Asianet Suvarna News Asianet Suvarna News

FIH Hockey Rankings : 3ನೇ ಸ್ಥಾನದೊಂದಿಗೆ ವರ್ಷ ಮುಗಿಸಿದ ಪುರುಷರ ಹಾಕಿ ತಂಡ!

3ನೇ ಸ್ಥಾನದೊಂದಿಗೆ 2021ನೇ ವರ್ಷವನ್ನು ಮುಗಿಸಲಿರುವ ಪುರುಷರ ಹಾಕಿ ತಂಡ
ಶ್ರೇಯಾಂಕದಲ್ಲಿ 9ನೇ ಸ್ಥಾನಕ್ಕೆ ಕುಸಿದ ಮಹಿಳಾ ತಂಡ
ಅಗ್ರಸ್ಥಾನವನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟ ಬೆಲ್ಜಿಯಂ ಪುರುಷರ ತಂಡ

Olympic bronze winning Indian mens hockey team will end the year in third spot san
Author
Bengaluru, First Published Dec 23, 2021, 10:35 PM IST

ಲುಸಾನ್ನೆ (ಡಿ. 23): ಏಷ್ಯನ್ ಚಾಂಪಿಯನ್ಸ್  (Asian Champions Trophy )ಹಾಕಿ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದ ಸಂಭ್ರಮದಲ್ಲಿರುವ ಭಾರತ ಪುರುಷರ ಹಾಕಿ ತಂಡ (Indian men's hockey team) ವಿಶ್ವ ಹಾಕಿ ಫೆಡರೇಷನ್ (International Hockey Federation)ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೇರಿದೆ. ಆ ಮೂಲಕ 2021ನೇ ವರ್ಷವನ್ನು ಭಾರತ ಮೂರನೇ ಸ್ಥಾನದೊಂದಿಗೆ ಮುಗಿಸುವುದು ಖಚಿತವಾಗಿದ್ದು, ಭಾರತದ ಈವರೆಗಿನ ಅತ್ಯುತ್ತಮ ವರ್ಷದ ಕೊನೆಯ ಶ್ರೇಯಾಂಕ ಇದಾಗಿದೆ. ಇನ್ನೊಂದೆಡೆ ಭಾರತ ಮಹಿಳೆಯರ ಹಾಕಿ ತಂಡ (Indian Women hockey team )9ನೇ ಸ್ಥಾನಕ್ಕೆ ಕುಸಿಯುವ ಮೂಲಕ 2021ನೇ ವರ್ಷವನ್ನು ಮುಗಿಸಿದೆ.

ಢಾಕಾದಲ್ಲಿ ಮುಗಿದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದ ಭಾರತ ತಂಡ, ಎಫ್ಐಎಚ್ (FIH) ಶ್ರೇಯಾಂಕದಲ್ಲಿ 2296.08 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.  ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡ 2ನೇ ಸ್ಥಾನ ಪಡೆದುಕೊಂಡಿದ್ದರೆ, ಆಸ್ಟ್ರೇಲಿಯಾ ಅಗ್ರಸ್ಥಾನದೊಂದಿಗೆ ವರ್ಷ ಮುಗಿಸುವಲ್ಲಿ ಯಶಸ್ವಿಯಾಗಿದೆ. ಮನ್ ಪ್ರೀತ್ ಸಿಂಗ್ (Manpreet Singh) ಸಾರಥ್ಯದ ಭಾರತ ತಂಡ ಈ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಹಾಕಿ ಕ್ರೀಡೆಯಲ್ಲಿ ಭಾರತದ 41 ವರ್ಷದ ಪದಕದ ಬರವನ್ನು ನೀಗಿಸಿದ್ದರು. ಎಫ್ಐಎಚ್ ಹಾಕಿ ಪ್ರೋ ಲೀಗ್ ಮುಖಾಮುಖಿಯಲ್ಲಿ ನೆದರ್ಲೆಂಡ್ ತಂಡದ ವಿರುದ್ಧ ಸೋಲು ಹಾಗೂ ಡ್ರಾ ಫಲಿತಾಂಶ ಕಂಡ ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ (Belgium) ತಂಡ ಅಗ್ರಸ್ಥಾನವನ್ನು  ಅಸ್ಟ್ರೇಲಿಯಾಕ್ಕೆ ಬಿಟ್ಟುಕೊಟ್ಟಿದೆ.

2642.25 ಅಂಕದೊಂದಿಗೆ ಆಸ್ಟ್ರೇಲಿಯಾ (Australia ) ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದರೆ ಇದರಿಂದ ಕೇವಲ 10 ಅಂಕ ಕಡಿಮೆ ಹೊಂದಿರುವ ಬೆಲ್ಜಿಯಂ 2632.12 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ.  ನೆದರ್ಲೆಂಡ್ (2234.33) ಮತ್ತು ಜರ್ಮನಿ (2038.71) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿದ್ದರೆ, ಇಂಗ್ಲೆಂಡ್ (6ನೇ - 1990.62), ಅರ್ಜೆಂಟೀನಾ (7ನೇ - 1826.11), ನ್ಯೂಜಿಲೆಂಡ್ (8ನೇ - 1598.24), ಸ್ಪೇನ್ (9ನೇ - 1532.33) ಮತ್ತು ಮಲೇಷ್ಯಾ (10ನೇ - 1427.18) ಅಗ್ರ 10 ಶ್ರೇಯಾಂಕವನ್ನು ಪೂರ್ತಿ ಮಾಡಿದೆ.
 


ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಿದ್ದ ತಂಡಗಳ ಪೈಕಿ ಶ್ರೇಯಾಂಕದ ಅಂಕದ ಆಧಾರದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದರೆ, ಶ್ರೇಯಾಂಕದ ಸ್ಥಾನಗಳಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಚಾಂಪಿಯನ್ ದಕ್ಷಿಣ ಕೊರಿಯಾ ತಂಡ 16ನೇ ಸ್ಥಾನದಲ್ಲಿಯೇ ಮುಂದುವರಿದಿದ್ದರೆ, ರನ್ನರ್ ಅಪ್ ಜಪಾನ್ ತಂಡ ಕೂಡ 17ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ ಪಾಕಿಸ್ತಾನ 18ನೇ ಸ್ಥಾನದಲ್ಲಿ ಮುಂದುವರಿದಿದೆ. ಐದನೇ ಸ್ಥಾನ ಪಡೆದುಕೊಂಡ ಬಾಂಗ್ಲಾದೇಶ 2 ಸ್ಥಾನ ಇಳಿಕೆ ಕಂಡು 40ನೇ ಸ್ಥಾನ ತಲುಪಿದೆ.

Asian Champions Trophy 2021 : ಪಾಕಿಸ್ತಾನ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದ ಭಾರತ
ಮಹಿಳಾ ವಿಭಾಗದಲ್ಲಿ 9ನೇ ಸ್ಥಾನ: ಮಹಿಳೆಯರ ತಂಡ 1810.32 ಅಂಕದೊಂದಿಗೆ ವರ್ಷ ಮುಗಿಸಲಿದ್ದು, 9ನೇ ಸ್ಥಾನಕ್ಕೆ ಕುಸಿದಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಭಾರತ, 10ನೇ ಸ್ಥಾನದಲ್ಲಿರುವ ಚೀನಾಗಿಂತ ದೊಡ್ಡ ಅಂಕಗಳ ಮುನ್ನಡೆಯಲ್ಲಿದೆ. ನೆದರ್ಲೆಂಡ್ ತಂಡ ಮಹಿಳಾ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ವರ್ಷ ಮುಗಿಸಲಿದ್ದರೆ, ಇಂಗ್ಲೆಂಡ್, ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಅರ್ಜೆಂಟೀನಾ ಮೂರನೇ ಸ್ಥಾನದಲ್ಲಿದೆ. 

ಆಸ್ಟ್ರೇಲಿಯಾ (2334.04) ನಾಲ್ಕನೇ ಸ್ಥಾನದಲ್ಲಿ ವರ್ಷವನ್ನು ಪೂರ್ಣಗೊಳಿಸಲಿದೆ. ಜರ್ಮನಿ (2126.15) ಮತ್ತು ಸ್ಪೇನ್ (1959.62) ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳಲ್ಲಿದೆ. ಬೆಲ್ಜಿಯಂ (7 ನೇ ಸ್ಥಾನ - 1939.88), ನ್ಯೂಜಿಲೆಂಡ್ (8 ನೇ ಸ್ಥಾನ - 1821.11), ಭಾರತ (9 ನೇ ಸ್ಥಾನ - 1810.32) ಮತ್ತು ಚೀನಾ (10 ನೇ ಸ್ಥಾನ - 1677.96) ಅಗ್ರ 10 ಶ್ರೇಯಾಂಕಿತ ತಂಡಗಳಾಗಿವೆ. 

 

Follow Us:
Download App:
  • android
  • ios