ನಾಟಿಂಗ್‌ಹ್ಯಾಮ್(ಜೂ.06): ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸತತ 2ನೇ ಗೆಲುವು ದಾಖಲಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ 15 ರನ್ ಗೆಲುವು ಸಾಧಿಸಿದೆ. ನಥನ್ ಕೌಲ್ಟರ್ ನೈಲ್, ಸ್ಟೀವ್ ಸ್ಮಿತ್ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿಯಿಂದ ಆಸಿಸ್ ಗೆಲುವಿನ ನಗೆ ಬೀರಿದೆ. 

ಗೆಲುವಿಗೆ 289 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ಆರಂಭದಲ್ಲೇ ಇವಿನ್ ಲಿವಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಲಿವಿಸ್ ಕೇವಲ 1 ರನ್ ಸಿಡಿಸಿ ಔಟಾದರು. ಇನ್ನು ಕ್ರಿಸ್ ಗೇಲ್ 4 ಬೌಂಡರಿ ಸಿಡಿಸಿದರೂ ಸ್ಫೋಟಿಸೋ ಸೂಚನೆ ನೀಡಲಿಲ್ಲ. ಗೇಲ್ 21 ರನ್ ಸಿಡಿಸಿ ಔಟಾದರು.

ಶೈ ಹೋಪ್ ಹಾಗೂ ನಿಕೋಲಸ್ ಪೂರನ್ ಜೊತೆಯಾಟದಿಂದ ವೆಸ್ಟ್ ಇಂಡೀಸ್ ತಿರುಗೇಟು ನೀಡೋ ಸೂಚನೆ ನೀಡಿತು. ಆದರೆ ಪೂರನ್ 40 ರನ್ ಸಿಡಿಸಿ ಔಟಾದರು. ಶಿಮ್ರೊನ್ ಹೆಟ್ಮೆಯರ್ 21 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಅರ್ಧಶತಕ ಸಿಡಿಸಿ ಮುನ್ನಗ್ಗುತ್ತಿದ್ದ ಶೈ ಹೋಪ್ 68 ರನ್ ಸಿಡಿಸಿ ಔಟಾದರು.

ನಾಯಕ ಜಾಸನ್ ಹೋಲ್ಡರ್ ಹೋರಾಟ ಮುಂದುವರಿಸಿದರು. ಆದರೆ ಆ್ಯಂಡ್ರೆ ರಸೆಲ್ 15 ರನ್ ಸಿಡಿಸಿ ಔಟಾದರು. ಕಾರ್ಲೋಸ್ ಬ್ರಾಥ್ವೈಟ್ 16 ರನ್ ಸಿಡಿಸಿ ಔಟಾದರು. ಹಾಫ್ ಸೆಂಚುರಿ ಸಿಡಿಸಿದ ಜಾಸನ್ ಹೋಲ್ಡರ್ 51 ರನ್‌ಗೆ ಆಟ ಮುಗಿಸಿದರು. ಅಷ್ಟರಲ್ಲೇ ವಿಂಡೀಸ್ ಗೆಲುವಿನ ಹಾದಿ ಮತ್ತಷ್ಟು ಕಠಿಣವಾಯಿತು. 

ಶೆಲ್ಡಾನ್ ಕಾಟ್ರೆಲ್‌ 1ರನ್ ಸಿಡಿಸಿ ಔಟಾದರು. ಆಶ್ಲೇ ನರ್ಸ್ ಹಾಗೂ ಒಶಾನೆ ಥೋಮಸ್ ಹೋರಾಟ ನಡೆಸಿದರೂ ಗೆಲುವು ಸಿಗಲಿಲ್ಲ. ವೆಸ್ಟ್ ಇಂಡೀಸ್ 9 ವಿಕೆಟ್ ನಷ್ಟಕ್ಕೆ 273 ರನ್ ಸಿಡಿಸಿತು. ಈ ಮೂಲಕ ಆಸ್ಟ್ರೇಲಿಯಾ 15 ರನ್ ಗೆಲುವು ಸಾಧಿಸಿತು.