Women's Hockey World Cup: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ರೋಚಕ ಸೋಲು

* ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಆಘಾತಕಾರಿ ಸೋಲು
* ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ವಿಫಲವಾದ ಭಾರತ
* 'ಬಿ' ಗುಂಪಿನಲ್ಲಿ 3ನೇ ಸ್ಥಾನ ಪಡೆದ ಭಾರತ ಮಹಿಳಾ ಹಾಕಿ ತಂಡ

Womens Hockey World Cup India third in pool B after New Zealand loss kvn

ಆ್ಯಮ್ಸ್‌ಸ್ಟಲ್ವೀನ್‌(ಜು.09): ನ್ಯೂಜಿಲೆಂಡ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ದೊರೆತ 15 ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಕೇವಲ ಒಂದರಲ್ಲಿ ಗೋಲು ಗಳಿಸಿ ನಿರಾಸೆ ಮೂಡಿಸಿದ ಭಾರತ ತಂಡ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ (Women's Hockey World Cup) ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ವಿಫಲವಾಗಿದೆ. ‘ಬಿ’ ಗುಂಪಿನ ಅಂತಿಮ ಪಂದ್ಯದಲ್ಲಿ 3-4 ಗೋಲುಗಳ ಸೋಲು ಕಂಡ ಭಾರತ 3ನೇ ಸ್ಥಾನಕ್ಕೆ ತೃಪ್ತಿಪಟ್ಟು ಕ್ರಾಸ್‌ ಓವರ್‌ ಪಂದ್ಯದಲ್ಲಿ ಆಡಬೇಕಾದ ಅನಿವಾರ್ಯತೆಗೆ ಸಿಲುಕಿತು.

ಅಗ್ರಸ್ಥಾನ ಪಡೆದ ನ್ಯೂಜಿಲೆಂಡ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ನೆದರ್‌ಲೆಂಡ್‌್ಸ, ಅರ್ಜೆಂಟೀನಾ ಮತ್ತು ಆಸ್ಪ್ರೇಲಿಯಾ ತಂಡಗಳು ತಮ್ಮ ತಮ್ಮ ಗುಂಪುಗಳಲ್ಲಿ ಮೊದಲ ಸ್ಥಾನ ಪಡೆದು ಅಂತಿಮ 8ರ ಸುತ್ತಿಗೆ ನೇರ ಪ್ರವೇಶ ಪಡೆದವು. ಗುಂಪಿನಲ್ಲಿ 2ನೇ ಮತ್ತು 3ನೇ ಸ್ಥಾನ ಪಡೆದ ತಂಡಗಳು ಕ್ವಾರ್ಟರ್‌ ಫೈನಲ್‌ ಅರ್ಹತೆಗಾಗಿ ಕ್ರಾಸ್‌ ಓವರ್‌ ಪಂದ್ಯಗಳನ್ನು ಆಡಬೇಕಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತಕ್ಕೆ ಸ್ಪೇನ್‌ ಸವಾಲು ಎದುರಾಗಲಿದ್ದು, ಗೆದ್ದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ ಸಿಗಲಿದೆ.

ಬಹುಮಾನ ಮೊತ್ತ, ಪಿಂಚಣಿಗಾಗಿ ಆನ್‌ಲೈನ್‌ ಪೋರ್ಟಲ್‌ ಆರಂಭ

ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯ ಕ್ರೀಡಾಪಟುಗಳ ನಗದು ಬಹುಮಾನ ಮತ್ತು ಮಾಜಿ ಕ್ರೀಡಾಪಟುಗಳ ಪಿಂಚಣಿ ವ್ಯವಸ್ಥೆಗಾಗಿ ಆನ್‌ಲೈನ್‌ ಪೋರ್ಟಲ್‌ ಆರಂಭಿಸಿದೆ. ಅರ್ಹ ಅಥ್ಲೀಟ್‌ಗಳು ಇನ್ನು ಮುಂದೆ ಕ್ರೀಡಾ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಚಿವಾಲಯವು ಈ ಯೋಜನೆ ರೂಪಿಸಿದ್ದು, ಇದೊಂದು ಕ್ರಾಂತಿಕಾರಿ ಬೆಳವಣಿಗೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಬಣ್ಣಿಸಿದ್ದಾರೆ.

ಮಹಿಳಾ ಹಾಕಿ ವಿಶ್ವಕಪ್: ಭಾರತ-ಚೀನಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ

ಶುಕ್ರವಾರ ಠಾಕೂರ್‌, ತಮ್ಮ ಇಲಾಖೆಯ ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದರು. ಕ್ರೀಡಾ ಇಲಾಖೆಯ ಯೋಜನೆಗಳಿಗಾಗಿ ಆನ್‌ಲೈನ್‌ ಪೋರ್ಟಲ್‌, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ(ಎನ್‌ಎಸ್‌ಡಿಎಫ್‌)ಗಾಗಿ ವೆಬ್‌ಸೈಟ್‌, ರಾಷ್ಟ್ರೀಯ ಕಲ್ಯಾಣ ಮತ್ತು ಕ್ರೀಡಾಪಟುಗಳಿಗೆ ಪಿಂಚಣಿಗಳ ಪರಿಷ್ಕೃತ ಯೋಜನೆಗಾಗಿ ವೆಬ್‌ಸೈಟ್‌ ಲೋಕಾರ್ಪಣೆ ಮಾಡಿದರು. ಮೊದಲು ಅಥ್ಲೀಟ್‌ಗಳು ಕ್ರೀಡಾ ಫೆಡರೇಶನ್‌ ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಹೋಗಬೇಕಿತ್ತು. ಇನ್ನು ತಮಗೆ ಸಿಗಬೇಕಾದ ಸರ್ಕಾರದ ಯಾವುದೇ ಯೋಜನೆಗಳಿಗಾಗಿ ಆನ್‌ಲೈನ್‌ ಮೂಲಕವೇ ಮನವಿ ಸಲ್ಲಿಸಬಹುದು’ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಪಿಂಚಣಿಗಾಗಿ ಅಲೆದಾಡಬೇಕಾದ ಅಗತ್ಯವೂ ಇನ್ನು ಇರುವುದಿಲ್ಲ ಎಂದಿದ್ದಾರೆ.

ಸೆಪ್ಟೆಂಬರ್ 27ರಿಂದ ಗುಜರಾತ್‌ನಲ್ಲಿ ರಾಷ್ಟ್ರೀಯ ಕ್ರೀಡಾಕೂಟ

ಅಹಮದಾಬಾದ್‌: 36ನೇ ರಾಷ್ಟ್ರೀಯ ಕ್ರೀಡಾಕೂಟವು ಈ ವರ್ಷ ಸೆ.27ರಿಂದ ಅ.10ರ ವರೆಗೂ ಗುಜರಾತ್‌ನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ರಾಜ್ಯ ಕ್ರೀಡಾಕೂಟಕ್ಕೆ ಆತಿಥ್ಯ ನೀಡಲಿದ್ದು, ಬಹಳ ಖುಷಿ ತಂದಿದೆ ಎಂದು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಹೇಳಿದ್ದಾರೆ. ಅಹಮದಾಬಾದ್‌, ಗಾಂಧಿನಗರ, ಸೂರತ್‌, ವಡೋದರ, ರಾಜ್‌ಕೋಟ್‌ ಮತ್ತು ಭಾವ್‌ನಗರ್‌ನಲ್ಲಿ ಸ್ಪರ್ಧೆಗಳು ನಡೆಯಲಿವೆ. 34 ಕ್ರೀಡೆಗಳಲ್ಲಿ ಒಟ್ಟು 7000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದ ಆವೃತ್ತಿಯ ಕ್ರೀಡಾಕೂಟವು 2015ರಲ್ಲಿ ಕೇರಳದಲ್ಲಿ ನಡೆದಿತ್ತು. ಕೋವಿಡ್‌ ಸೇರಿ ವಿವಿಧ ಕಾರಣಗಳಿಂದ 7 ವರ್ಷಗಳ ಬಳಿಕ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ.

Latest Videos
Follow Us:
Download App:
  • android
  • ios