ಸೋಮವಾರಪೇಟೆಯಲ್ಲಿ ನೂತನ ಹಾಕಿ ಟರ್ಪ್ ಕೆಲವೇ ದಿನಗಳಲ್ಲಿ ಸಿದ್ಧ
ಆಮೆಗತಿಯಲ್ಲಿ ಸಾಗಿಬಂದ ಸೋಮವಾರಪೇಟೆಯ ಹಾಕಿ ಟರ್ಫ್ ಮೈದಾನದ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ನ.23): ಹಾಕಿಯ ತವರು ಕೊಡಗು ಜಿಲ್ಲೆಯಲ್ಲಿ ನೂತನ ಹಾಕಿ ಟರ್ಫ್‌ನ್ನು ಸಜ್ಜುಗೊಳಿಸಲಾಗುತ್ತಿದೆ. ಸುಮಾರು 4.2 ಕೋಟಿ ರುಪಾಯಿ ವೆಚ್ಚದಲ್ಲಿ ಹೊಸ ಟರ್ಫ್ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ 2ನೇ ಹಾಕಿ ಟರ್ಫ್ ಕ್ರೀಡಾಂಗಣ ಇದಾಗಿದೆ. ಈ ಮೊದಲು ಕೂಡಿಗೆಯಲ್ಲಿ ಹಾಕಿ ಟರ್ಫ್‌ನ್ನು ನಿರ್ಮಿಸಲಾಗಿತ್ತು. ಇದೀಗ ಸೋಮವಾರ ಪೇಟೆಯಲ್ಲಿ ರಾಜ್ಯ ಕ್ರೀಡಾ ಇಲಾಖೆ ನೂತನ ಹಾಕಿ ಟರ್ಫ್ ನಿರ್ಮಾಣದ ಹೊಣೆ ಹೊತ್ತಿದೆ.
ಅಂತಾರಾಷ್ಟ್ರೀಯ ಗುಣಮಟ್ಟದ ಟರ್ಫ್:
ಸುಮಾರು 6426 ಚದರ ಮೀಟರ್ ವಿಸ್ತೀರ್ಣದ ಟರ್ಫ್ ಇದಾಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಸಾಮಗ್ರಿಯನ್ನು ಹೊಂದಿದೆ. ಹೈದ್ರಾಬಾದ್ ಮೂಲದ ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಕಂಪೆನಿ ಸೋಮವಾರಪೇಟೆಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಟರ್ಫ್‌ನ ಕಾಮಗಾರಿ ನಡೆಸುತ್ತಿದೆ. ಇದೇ ಕಂಪೆನಿ ಭಾರತದ ಇತರೆಡೆಗಳಲ್ಲಿಯೂ ಹಾಕಿ ಟರ್ಫ್‌ನ್ನು ನಿರ್ಮಿಸಿದೆ. ಜಾನ್ಸಿಯಲ್ಲಿರುವ ಧ್ಯಾನ್‌ಚಂದ್ ಹಾಕಿ ಕ್ರೀಡಾಂಗಣ, ರಾಯ್‌ಪುರದ ಸೈನ್ಸ್ ಕಾಲೇಜ್ ಹಾಕಿ ಮೈದಾನ, ಕೊಲ್ಲಂನ ಆಶ್ರಮಮ್ ಹಾಕಿ ಸ್ಟೇಡಿಯಂ, ಲಕ್ನೋದ ಮೋತಿಲಾಲ್ ನೆಹರು ಸ್ಟೇಡಿಯಂ ಹಾಗೂ ಕೇರಳದ ತಿರುವನಂತಪುರದ ಚಂದ್ರಶೇಖರ್ ನಾಯರ್ ಹಾಕಿ ಸ್ಟೇಡಿಯಂನಲ್ಲಿ ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಹೊಸ ಟರ್ಫ್ ನಿರ್ಮಾಣ ಮಾಡಿದೆ.
ಮಳೆ ಬರುವಾಗಲೇ ಡಾಂಬರೀಕರಣ:
ರಾಜ್ಯ ಸರ್ಕಾರ 2020ರ ಜನವರಿಯಲ್ಲಿ ಸೋಮವಾರಪೇಟೆಯಲ್ಲಿನ ಹೊಸ ಹಾಕಿ ಟರ್ಫ್‌ಗೆ ಅನುಮೋದನೆ ನೀಡಿತ್ತು. ಆ ಬಳಿಕ 2 ತಿಂಗಳು ಕ್ರೀಡಾ ಇಲಾಖೆ ಆಮೆಗತಿಯಲ್ಲಿ ಕಾರ‍್ಯ ನಿರ್ವಹಿಸಿತ್ತು. ಆ ನಂತರ ಕೊರೋನಾ ಲಾಕ್‌ಡೌನ್‌ನಿಂದಾಗಿ 7 ತಿಂಗಳು ಕಾರ‍್ಯ ಸ್ಥಗಿತವಾಗಿತ್ತು. ಇದೀಗ ಅಕ್ಟೋಬರ್‌ನಲ್ಲಿ ಮತ್ತೆ ಕಾಮಗಾರಿಯನ್ನು ಕ್ರೀಡಾ ಇಲಾಖೆ ಕೈಗೆತ್ತಿಕೊಂಡಿದೆ. ಆರಂಭದಲ್ಲಿ ಡಾಂಬರೀಕರಣ ಮಾಡುವಾಗಲೇ ಮಳೆ ಬಂದಿದೆ. ಆಗ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಿ, ಬಿಸಿಲು ಬಿದ್ದಾಗ ಕಾಮಗಾರಿ ನಡೆಸಲಾಗಿದೆ. ಅಕ್ಟೋಬರ್ 2ನೇ ವಾರದಿಂದ ಕೆಲಸ ಆರಂಭಿಸಲಾಗಿದೆ.
ISL 7: ಎರಡೆರಡು ಗೋಲು ಸಿಡಿಸಿದ್ರೂ ಬೆಂಗಳೂರು FC ಗೆಲ್ಲಲಿಲ್ಲ, ಗೋವಾ FC ಸೋಲಲಿಲ್ಲ!
ಕಾಮಗಾರಿ ಪೂರ್ಣಕ್ಕೆ ಇಲಾಖೆ ಆತುರ:
ಸುಮಾರು 5 ವರ್ಷಗಳ ಹಿಂದಿನ ಯೋಜನೆ ಇದಾಗಿದ್ದು, ಈಗ ಸಾಕಾರಗೊಳ್ಳುತ್ತಿದೆ. ಇಲಾಖೆ ಅಧಿಕಾರಿಗಳ ತಿಕ್ಕಾಟದ ನಡುವೆ ಟರ್ಫ್ ಕಾಮಗಾರಿ ವಿಳಂಬವಾಗಿದೆ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಆತುರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಇಲಾಖೆ ಮುಂದಾಗಿದೆ. ಹೀಗಾಗಿ ಮಳೆ ಬರುವಾಗಲೇ ಡಾಂಬರೀಕರಣ ನಡೆಸಿದೆ. ಮಣ್ಣಿನ ಅಂಗಣದಲ್ಲಿ ಡಾಂಬರೀಕರಣ ನಡೆಸಲಾಗಿದೆ. ಡಾಂಬರೀಕರಣ ಒಣಗಿದ ಮೇಲೆ ಟರ್ಫ್ ಹೊದಿಸಲಾಗುವುದು. ಮುಂದಿನ 20 ದಿನಗಳೊಳಗೆ ಟರ್ಫ್ ಹಾಕಿ ಸಿದ್ಧಗೊಳಿಸುವುದಾಗಿ ಕಂಪೆನಿ ತಿಳಿಸಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.