ಸೌಥಾಂಪ್ಟನ್(ಜೂ.06): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿದ ಕೊಹ್ಲಿ ಸೈನ್ಯ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮೊದಲ ಪಂದ್ಯ ಹಲವು ಕಾರಣಗಳಿಂದ ಅಭಿಮಾನಿಗಳಿಗೆ ಸ್ಮರಣೀಯವಾಗಿದೆ. ಒಂದಡೆ ರೋಹಿತ್ ಶರ್ಮಾ ಶತಕ, ಟೀಂ ಇಂಡಿಯಾ ಬೌಲರ್‌ಗಳ ಪ್ರದರ್ಶನ ಅತ್ಯುತ್ತಮವಾಗಿತ್ತು. ಮತ್ತೊಂದು ವಿಶೇಷ ಅಂದರೆ ಇದೇ ಪಂದ್ಯದಲ್ಲಿ ಎಂ.ಎಸ್.ಧೋನಿ ಕೀಪರ್ ಗ್ಲೌಸ್ ಕೂಡ ಭಾರಿ ಗಮನಸೆಳೆದಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಮಣಿಸಿ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ ಭಾರತ!

ಎಂ.ಎಸ್.ಧೋನಿ ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಸೇನೆಯ ಬಲಿದಾನದ ಲಾಂಛನ ಇದೆ. ಸೌತ್ ಆಫ್ರಿಕಾದ ಆ್ಯಂಡಿ ಫೆಲುಕ್‌ವಾಯೋ ಸ್ಟಂಪ್ ಮಾಡಿದ ಸಂದರ್ಭದಲ್ಲಿ ಧೋನಿ ಗ್ಲೌಸ್ ಎಲ್ಲರ ಗಮನಸೆಳೆದಿದೆ. ಧೋನಿ ಗ್ಲೌಸ್‌ನಲ್ಲಿ ಸೇನೆಯ ಬಲಿದಾನದ ಲಾಂಛವನ್ನು ಹಾಕಿಸಿಕೊಂಡಿದ್ದಾರೆ. ಈ ಮೂಲಕ ಸೇನೆಗೆ ಗೌರವ ಸಲ್ಲಿಸಿದ್ದಾರೆ.

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕಲೋನೆಲ್ ಗೌರವ್ ಹುದ್ದೆ ಹೊಂದಿರುವ ಧೋನಿ, ಪ್ಯಾರಾ ರೆಜಿಮೆಂಟ್ ಟ್ರೂಪ್‌ನಲ್ಲಿ ಸಕ್ರೀಯರಾಗಿದ್ದಾರೆ. ಇದೀಗ ತಮ್ಮ ಗ್ಲೌಸ್‌ನಲ್ಲೂ ಆರ್ಮಿ ಲಾಂಛನ ಹಾಕಿಸಿಕೊಂಡು ಗೌರವ ನೀಡಿದ್ದಾರೆ. ಧೋನಿ ಕಾರ್ಯಕ್ಕೆ ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.