ಕೊಡವ ಕೌಟುಂಬಿಕ ಹಾಕಿ ಟೂರ್ನಿ ಜನಕ ಪಾಂಡಂಡ ಕುಟ್ಟಪ್ಪ ಇನ್ನಿಲ್ಲ
ಇಡೀ ದೇಶ ಕ್ರೀಡಾ ಪ್ರೇಮಿಗಳನ್ನು ಕೊಡಗಿನತ್ತ ತಿರುಗಿ ನೋಡುವಂತೆ ಮಾಡಿದ್ದ, ಕೊಡವ ಕೌಟುಂಬಿಕ ಹಾಕಿ ಟೂರ್ನಿ ಜನಕ ಪಾಂಡಂಡ ಕುಟ್ಟಪ್ಪ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಮೇ.07): ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟ ಆಯೋಜಿಸಿ ವಿಶ್ವದಾದ್ಯಂತ ಗಮನಸೆಳೆಯುವಂತೆ ಮಾಡಿದ್ದ ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ (86) ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಮಗಳು ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.
ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡಲು ಕೊಡವ ಕೌಟುಂಬಿಕ ಹಾಕಿ ಆಯೋಜಿಸಿ ಒಲಂಪಿಕ್ಸ್ ಮಾದರಿಯಲ್ಲಿಯೇ ವಿಶ್ವದಾದ್ಯಂತ ಗಮನಸೆಳೆಯುವಂತೆ ಕುಟ್ಟಪ್ಪ ಮಾಡಿದ್ದರು. ಕೊಡವ ಹಾಕಿ ಪಂದ್ಯಾವಳಿಗಾಗಿ ಪಾಂಡಂಡ ಕುಟ್ಟಪ್ಪ ಅವರು ಲಿಮ್ಕಾ ಬುಕ್ ಆಫ್ ರೆಕಾಡ್ಸ್೯ನಲ್ಲಿಯೂ ಸ್ಥಾನ ಪಡೆದಿದ್ದರು.
ಕೊರೋನಾ ವೈರಸ್: ಕೊಡವ ಕೌಟುಂಬಿಕ ಹಾಕಿ ಉತ್ಸವ ರದ್ದು!
ಎಸ್.ಬಿ.ಐ ನ ನಿವೃತ್ತ ಮ್ಯಾನೇಜರ್ ಆಗಿದ್ದ ಪಾಂಡಂಡ ಕುಟ್ಟಪ್ಪ ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟ ಆಯೋಜಿಸಿ ಸೈ ಎನಿಸಿಕೊಂಡಿದ್ದರು. 1997 ರಲ್ಲಿ ಕರಡದಲ್ಲಿ ಮೊದಲ ಪಂದ್ಯಾಟ ನಡೆಸಲಾಗಿತ್ತು. 22 ವರ್ಷಗಳಿಂದಲೂ ಹಾಕಿ ಹಬ್ಬಕ್ಕೆ ಕುಟ್ಟಪ್ಪ ಮಾರ್ಗದರ್ಶನ ನೀಡುತ್ತಿದ್ದರು. ಕುಟ್ಟಪ್ಪನವರ ಆಶಯದಂತೆ ಹಾಕಿ ಹಬ್ಬ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.
ಪ್ರತೀ ವಷ೯ ಕೊಡಗಿನಲ್ಲಿ 1 ತಿಂಗಳ ಕಾಲ ನಡೆಯುತ್ತಿದ್ದ ಕೊಡವ ಹಾಕಿ ಹಬ್ಬ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಕೌಟುಂಬಿಕ ಕೊಡವ ಹಾಕಿ ಟೂರ್ನಿ ನಡೆದಿಲ್ಲ. ಕಳೆದ ವರ್ಷ ಮಹಾಮಳೆಯಿಂದಾಗಿ ಹಾಕಿ ಟೂರ್ನಿ ನಡೆದಿರಲಿಲ್ಲ. ಈ ವರ್ಷ ಕೊರೋನಾದಿಂದಾಗಿ ಕೊಡವ ಹಾಕಿ ಟೂರ್ನಿ ಜರುಗಲಿಲ್ಲ.