Kodava Hockey Festival ಕೊಡವ ಕೌಟುಂಬಿಕ ಹಾಕಿಗೆ ಸಿಎಂ ಬಸವರಾಜ ಬೊಮ್ಮಾಯಿ ಅದ್ದೂರಿ ಚಾಲನೆ
23ನೇ ಕೊಡವ ಹಾಕಿ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಕಾರ‍್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು
ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಟೂರ್ನಿಗೆ ಚಾಲನೆ
ದುಗ್ಗಳ ಸದಾನಂದ, ಕನ್ನಡಪ್ರಭ
ನಾಪೋಕ್ಲು(ಮಾ.19): ಕೊಡವ ನಾಡಿನಲ್ಲಿ ಶನಿವಾರ ಮತ್ತೆ ಹಾಕಿ ಹಬ್ಬದ ಸಂಭ್ರಮ ಮರುಕಳಿಸಿತು. ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಸಾರಥ್ಯ ವಹಿಸಿದ್ದ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟಕ್ಕೆ ಪ್ರಥಮ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಕಾರ‍್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು, ಕೊಡವ ಭಾಷೆಯಲ್ಲೇ ಮಾತು ಪ್ರಾರಂಭಿಸಿ, ನಶಿಸಿ ಹೋಗುತ್ತಿರುವ ಕುಟುಂಬಗಳ ನಡುವಿನ ಸಂಬಂಧ ಮತ್ತೆ ಬೆಸೆಯಲು ಕುಟುಂಬಗಳ ನಡುವಿನ ಹಾಕಿ ಸಹಕಾರಿಯಾಗಿದೆ. ಕುಟುಂಬಗಳಲ್ಲಿ ಸದಸ್ಯರ ಸಂಬಂಧ ಉತ್ತಮವಾಗಿದ್ದರೆ ಸಮಾಜಕ್ಕೆ ಉತ್ತಮವಾಗಿರುತ್ತದೆ. ಭಾರತೀಯ ಸಂಸ್ಕೃತಿಗೆ ಕೊಡವ ಕೌಟುಂಬಿಕ ಹಾಕಿ ಉತ್ತಮ ಕೊಡುಗೆ ನೀಡುತ್ತಿದೆ ಎಂದರು.
ಹಾಕಿ ಕ್ರೀಡೆಯ ಮೂಲಕ ಕೊಡವರು ತಮ್ಮಲ್ಲಿನ ಕೌಟುಂಬಿಕ ಸಂಬಂಧಗಳಿಗೆ ಮಾದರಿಯಾಗಿದ್ದಾರೆ. ಶಾಸಕ ಕೆ.ಜಿ.ಬೋಪಯ್ಯ ಅವರು ಹಾಕಿ ಕ್ರೀಡೆಗೆ ಸೂಕ್ತ ಅನುದಾನ ತರುವಲ್ಲಿ ಶ್ರಮಿಸಿದ್ದಾರೆ. ಕೌಟುಂಬಿಕ ಹಾಕಿ ಉತ್ಸವಕ್ಕೆ ಇದೇ ಮೊದಲ ಬಾರಿಗೆ ಸರ್ಕಾರ ಒಂದು ಕೋಟಿ ರು. ಅನುದಾನ ನೀಡಿದೆ. ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ನನ್ನ ತಂದೆ ಸಚಿವರಾಗಿದ್ದಾಗ ಅನುದಾನ ನೀಡಿದ್ದರು ಎಂದು ಸ್ಮರಿಸಿದ ಸಿಎಂ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕೂಡಲೇ ಆದೇಶ ಹೊರಡಿಸುತ್ತೇನೆ ಎಂದರು.
23ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಕ್ಷಣಗಣನೆ
ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ಮನುಮುತ್ತಪ್ಪ, ಪದ್ಮಶ್ರೀ ರಾಣಿ ಮಾಚಯ್ಯ, ಪಾಂಡಂಡ ಬೋಪಣ್ಣ ಉಪಸ್ಥಿತರಿದ್ದರು.
ಬೆಳ್ಳಿ ಹಾಕಿ ಸ್ಟಿಕ್ ನೀಡಿ ಸನ್ಮಾನ
ಕೊಡವ ಕೌಟುಂಬಿಕ ಹಾಕಿ ಪಂದ್ಯಾಟಕ್ಕೆ ಇದೇ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಆಗಮಿಸಿದ್ದು, ಪಂದ್ಯಾವಳಿ ಉದ್ಘಾಟನೆ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಒಂದೂವರೆ ಅಡಿ ಎತ್ತರದ ಬೆಳ್ಳಿ ಹಾಕಿ ಸ್ಟಿಕ್ ನೀಡಿ ಸನ್ಮಾನಿಸಲಾಯಿತು.
ಆಕರ್ಷಕ ಮೆರವಣಿಗೆ
ಅಪ್ಪಚೆಟ್ಟೋಳಂಡ ಕುಟುಂಬ ಆಯೋಜಿಸಿದ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಹಿನ್ನೆಲೆ ನಡೆದ ಸಾಂಪ್ರದಾಯಿಕ ಮೆರವಣಿಗೆಗೆ ಗಾಳಿಗೆ ಗುಂಡು ಹಾರಿಸಿ ಚಾಲನೆ ನೀಡಲಾಯಿತು. ಕೊಡವರು ಸಾಂಪ್ರದಾಯಿಕ ಧಿರಿಸಿನಲ್ಲಿ ಭಾಗಿಯಾಗಿದ್ದರು. ಪಟ್ಟಣದಲ್ಲಿ ಸಾಗಿದ ಮೆರವಣಿಗೆ ಕ್ರೀಡಾಂಗಣದವರೆಗೂ ಕಳೆನೀಡಿತು. ಮೆರವಣಿಗೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕೊಡವ ಕೌಟುಂಬಿಕ ಹಾಕಿ ಉದ್ಘಾಟನೆಗೆ ಮುಖ್ಯಮಂತ್ರಿ ಬರುತ್ತಿರುವುದು ಸ್ವಾಗತಾರ್ಹ. ಕೊಡಗಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿ ಮುಂದಾಗಬೇಕು ಎಂದರು.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, ಕೌಟುಂಬಿಕ ಹಾಕಿ ಹಬ್ಬದ ಜನಕ, ಪಾಂಡಂಡ ಕುಟ್ಟಪ್ಪ ಸ್ಮರಣಾರ್ಥ ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡುವುದಾಗಿ ಘೋಷಿಸಿದರು. ಬಳಿಕ ಬೆಳ್ಳಿಯ ರೋಲಿಂಗ್ ಟ್ರೋಫಿಯನ್ನು ಅಪ್ಪಚೆಟ್ಟೋಳಂಡ ಹಾಕಿ ಪಂದ್ಯಾವಳಿ ಸಂಚಾಲಕ ಮನು ಮುತ್ತಪ್ಪ ಅವರಿಗೆ ಹಸ್ತಾಂತರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಎ.ಎಸ್.ಪೊನ್ನಣ್ಣ, ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಮುಕ್ಕಾಟೀರ ನಾಣಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಅಕಾಡೆಮಿಯ ಪ್ರಮುಖರಾದ ಮಾಳೇಟಿರ ಶ್ರೀನಿವಾಸ್, ಮಾದಂಡ ಪೂವಯ್ಯ, ಕುಕ್ಕೇರ ಜಯ ಚಿಣ್ಣಪ್ಪ, ಬಡಕಡ ದೀನಾ ಪೂವಯ್ಯ, ಚೆಯ್ಯಂಡ ಸತ್ಯ, ವಸಂತ್ ಮುತ್ತಪ್ಪ, ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೇದಾರ ಈರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಪ್ರದರ್ಶನ ಪಂದ್ಯ: ಕೊಡವ ಹಾಕಿ ಅಕಾಡೆಮಿ ಮತ್ತು ಅಪ್ಪಚೆಟ್ಟೋಳಂಡ ಹಾಕಿ ಉತ್ಸವದ ಧ್ವಜಾರೋಹಣ ನೆರವೇರಿದ ಬಳಿಕ 37ನೇ ಕೂಗ್‌ರ್ ಫೀಲ್ಡ್ ರೆಜಿಮೆಂಟ್ ತಂಡ ಮತ್ತು ಕೊಡವ ಅಕಾಡೆಮಿ ಇಲೆವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು.
ಬೆಳ್ಳಿಯ ಸ್ಟಿಕ್‌ನಲ್ಲಿ ಚೆಂಡನ್ನು ತಳ್ಳುವುದರ ಮೂಲಕ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಪ್ರದರ್ಶನ ಪಂದ್ಯಕ್ಕೆ ಚಾಲನೆ ನೀಡಿದರು. ಇಂಡಿಯಾ ಜೂನಿಯರ್ ಇಲೆವೆನ್ ಮತ್ತು ಕರ್ನಾಟಕ ಇಲೆವೆನ್ ತಂಡಗಳ ನಡುವೆ ನಡೆದ ಮತ್ತೊಂದು ಪ್ರದರ್ಶನ ಪಂದ್ಯ ಹಾಕಿ ಪ್ರಿಯರನ್ನು ರಂಜಿಸಿತು.
ಸಾಂಸ್ಕೃತಿಕ ಕಾರ್ಯಕ್ರಮ: ಹಾಕಿ ಉತ್ಸವದ ಉದ್ಘಾಟನೆಗೂ ಮುನ್ನ ಮಂಡ್ಯದ ಡೊಳ್ಳುಕುಣಿತ, ನಾಗರಹೊಳೆಯ ಹಾಡಿ ನೃತ್ಯ, ಮಂಡ್ಯದ ಕಂಸಾಳೆ ನೃತ್ಯ, ಪೇರೂರಿನ ತಂಡದ ಬೊಳಕಾಟ್ ನೃತ್ಯ ಪ್ರದರ್ಶನ ಜರುಗಿತು.