ನಾಟಿಂಗ್‌ಹ್ಯಾಮ್‌(ಜೂ.06): ಕಳೆದ 6 ತಿಂಗಳಲ್ಲಿ ಭಾರತೀಯ ಉಪಖಂಡದ ತಂಡಗಳ ವಿರುದ್ಧ ಸುಮಾರು 25 ಪಂದ್ಯಗಳನ್ನು ಆಡಿರುವ ಆಸ್ಪ್ರೇಲಿಯಾ ಸ್ಪಿನ್‌ ಬೌಲಿಂಗ್‌ ಎದುರಿಸುವತ್ತ ಹೆಚ್ಚಿನ ಗಮನ ಹರಿಸಿತ್ತು. ವಿಶ್ವಕಪ್‌ನ ಮೊದಲ ಪಂದ್ಯದಲ್ಲೂ ಆಫ್ಘಾನಿಸ್ತಾನದ ಸ್ಪಿನ್‌ ಜೋಡಿಗಳಾದ ರಶೀದ್‌ ಖಾನ್‌ ಹಾಗೂ ಮುಜೀಬ್‌ ವಿರುದ್ಧ ಯಶಸ್ಸು ಕಂಡಿದ್ದ ಆಸೀಸ್‌ ಬ್ಯಾಟ್ಸ್‌ಮನ್‌ಗಳು ದಿಢೀರನೆ ಪ್ರಚಂಡ ವೇಗಿಗಳ ದಾಳಿಯನ್ನು ಎದುರಿಸಲು ಸಜ್ಜಾಗಬೇಕಾದ ಅನಿವಾರ್ಯತೆಗೆ ಗುರಿಯಾಗಿದ್ದಾರೆ. 

ಗುರುವಾರ ವೆಸ್ಟ್‌ಇಂಡೀಸ್‌ ಹಾಗೂ ಆಸ್ಪ್ರೇಲಿಯಾ ತಂಡಗಳು ಇಲ್ಲಿನ ಟ್ರೆಂಟ್‌ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ಸೆಣಸಲಿದ್ದು, ಬೌನ್ಸರ್‌ ವೀರರ ನಡುವಿನ ಪೈಪೋಟಿ ಭಾರಿ ಕುತೂಹಲ ಮೂಡಿಸಿದೆ. ಜತೆಗೆ ಎರಡೂ ತಂಡಗಳಲ್ಲಿ ದೈತ್ಯ ಬ್ಯಾಟ್ಸ್‌ಮನ್‌ಗಳಿದ್ದು, ಸ್ಪರ್ಧೆ ಮತ್ತಷ್ಟು ಹೆಚ್ಚಾಗಲಿದೆ.

ವಿಶ್ವಕಪ್ 2019: ಬಾಂಗ್ಲಾ ಓಟಕ್ಕೆ ಬ್ರೇಕ್-ನ್ಯೂಜಿಲೆಂಡ್‌ಗೆ 2 ವಿಕೆಟ್ ಗೆಲುವು

ಒಶೇನ್‌ ಥಾಮಸ್‌, ಶೆಲ್ಡನ್‌ ಕಾಟ್ರೆಲ್‌, ಆ್ಯಂಡ್ರೆ ರಸೆಲ್‌, ಜೇಸನ್‌ ಹೋಲ್ಡರ್‌, ಕಾರ್ಲೋಸ್‌ ಬ್ರಾಥ್‌ವೇಟ್‌ರಂತಹ ಆರಡಿ ವೇಗಿಗಳನ್ನು ಹೊಂದಿರುವ ವಿಂಡೀಸ್‌, ಪಾಕಿಸ್ತಾನವನ್ನು ಕೇವಲ 105 ರನ್‌ಗಳಿಗೆ ಉರುಳಿಸಿತ್ತು. ಮತ್ತೊಂದೆಡೆ ಮಿಚೆಲ್‌ ಸ್ಟಾರ್ಕ್, ಪ್ಯಾಟ್‌ ಕಮಿನ್ಸ್‌, ನೇಥನ್‌ ಕೌಲ್ಟರ್‌-ನೈಲ್‌ರಂತಹ ಪರಿಣಾಮಕಾರಿ ವೇಗಿಗಳು ಆಸ್ಪ್ರೇಲಿಯಾದ ಬಲ ಹೆಚ್ಚಿಸಲಿದ್ದಾರೆ.

ಕ್ರಿಸ್‌ ಗೇಲ್‌, ಶಾಯ್‌ ಹೋಪ್‌, ಶಿಮ್ರೊನ್‌ ಹೆಟ್ಮೇಯರ್‌, ರಸೆಲ್‌ ವಿಂಡೀಸ್‌ ಬ್ಯಾಟಿಂಗ್‌ನ ಬಲ ಎನಿಸಿದರೆ, ಡೇವಿಡ್‌ ವಾರ್ನರ್‌, ಆ್ಯರೋನ್‌ ಫಿಂಚ್‌, ಸ್ಟೀವ್‌ ಸ್ಮಿತ್‌, ಉಸ್ಮಾನ್‌ ಖವಾಜ, ಗ್ಲೆನ್‌ ಮ್ಯಾಕ್ಸ್‌ವೆಲ್‌ರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಆಸ್ಪ್ರೇಲಿಯಾ ಹೊಂದಿದೆ. ಈ ಪಂದ್ಯ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ಉಣಬಡಿಸಲಿದೆ.

ಪಿಚ್‌ ರಿಪೋರ್ಟ್‌

ಟ್ರೆಂಟ್‌ ಬ್ರಿಡ್ಜ್‌ ಮೈದಾನದ ಪಿಚ್‌ ಉತ್ತಮ ಬೌನ್ಸ್‌ ಹೊಂದಿದ್ದು, ಬ್ಯಾಟ್ಸ್‌ಮನ್‌ಗಳಿಗೆ ರನ್‌ ಗಳಿಸಲು ಸವಾಲು ಎದುರಾಗಲಿದೆ. ವೇಗಿಗಳ ಪಾತ್ರ ಪ್ರಮುಖವೆನಿಸಲಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇದೆ.

ವಿಶ್ವಕಪ್‌ನಲ್ಲಿ ಆಸೀಸ್‌ vs ವಿಂಡೀಸ್‌

ಪಂದ್ಯ: 09

ಆಸ್ಪ್ರೇಲಿಯಾ: 04

ವಿಂಡೀಸ್‌: 05

ಸಂಭವನೀಯ ಆಟಗಾರರ ಪಟ್ಟಿ

ಆಸ್ಪ್ರೇಲಿಯಾ: ಫಿಂಚ್‌ (ನಾಯಕ), ವಾರ್ನರ್‌, ಸ್ಮಿತ್‌, ಖವಾಜ, ಮ್ಯಾಕ್ಸ್‌ವೆಲ್‌, ಸ್ಟೋಯ್ನಿಸ್‌, ಕಾರ್ರಿ, ಕೌಲ್ಟರ್‌ ನೈಲ್‌, ಕಮಿನ್ಸ್‌, ಸ್ಟಾರ್ಕ್, ಜಂಪಾ

ವಿಂಡೀಸ್‌: ಗೇಲ್‌, ಹೋಪ್‌, ಬ್ರಾವೋ, ಪೂರನ್‌, ಹೆಟ್ಮೇಯರ್‌, ರಸೆಲ್‌, ಹೋಲ್ಡರ್‌ (ನಾಯಕ), ಬ್ರಾಥ್‌ವೇಟ್‌, ನರ್ಸ್‌, ಕಾಟ್ರಿಲ್‌, ಥಾಮಸ್‌.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ, 

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...