ಮರಳಿನಲ್ಲಿ ಜಗತ್ತಿನ ಅತಿದೊಡ್ಡ ಹಾಕಿ ಸ್ಟಿಕ್ ನಿರ್ಮಾಣಹಾಕಿ ಸ್ಟಿಕ್ ನಿರ್ಮಿಸಲು 5000 ಹಾಕಿ ಚೆಂಡುಗಳ ಬಳಕೆಸುದರ್ಶನ್ ಪಟ್ನಾಯಕ್ ಅವರಿಗೆ ವರ್ಲ್ಡ್‌ ರೆಕಾರ್ಡ್ಸ್ ಇಂಡಿಯಾ ಗೌರವ

ಭುವನೇಶ್ವರ್(ಜ.17): ದೇಶದಲ್ಲಿ ಹಾಕಿ ವಿಶ್ವಕಪ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಇದೀಗ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಸುಮಾರು 5 ಸಾವಿರ ಹಾಕಿ ಚೆಂಡುಗಳನ್ನು ಬಳಸಿ, ಅತಿದೊಡ್ಡ ಹಾಕಿ ಸ್ಟಿಕ್ ಕಲಾಕೃತಿಯನ್ನು ನಿರ್ಮಿಸಿದ್ದು, ಇದು ಭಾರತದ ವಿಶ್ವದಾಖಲೆಗೆ ಪಾತ್ರವಾಗಿದೆ.

ಇದೀಗ ಅತಿದೊಡ್ಡ ಹಾಕಿ ಸ್ಟಿಕ್ ನಿರ್ಮಿಸಿದ್ದಕ್ಕೆ, ಸುದರ್ಶನ್ ಪಟ್ನಾಯಕ್ ಅವರಿಗೆ ವರ್ಲ್ಡ್‌ ರೆಕಾರ್ಡ್ಸ್ ಇಂಡಿಯಾದ ಸ್ಥಾಪಕ ಪವನ್‌ ಸೋಲಂಕಿ, ಇಲಾಖೆ ಮುಖ್ಯಸ್ಥರಾದ ಸುಷ್ಮಾ ನರ್ವೇಕರ್ ಹಾಗೂ ಹಿರಿಯ ತೀರ್ಪುಗಾರರಾದ ಸಂಜಯ್ ನರ್ವೇಕರ್ ಈ ವರ್ಲ್ಡ್‌ ರೆಕಾರ್ಡ್ಸ್ ಇಂಡಿಯಾ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ. ಖ್ಯಾತ ಮರಳು ಕಲಾವಿದರಾದ ಸುದರ್ಶನ್ ಪಟ್ನಾಯಕ್ ಅವರು, ಕಟಕ್‌ನ ಮಹಾನದಿ ತೀರದಲ್ಲಿ ಜಗತ್ತಿನ ಅತಿದೊಡ್ಡ ಮರಳಿನ ಹಾಕಿ ಸ್ಟಿಕ್ ನಿರ್ಮಿಸಿ ದಾಖಲೆ ರಚಿಸಿದ್ದಾರೆ.

ಸುದರ್ಶನ್ ಪಟ್ನಾಯಕ್ ಏಕಾಂಗಿಯಾಗಿ ಈ ಮರಳಿನ ಕಲಾಕೃತಿ ನಿರ್ಮಿಸಿಲ್ಲ. ಒಟ್ಟು 15 ವಿದ್ಯಾರ್ಥಿಗಳ ನೆರವಿನೊಂದಿಗೆ ಜನವರಿ 10ರಂದು ಅತಿದೊಡ್ಡ ಹಾಕಿ ಸ್ಟಿಕ್ ನಿರ್ಮಿಸಿದ್ದರು. ಈ ಹಾಕಿ ಸ್ಟಿಕ್‌ ಬರೋಬ್ಬರಿ 105 ಅಡಿ ಉದ್ದವಿದ್ದು, ಈ ಹಾಕಿ ಸ್ಟಿಕ್‌ನಲ್ಲಿ ಒಟ್ಟು 5000 ಹಾಕಿ ಬಾಲ್‌ಗಳನ್ನು ಬಳಸಲಾಗಿದೆ.

ಹೀರಾಬೆನ್ ಮರಳು ಶಿಲ್ಪ ಚಿತ್ರಿಸಿ ಹಿರಿಯ ಚೇತನಕ್ಕೆ ಕಲಾವಿದನ ಭಾವಪೂರ್ಣ ವಿದಾಯ

ಈ ಕುರಿತಂತೆ ಸುದರ್ಶನ್ ಪಟ್ನಾಯಕ್, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, " ನಮ್ಮ ಅತಿದೊಡ್ಡ ಮರಳಿಕ ಹಾಕಿ ಸ್ಟಿಕ್, ಇದೀಗ ವಿಶ್ವದಾಖಲೆಯಾಗಿದೆ. ಈ ಹಾಕಿ ಸ್ಟಿಕ್ 105 ಅಡಿ ಉದ್ದವಿದ್ದು, 5000 ಹಾಕಿ ಚೆಂಡುಗಳನ್ನು ಇದರೊಳಗೆ ತುಂಬಲಾಗಿದೆ. ಇದನ್ನು ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ದಿನದಂದು ನಿರ್ಮಿಸಲಾಗಿತ್ತು. ಇದೀಗ ವರ್ಲ್ಡ್‌ ರೆಕಾರ್ಡ್‌ ಇಂಡಿಯಾಗೆ ಪಾತ್ರವಾಗಿದ್ದು, ತುಂಬಾ ಗೌರವದ ವಿಚಾರವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದ್ದು, ಜನವರಿ 13ರಿಂದ ಆರಂಭವಾಗಿರುವ ಈ ಕ್ರೀಡಾಜಾತ್ರೆಯು ಜನವರಿ 29ರ ವರೆಗೆ ನಡೆಯಲಿದೆ. 15ನೇ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, ಎಲ್ಲಾ 44 ಪಂದ್ಯಗಳಿಗೆ ಒಡಿಶಾ ರಾಜ್ಯವು ಆತಿಥ್ಯವನ್ನು ವಹಿಸಿದೆ. 

ಜ.29ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ನೂತನವಾಗಿ ನಿರ್ಮಾಣಗೊಂಡ ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣ ಹಾಗೂ ಭುವನೇಶ್ವರದ ಕಳಿಂಗಾ ಕ್ರೀಡಾಂಗಣ ಟೂರ್ನಿಗೆ ಆತಿಥ್ಯ ವಹಿಸಲಿದೆ. ಭಾರತ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯದಲ್ಲಿ ಸ್ಪೇನ್ ಎದುರು ಭರ್ಜರಿ ಗೆಲುವು ಸಾಧಿಸಿತ್ತು. ಇದಾದ ಬಳಿಕ ಇಂಗ್ಲೆಂಡ್ ಎದುರು ಮನ್‌ಪ್ರೀತ್ ಸಿಂಗ್ ಪಡೆ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು.