ಟಾಂಟನ್[ಜೂ.09]: ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿದೆ. 

ಶನಿವಾರ ಇಲ್ಲಿ ನಡೆದ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ಮಳೆಯ ಅಡಚಣೆಯ ನಡುವೆಯೂ 41.1 ಓವರ್’ಗಳಲ್ಲಿ ಹಸ್ಮತುಲ್ಲಾ ಶಾಹಿದಿ[59] ಆಕರ್ಷಕ ಅರ್ಧಶತಕದ ನೆರವಿನಿಂದ 172 ರನ್ ಬಾರಿಸಿತ್ತು. ಜೇಮ್ಸ್ ನೀಶಮ್ 5 ವಿಕೆಟ್ ಕಬಳಿಸಿ ಅಫ್ಘನ್ ಬೃಹತ್ ಮೊತ್ತದ ಕನಸಿಗೆ ಬ್ರೇಕ್ ಹಾಕಿದ್ದರು.

ಸುಲಭ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಮೊದಲ ಎಸೆತದಲ್ಲೇ ಆಘಾತ ಅನುಭವಿಸಿತು. ಗಪ್ಟಿಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಮತ್ತೋರ್ವ ಆರಂಭಿಕ ಕಾಲಿನ್ ಮನ್ರೋ 22 ರನ್ ಬಾರಿಸಿ ಆಫ್ತಾಬ್ ಆಲಂಗೆ ಎರಡನೇ ಬಲಿಯಾದರು. ಆ ಬಳಿಕ ಮೂರನೇ ವಿಕೆಟ್’ಗೆ ಜತೆಯಾದ ರಾಸ್ ಟೇಲರ್-ನಾಯಕ ಕೇನ್ ವಿಲಿಯಮ್ಸನ್ ಜೋಡಿ 89 ರನ್ ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಟೇಲರ್ 48 ರನ್ ಬಾರಿಸಿ ಆಫ್ತಾಬ್ ಗೆ ಮೂರನೇ ಬಲಿಯಾದರು. ನೆಲಕಚ್ಚಿ ಆಡಿದ ನಾಯಕ ಕೇನ್ ವಿಲಿಯಮ್ಸನ್ 99 ಎಸೆತಗಳಲ್ಲಿ 9 ಬೌಂಡರಿ ಸಹಿತ 79 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್:
ಆಫ್ಘಾನಿಸ್ತಾನ: 172/10
ಹಸ್ಮತುಲ್ಲಾ ಶಾಹಿದಿ 59
ಜೇಮ್ಸ್ ನೀಶಮ್: 31/5

ನ್ಯೂಜಿಲೆಂಡ್: 173/03
ಕೇನ್ ವಿಲಿಯಮ್ಸನ್: 79
ಆಫ್ತಾಬ್ ಆಲಂ: 45/3