ಮಹಿಳಾ ಹಾಕಿ ವಿಶ್ವಕಪ್: ಭಾರತ-ಚೀನಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ
* ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಡ್ರಾ ಸಾಧಿಸಿದ ಭಾರತ
* ಚೀನಾ ಎದುರು ಡ್ರಾ ಮಾಡಿಕೊಂಡ ಸವಿತಾ ಪೂನಿಯಾ ಪಡೆ
* ಬಿ ಗುಂಪಿನಲ್ಲಿ ಭಾರತ ಅಗ್ರಸ್ಥಾನ ಪಡೆಯುವುದು ಅನುಮಾನ
ಆ್ಯಮ್‌ಸ್ಟಲ್ವೀನ್(ಜು.06): ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ (Women's Hockey World Cup) ಭಾರತ ತಂಡ ಸತತ 2ನೇ ಡ್ರಾಗೆ ತೃಪ್ತಿಪಟ್ಟಿದೆ. ಮಂಗಳವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಚೀನಾ ವಿರುದ್ಧ 1-1 ಗೋಲಿನಲ್ಲಿ ಡ್ರಾ ಸಾಧಿಸಿತು. ಪಂದ್ಯದುದ್ದಕ್ಕೂ ಸಮಬಲದ ಹೋರಾಟ ಪ್ರದರ್ಶಿಸಿದ ಉಭಯ ತಂಡಗಳು ಗೆಲುವಿನ ಖಾತೆ ತೆರೆಯಲು ವಿಫಲವಾದವು. ಇದರೊಂದಿಗೆ ಭಾರತ ಗುಂಪಿನಲ್ಲಿ ಮೊದಲ ಸ್ಥಾನ ಪಡೆದು ನೇರವಾಗಿ ಕ್ವಾರ್ಟರ್‌ಗೇರುವ ಸಾಧ್ಯತೆ ಕಡಿಮೆ.
ಪಂದ್ಯದ 26ನೇ ನಿಮಿಷದಲ್ಲಿ ಝೆಂಗ್ ಚೀನಾ ಪರ ಗೋಲು ಬಾರಿಸಿದರು. 45ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ವಂದನಾ ಕಟಾರಿಯಾ ಗೋಲು ಗಳಿಸಿದರು. ಟೂರ್ನಿಯಲ್ಲಿ ಇದು ಅವರ 2ನೇ ಗೋಲು. ಈ ಪಂದ್ಯದಲ್ಲೂ ಭಾರತ ಪೆನಾಲ್ಟಿಕಾರ್ನರ್‌ಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಹಲವು ಅವಕಾಶಗಳನ್ನು ವ್ಯರ್ಥಗೊಳಿಸಿತು. ಭಾರತ ಗುಂಪು ಹಂತದ ಕೊನೆ ಪಂದ್ಯದಲ್ಲಿ ಗುರುವಾರ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
ಮಿಶ್ರ ಡಬಲ್ಸ್ ಸೆಮೀಸ್‌ಗೆ ಸಾನಿಯಾ-ಪಾವಿಚ್ ಜೋಡಿ
ಲಂಡನ್: ಈ ಋುತುವಿನ ಅಂತ್ಯದಲ್ಲಿ ಟೆನಿಸ್‌ನಿಂದ ನಿವೃತ್ತಿ ಪಡೆಯಲಿರುವ ಭಾರತದ ತಾರಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಂಬಲ್ಡನ್ ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ರೊವೇಷಿಯಾದ ಮೇಟ್ ಪಾವಿಚ್ ಜೊತೆ ಆಡುತ್ತಿರುವ ಸಾನಿಯಾ ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಗೇಬ್ರಿಯಾಲಾ ದಬ್ರೌಸ್ಕಿ ಮತ್ತು ಆಸ್ಪ್ರೇಲಿಯಾದ ಜಾನ್ ಪಿಯರ್ಸ್ ವಿರುದ್ಧ 6-4, 3-6, 7-5 ಸೆಟ್‌ಗಳಲ್ಲಿ ಜಯಗಳಿಸಿದರು. ಇದೇ ಮೊದಲ ಬಾರಿಗೆ ಸಾನಿಯಾ ವಿಂಬಲ್ಡನ್ ಮಿಶ್ರ ಡಬಲ್ಸ್ ಸೆಮೀಸ್‌ಗೇರಿದ್ದಾರೆ. 2011, 2013, 2015ರಲ್ಲಿ ಕ್ವಾರ್ಟರ್‌ಗೇರಿದ್ದರು.
Wimbledon: ಜೋಕೋವಿಚ್ 11ನೇ ಬಾರಿಗೆ ವಿಂಬಲ್ಡನ್ ಸೆಮೀಸ್‌ಗೆ ಲಗ್ಗೆ
ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಚ್ (Novak Djokovic) ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ 11ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದು, 7ನೇ ಚಾಂಪಿಯನ್ ಪಟ್ಟದತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕಳೆದ ಮೂರು ಆವೃತ್ತಿಗಳಲ್ಲಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ 3ನೇ ಶ್ರೇಯಾಂಕಿತ ಜೋಕೋವಿಚ್ ಇದೀಗ ಭರ್ಜರಿಯಾಗಿಯೇ ಸಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇನ್ನು, ಈ ವರ್ಷದ 3ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅಗ್ರ ಶ್ರೇಯಾಂಕಿತ ಟೆನಿಸಿಗ ರಾಫೆಲ್ ನಡಾಲ್ (Rafael Nadal) ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಟೂರ್ನಿಯಲ್ಲಿ 3ನೇ ಬಾರಿ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದಾರೆ
ಜರ್ಮನ್ ಸ್ಕ್ವಾಶ್: ಅನಾಹತ್‌ಗೆ ಪ್ರಶಸ್ತಿ
ನವದೆಹಲಿ: ಭಾರತದ ಯುವ ಸ್ಕ್ವಾಶ್ ಪಟು ಅನಾಹತ್ ಸಿಂಗ್ ಜರ್ಮನಿಯ ಹಂಬಗ್‌ರ್‍ನಲ್ಲಿ ನಡೆದ ಜರ್ಮನ್ ಜೂನಿಯರ್ ಓಪನ್ ಸ್ಕ್ವಾಶ್ ಚಾಂಪಿಯನ್‌ಶಿಪ್ ಸೂಪರ್ ಸೀರಿಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಬಾಲಕಿಯರ ಅಂಡರ್-15 ವಿಭಾಗದ ಫೈನಲ್‌ನಲ್ಲಿ ಡೆಲ್ಲಿಯ 14 ವರ್ಷದ ಅನಾಹತ್ ಈಜಿಪ್ಟ್‌ನ ಮಲಕ್ ಸಮೀರ್ ವಿರುದ್ಧ 3-0 ಅಂತರದಲ್ಲಿ ಗೆದ್ದು ಚಾಂಪಿಯನ್ ಆದರು. ಇತ್ತೀಚೆಗೆ ಅವರು ಏಷ್ಯನ್ ಚಾಂಪಿಯನ್‌ಶಿಪ್ ಗೆದ್ದಿದ್ದರು.