ಭಾರತ ಹಾಕಿಗೆ ಇನ್ನೂ 10 ವರ್ಷ ಒಡಿಶಾ ಸರ್ಕಾರ ಪ್ರಾಯೋಜಕತ್ವ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಯಾಡಿದ್ದ ಪುರುಷರ ಹಾಕಿ ತಂಡ
* ಇನ್ನು ಒಲಿಂಪಿಕ್ಸ್ ಸೆಮೀಸ್ ಪ್ರವೇಶಿಸಿ ದಾಖಲೆ ಬರೆದಿದ್ದ ರಾಣಿ ರಾಂಪಾಲ್ ಪಡೆ
* ಮತ್ತೆ 10 ವರ್ಷಗಳ ಕಾಲ ಹಾಕಿಗೆ ಪ್ರಾಯೋಜಕತ್ವ ನೀಡಲು ಮುಂದಾದ ಒಡಿಶಾ ಸರ್ಕಾರ
ಭುವನೇಶ್ವರ(ಆ.19): ಮುಂದಿನ 10 ವರ್ಷಗಳ ತನಕ ಭಾರತ ಹಾಕಿಗೆ ಪ್ರಾಯೋಜಕತ್ವವನ್ನು ಒಡಿಶಾ ಸರ್ಕಾರವೇ ವಹಿಸಿಕೊಳ್ಳಲಿದೆ ಎಂದು ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಹಾಕಿ ಆಟಗಾರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ತಲಾ 10 ಲಕ್ಷ ರು. ಬಹುಮಾನ ನೀಡಿದ ಅವರು, ಸಹಾಯಕ ಸಿಬ್ಬಂದಿಗೂ ತಲಾ 5 ಲಕ್ಷ ರುಪಾಯಿ ನೀಡುವುದಾಗಿ ಘೋಷಿಸಿದರು.
2018ರಿಂದ ಒಡಿಶಾ ಸರ್ಕಾರ ಭಾರತ ಹಾಕಿ ತಂಡಗಳ ಅಧಿಕೃತ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ತಂಡ 41 ವರ್ಷದ ಬಳಿಕ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಮಹಿಳಾ ತಂಡ ಸೆಮಿಫೈನಲ್‌ಗೆ ಲಗ್ಗೆಯಿಟ್ಟು ಇತಿಹಾಸ ನಿರ್ಮಿಸಿತ್ತು. 3ನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ವೀರೋಚಿತ ಸೋಲುಂಡು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ತಂಡದ ಈ ಐತಿಹಾಸಿಕ ಸಾಧನೆ ಹಿಂದೆ ಒಡಿಶಾ ಸರ್ಕಾರದ ಪಾತ್ರವೂ ಪ್ರಮುಖವಾಗಿದ್ದು, ಇದೀಗ ಮತ್ತೆ 10 ವರ್ಷಗಳ ಕಾಲ ಹೊಣೆ ಹೊತ್ತಿದೆ.
Tokyo 2020 ಭಾರತ ಹಾಕಿಗೆ ಚೈತನ್ಯ ತುಂಬಿದ್ದ ಒಡಿಶಾ ಸಿಎಂ ನವೀನ್ ಪಟ್ನಾಯಕ್
ಭುವನೇಶ್ವರಕ್ಕೆ ಆಗಮಿಸಿದ ಹಾಕಿ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಜತೆಗೆ ಏರ್ಫೋರ್ಟ್‌ನಿಂದ ಆಟಗಾರರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದ ಹೋಟೆಲ್ ವರೆಗಿನ ರಸ್ತೆಗಳು ಆಟಗಾರರ ಬ್ಯಾನರ್, ಬಂಟಿಂಗ್ಸ್, ಹೋಲ್ಡಿಂಗ್ಸ್‌ಗಳಿಂದ ರಾರಾಜಿಸುತ್ತಿದ್ದವು.
ಒಡಿಶಾ ಸರ್ಕಾರ ಮತ್ತೆ 10 ವರ್ಷಗಳ ಅವಧಿಗೆ ಹಾಕಿ ತಂಡಗಳಿಗೆ ಪ್ರಾಯೋಕತ್ವ ನೀಡಲು ತೀರ್ಮಾನಿಸಿದ ಬೆನ್ನಲ್ಲೇ ಭಾರತ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್, ಗೋಲ್ ಕೀಪರ್ ಪಿ. ಆರ್ ಶ್ರೀಜೇಶ್, ಹಾಕಿ ಇಂಡಿಯಾ ಹಾಗೂ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಟ್ವೀಟ್ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ