ಸೌಥಾಂಪ್ಟನ್[ಜೂ.05]: ಮಣಿಕಟ್ಟು ಸ್ಪಿನ್ನರ್ ಯಜುವೇಂದ್ರ ಚಹಲ್[51/4] ಮಿಂಚಿನ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಕೇವಲ 227 ರನ್ ಬಾರಿಸಿದ್ದು, ಭಾರತಕ್ಕೆ ಸಾಧಾರಣ ಗುರಿ ನೀಡಿದೆ. 

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾಕ್ಕೆ ವೇಗಿ ಬುಮ್ರಾ ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ 24 ರನ್‌ಗಳಾಗುವಷ್ಟರಲ್ಲೇ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರು ಪೆವಿಲಿಯನ್ ಸೇರಿದ್ದರು. ಆ ಬಳಿಕ ಮೂರನೇ ವಿಕೆಟ್ ಗೆ ಜತೆಯಾದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವ್ಯಾನ್ ಡರ್ ಡ್ಯುಸೇನ್ ಜೋಡಿ 54 ರನ್ ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಆದರೆ 19ನೇ ಓವರ್’ನಲ್ಲಿ ಕೈಚಳಕ ತೋರಿಸಿದ ಚಹಲ್, ಒಂದೇ ಓವರ್’ನಲ್ಲಿ ವ್ಯಾನ್ ಡರ್ ಡ್ಯುಸೇನ್ ಹಾಗೂ ಫಾಫ್ ಡುಪ್ಲೆಸಿಸ್ ವಿಕೆಟ್ ಕಬಳಿಸುವ ಮೂಲಕ ಹರಿಣಗಳ ಪಡೆಗೆ ಶಾಕ್ ನೀಡಿದರು. ಈ ಆಘಾತದಿಂದ ಹೊರಬರುವ ಮುನ್ನವೇ ಕುಲ್ದೀಪ್ ಯಾದವ್ ಮತ್ತೊಂದು ಶಾಕ್ ನೀಡಿದರು. ಡುಮಿನಿ ಕೇವಲ 3 ರನ್ ಬಾರಿಸಿ ಎಲ್’ಬಿ ಬಲೆಗೆ ಬಿದ್ದರು. 

ಆಸರೆಯಾದ ಆಲ್ರೌಂಡರ್ಸ್: ಒಂದು ಹಂತದಲ್ಲಿ 89 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಫ್ರಿಕಾ ತಂಡಕ್ಕೆ ಡೇವಿಡ್ ಮಿಲ್ಲರ್[31], ಆಲ್ರೌಂಡರ್ ಗಳಾದ ಆ್ಯಂಡಿಲೆ ಫೆಲುಕ್ವಾಯೋ[34], ಕ್ರಿಸ್ ಮೋರಿಸ್[42] ಹಾಗೂ ಕಗಿಸೋ ರಬಾಡ ಅಜೇಯ 31 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು.

ಭಾರತ ಪರ ಬುಮ್ರಾ, ಭುವನೇಶ್ವರ್ ಕುಮಾರ್ 2, ಚಹಲ್ 4 ಹಾಗೂ ಕುಲ್ದೀಪ್ ಯಾದವ್ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ: 227/9
ಕ್ರಿಸ್ ಮೋರಿಸ್: 42
ಚಹಲ್: 51/4
[* ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮುಕ್ತಾಯದ ವೇಳೆಗೆ]