ಹಾಕಿ: ಭಾರತಕ್ಕಿಂದು ಒಲಿಂಪಿಕ್ ಪರೀಕ್ಷೆ!
ಭಾರತ ಪುರುಷರ ಹಾಕಿ ತಂಡ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಇನ್ನು ಮಹಿಳಾ ತಂಡವು ಒಲಿಂಪಿಕ್ಸ್ ಅರ್ಹತೆಗಾಗಿ ಕಾದಾಡಲಿದ್ದು, ಅಚ್ಚರಿಯ ಫಲಿತಾಂಶ ಎದುರು ನೋಡುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಭುವನೇಶ್ವರ[ನ.01]: 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಲು ಕಾತರಿಸುತ್ತಿರುವ ಭಾರತ ಹಾಕಿ ತಂಡಗಳಿಗೆ ಶುಕ್ರವಾರ ಪರೀಕ್ಷೆ ಎದುರಾಗಲಿದೆ. ಅರ್ಹತಾ ಸುತ್ತಿನ ಮುಖಾಮುಖಿಯಲ್ಲಿ ಪುರುಷರ ತಂಡ ರಷ್ಯಾ ವಿರುದ್ಧ ಸೆಣಸಲಿದ್ದು, ಮಹಿಳೆಯರ ತಂಡಕ್ಕೆ ಅಮೆರಿಕ ಎದುರಾಗಲಿದೆ. ಒಟ್ಟು 2 ಪಂದ್ಯಗಳು ನಡೆಯಲಿದ್ದು, ಒಟ್ಟಾರೆ ಅತಿಹೆಚ್ಚು ಗೋಲು ಗಳಿಸುವ ತಂಡಕ್ಕೆ ಒಲಿಂಪಿಕ್ಸ್‌ಗೆ ಪ್ರವೇಶ ಸಿಗಲಿದೆ.
2020ರ ಒಲಿಂಪಿಕ್ಸ್‌ಗಿಲ್ಲ ಪಾಕಿಸ್ತಾನ ಹಾಕಿ ತಂಡ!
ವಿಶ್ವ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಪುರುಷರ ತಂಡಕ್ಕೆ, ವಿಶ್ವ ನಂ.22 ರಷ್ಯಾ ಸುಲಭದ ತುತ್ತಾಗುವ ನಿರೀಕ್ಷೆ ಇದೆ. ಮನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದು, ಕನ್ನಡಿಗ ಎಸ್.ವಿ.ಸುನಿಲ್, ರೂಪಿಂದರ್ ಪಾಲ್ ಸಿಂಗ್, ಬೀರೇಂದ್ರ ಲಾಕ್ರಾ, ಆಕಾಶ್‌ದೀಪ್, ಹರ್ಮನ್‌ಪ್ರೀತ್, ಗೋಲ್ ಕೀಪರ್ ಶ್ರೀಜೇಶ್‌ರಂತಹ ಅನುಭವಿ ಆಟಗಾರರ ಬಲವಿದೆ.
ಭಾರತ ಹಾಕಿ ತಂಡಕ್ಕೆ ಸುನಿಲ್ ಉಪನಾಯಕ
ಮಹಿಳಾ ತಂಡಕ್ಕೆ ಅಮೆರಿಕದಿಂದ ಕಠಿಣ ಸವಾಲು ಎದುರಾಗಲಿದೆ. ವಿಶ್ವ ನಂ.13 ಅಮೆರಿಕ ವಿರುದ್ಧ ಭಾರತ 4-22 ಗೆಲುವು-ಸೋಲಿನ ದಾಖಲೆ ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಣಿ ರಾಂಪಾಲ್ ನೇತೃತ್ವದ ಭಾರತ ತಂಡ ಅತ್ಯುತ್ತಮ ಲಯದಲ್ಲಿದ್ದು, ಗೆಲುವಿನ ವಿಶ್ವಾಸದಲ್ಲಿದೆ. ಇಲ್ಲಿನ ಕಳಿಂಗಾ ಕ್ರೀಡಾಂಗಣ 16,000 ಆಸನ ಸಾಮರ್ಥ್ಯ ಹೊಂದಿದ್ದು, ಆಯೋಜಕರ ಪ್ರಕಾರ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ.
ಪಂದ್ಯ: ಭಾರತ-ಅಮೆರಿಕ (ಮಹಿಳಾ ಪಂದ್ಯ): ಸಂಜೆ 6ಕ್ಕೆ,
ಭಾರತ-ರಷ್ಯಾ (ಪುರುಷರ ಪಂದ್ಯ): ರಾತ್ರಿ 8ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1