶೋಯೆಬ್ ಅಖ್ತರ್ ದಢೂತಿ ದೇಹ ಹೊಂದಿದವರು ಎಂದು ತೆಗಳಿದ್ದರೂ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಬೌಲಿಂಗ್‌ನಲ್ಲಿ ಅಮೀರ್, ಹಸನ್ ಅಲಿ, ವಹಾಬ್ ರಿಯಾಜ್ ಉತ್ತಮ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ್ದೇ ಆದಲ್ಲಿ ಪಾಕಿಸ್ತಾನಕ್ಕೆ ಗೆಲುವು ಒಲಿಯುವ ಸಾಧ್ಯತೆ ಇದೆ. ಪಾಕಿಸ್ತಾನ ಮೇಲ್ನೋಟಕ್ಕೆ ಕಳಪೆ ಫಾರ್ಮ್ ನಲ್ಲಿದ್ದರೂ, ಯಾವುದೇ ಕ್ಷಣದಲ್ಲೂ ಸಿಡಿದೆಳುವ ಸಾಮರ್ಥ್ಯಹೊಂದಿದೆ. ಈ ನಿಟ್ಟಿನಲ್ಲಿ ಆತಿಥೇಯರು ಪ್ರವಾಸಿ ಪಾಕಿಸ್ತಾನ ತಂಡವನ್ನು ಯಾವುದೇ ಕ್ಷಣದಲ್ಲೂ ಕಡೆಗಣಿಸುವಂತಿಲ್ಲ. ಒಟ್ಟಾರೆ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು, ಜಯ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...