Asian Champions Trophy 2021 : ಪಾಕಿಸ್ತಾನ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದ ಭಾರತ
ಪಾಕಿಸ್ತಾನ ವಿರುದ್ಧ 4-3 ಗೋಲುಗಳ ಭರ್ಜರಿ ಜಯ
ಸೆಮಿಫೈನಲ್ ನಲ್ಲಿ ಜಪಾನ್ ವಿರುದ್ಧ ಸೋಲು ಕಂಡಿದ್ದ ಭಾರತ
ಜಪಾನ್ ತಂಡವನ್ನು ಮಣಿಸಿ ಚಾಂಪಿಯನ್ ಆದ ದಕ್ಷಿಣ ಕೊರಿಯಾ
ಢಾಕಾ (ಡಿ. 22): ಆಕರ್ಷಕ ನಿರ್ವಹಣೆ ನೀಡಿದ ಭಾರತ ಪುರುಷರ ಹಾಕಿ ತಂಡ (Indian Mens Hockey Team) 2021ರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ (Asian Champions Trophy Men's Hockey Tournament)ಕಂಚಿನ (Bronze) ಪದಕ ಜಯಿಸಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ 4-3 ಗೋಲುಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Pakistan) ತಂಡವನ್ನು ಸೋಲಿಸಿ ಪದಕ ಸಾಧನೆ ಮಾಡಿತು. ಕಳೆದ ವರ್ಷ ಮಸ್ಕತ್ ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪಾಕಿಸ್ತಾನ ತಂಡದೊಂದಿಗೆ ಜಂಟಿ ಚಾಂಪಿಯನ್ ಆಗಿದ್ದ ಭಾರತ ತಂಡ ಈ ಬಾರಿ ಸೆಮಿಫೈನಲ್ ನಲ್ಲಿ ಜಪಾನ್ ತಂಡದ ವಿರುದ್ಧ ಆಘಾತಕಾರಿ ಸೋಲು ಕಂಡು ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಆದರೆ, ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಪದಕದೊಂದಿಗೆ ತವರಿಗೆ ಮರಳುವಲ್ಲಿ ಯಶಸ್ವಿಯಾಗಿದೆ.
ಮೌಲಾನಾ ಭಶಾನಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ಮೊದಲ ನಿಮಿಷದಲ್ಲಿಯೇ ಮುನ್ನಡೆ ಕಂಡಿತು. ಉಪನಾಯಕ ಹರ್ಮಾನ್ ಪ್ರೀತ್ ಸಿಂಗ್ ತಂಡಕ್ಕೆ ಆರಂಭದಲ್ಲಿಯೇ ಮುನ್ನಡೆ ನೀಡಿದರು. ಆ ಬಳಿಕ 45ನೇ ನಿಮಿಷದಲ್ಲಿ ಸುಮಿತ್, 53ನೇ ನಿಮಿಷದಲ್ಲಿ ವರುಣ್ ಕುಮಾರ್ ಹಾಗೂ 57ನೇ ನಿಮಿಷದಲ್ಲಿ ಅಕ್ಷದೀಪ್ ಸಿಂಗ್ ತಲಾ ಒಂದೊಂದು ಗೋಲು ಸಿಡಿಸಿ ಭಾರತದ ಭರ್ಜರಿ ಗೆಲುವಿಗೆ ಕಾರಣರಾದರು.
ಇನ್ನು ಪಾಕಿಸ್ತಾನ ತಂಡದ ಪರವಾಗಿ ಅಫ್ರಾಜ್ 10ನೇ ನಿಮಿಷದಲ್ಲಿ ಸಮಬಲದ ಗೋಲು ಸಿಡಿಸಿದ್ದರೆ, ಅಬ್ದುಲ್ ರಾಣಾ 33ನೇ ನಿಮಿಷದಲ್ಲಿ ಬಾರಿಸಿದ ಗೋಲಿನೊಂದಿಗೆ ಪಾಕಿಸ್ತಾನ 2-1 ಮುನ್ನಡೆ ಕಂಡಿತ್ತು. ಆದರೆ, ಭಾರತ ಭರ್ಜರಿ ತಿರುಗೇಟು ನೀಡಿ ಮುನ್ನಡೆ ಕಂಡುಕೊಂಡಿತ್ತು.
57ನೇ ನಿಮಿಷದಲ್ಲಿ ವರುಣ್ ದೀಪ್ ಬಾರಿಸಿದ ಗೋಲಿನೊಂದಿಗೆ ಭಾರತ 4-2 ಮುನ್ನಡೆ ಕಂಡಿದ್ದರೆ, ಅದೇ ನಿಮಿಷದಲ್ಲಿ ಅಹ್ಮದ್ ನದೀಂ ಗೋಲು ಸಿಡಿಸಿ ಪಾಕಿಸ್ತಾನ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು. ಸಮಬಲದ ಗೋಲಿಗಾಗಿ ಕೊನೆಯ ನಿಮಿಷದವರೆಗೂ ಪಾಕಿಸ್ತಾನ ಹೋರಾಟ ನಡೆಸಿದರೂ ಭಾರತದ ಡಿಫೆನ್ಸ್ ಇದಕ್ಕೆ ಅವಕಾಶ ನೀಡಲಿಲ್ಲ. ಕೊನೆಯ ಒಂದು ನಿಮಿಷದ ಆಟದಲ್ಲಿ 9 ಸದಸ್ಯರ ಜೊತೆ ಭಾರತ ಹೋರಾಟ ನಡೆಸಬೇಕಾಯಿತಾದರೂ ತಂಡ ಗೆಲುವು ಕಾಣುವಲ್ಲಿ ಯಶ ಕಂಡಿತು. ಮಿಡ್ ಫೀಲ್ಡ್ ವಿಭಾಗದಲ್ಲಿ ಆಕರ್ಷಕ ನಿರ್ವಹಣೆ ತೋರಿದ ನಾಯಕ ಮನ್ ಪ್ರೀತ್ ಸಿಂಗ್ (Manpreet Singh) ಪಂದ್ಯಶ್ರೇಷ್ಠ ಪುರಸ್ಕಾರ ಪಡೆದರು.
Asian Champions Trophy Hockey 2021 : ಸೆಮಿಫೈನಲ್ ನಲ್ಲಿ ಭಾರತ ತಂಡಕ್ಕೆ ಸೋಲು
ಇದು ಭಾರತಕ್ಕೆ ಪಾಕಿಸ್ತಾನ ತಂಡದ ವಿರುದ್ಧ ಇದೇ ಟೂರ್ನಿಯಲ್ಲಿ 2ನೇ ಗೆಲುವಾಗಿದೆ. ರೌಂಡ್ ರಾಬಿನ್ ಹಂತದಲ್ಲಿ ಭಾರತ 3-1 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು. ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪದಕದೊಂದಿಗೆ ವಾಪಸಾಗಿರುವುದು ಇದು ಐದನೇ ಬಾರಿಯಾಗಿದೆ. ಇದಕ್ಕೂ ಮುನ್ನ 2011, 2016 ಹಾಗೂ 2018ರಲ್ಲಿ ಚಾಂಪಿಯನ್ ಅಗಿದ್ದರೆ, 2012ರಲ್ಲಿ ಪಾಕಿಸ್ತಾನ ತಂಡಕ್ಕೆ ಫೈನಲ್ ಪಂದ್ಯದಲ್ಲಿ ಸೋತು ಬೆಳ್ಳಿ ಪದಕ ಜಯಿಸಿತ್ತು. 2013ರಲ್ಲಿ ಜಪಾನ್ ನಲ್ಲಿ ನಡೆದ ಟೂರ್ನಿಯಲ್ಲಿ ಭಾರತ 5ನೇ ಸ್ಥಾನ ಪಡೆದಿದ್ದು ಈ ಟೂರ್ನಿಯಲ್ಲಿ ಅತ್ಯಂತ ಕೆಟ್ಟ ನಿರ್ವಹಣೆ ಎನಿಸಿದೆ.
ದಕ್ಷಿಣ ಕೊರಿಯಾ ಚಾಂಪಿಯನ್
ಫೈನಲ್ ಪಂದ್ಯದಲ್ಲಿ ಜಪಾನ್ (Japan) ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 4-2 ರಿಂದ ಸೋಲಿಸಿದ ದಕ್ಷಿಣ ಕೊರಿಯಾ (South Korea) ತಂಡ 2021ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಚಾಂಪಿಯನ್ ಆಗಿದೆ. ನಿಗದಿತ ಅವಧಿಯ ಆಟದಲ್ಲಿ ಎರಡೂ ತಂಡಗಳು ತಲಾ 3 ಗೋಲುಗಳನ್ನು ಸಿಡಿಸಿ ಸಮಬಲ ಸಾಧಿಸಿದ್ದವು. ಆ ಬಳಿಕ ನಡೆದ ಶೂಟೌಟ್ ನಲ್ಲಿ ದಕ್ಷಿಣ ಕೊರಿಯಾ ವಿಜಯಶಾಲಿಯಾಯಿತು. 4ನೇ ಬಾರಿಗೆ ಈ ಟೂರ್ನಿಯಲ್ಲಿ ಆಡಿದ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. ಇದಕ್ಕೂ ಮುನ್ನ 2016ರ ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದೇ ದಕ್ಷಿಣ ಕೊರಿಯಾ ತಂಡದ ಶ್ರೇಷ್ಠ ಸಾಧನೆ ಎನಿಸಿತ್ತು. ಇನ್ನು ಜಪಾನ್ ತಂಡ 2ನೇ ಬಾರಿಗೆ ಈ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿತು. 2013ರ ಟೂರ್ನಿಯಲ್ಲಿ ಫೈನಲ್ ಗೇರಿದ್ದ ಜಪಾನ್ ಅಂದು ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು.