23ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಕ್ಷಣಗಣನೆ
ಇಂದಿನಿಂದ 23ನೇ ಹಾಕಿ ಕೊಡವ ಹಬ್ಬ ಆರಂಭ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಕಿ ಟೂರ್ನಿಯ ಉದ್ಘಾಟನೆ
336 ತಂಡ ಪಾಲ್ಗೊಳ್ಳುತ್ತಿರುವ ಈ ಹಾಕಿ ಟೂರ್ನಿ
- ದುಗ್ಗಳ ಸದಾನಂದ, ಕನ್ನಡಪ್ರಭ
ನಾಪೋಕ್ಲು(ಮಾ.18): ಕೊಡಗು ಜಿಲ್ಲೆಯಲ್ಲಿ ಮತ್ತೆ ಹಾಕಿ ಹಬ್ಬದ ಸಂಭ್ರಮ ಮರುಕಳಿಸುತ್ತಿದ್ದು ಶನಿವಾರ ಆರಂಭಗೊಳ್ಳುವ 23ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಲ್ಲಿನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಂತಿಮ ಹಂತದ ಸಿದ್ದತೆಗಳು ಪೂರ್ಣಗೊಂಡಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಕಿ ಟೂರ್ನಿಯ ಉದ್ಘಾಟನೆಗೆ ಶನಿವಾರ ಆಗಮಿಸಲಿದ್ದು ಉತ್ಸವದ ಮೆರುಗು ಮತ್ತಷ್ಟುಹೆಚ್ಚಲಿದೆ. ಅಪ್ಪಚೆಟ್ಟೋಳಂಡ ಕುಟುಂಬಿಕರು ಕೌಟುಂಬಿಕ ಹಾಕಿ ಉತ್ಸವದ ಆತಿಥ್ಯ ವಹಿಸಿದ್ದು ಶುಕ್ರವಾರ ಅಂತಿಮ ಹಂತದ ಸಿದ್ಧತೆ ನಡೆಯಿತು.
ಈ ಸಂದರ್ಭ ಕೊಡವ ಹಾಕಿ ಅಕಾಡೆಮಿ ನಿರ್ದೇಶಕ ಚೈಯಂಡ ಸತ್ಯ, ಜೋರಿ ಆಫ್ ಅಫಿಲ್ ಶಿವಚಳಿಯಂಡ ಅಂಬಿ ಕಾರ್ಯಪ್ಪ, ತಾಂತ್ರಿಕ ನಿರ್ದೇಶಕ ನಾಯಕಂಡ ದೀಪು ಚಂಗಪ್ಪ, ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್, ಕಾಟುಮಣಿಯಂಡ ಉಮೇಶ್, ಚೆಂಗೇಟಿರ ಅಚ್ಚಯ್ಯ, ಕ್ರೀಡಾ ಕೂಟದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕೌಟುಂಬಿಕ ಕೊಡವ ಹಾಕಿ ಟೂರ್ನಿಗಾಗಿ ಕ್ರೀಡಾಂಗಣದಲ್ಲಿ ತಯಾರಿ ನಡೆದಿದ್ದು ಕೊಡಗಿನ ಹಾಕಿ ಪ್ರಿಯರು ವೀಕ್ಷಿಸಲು ಎಲ್ಲ ಸೌಲಭ್ಯಗಳನ್ನು ಒಳಗೊಂಡ 32 ಲಕ್ಷ ರು.ವೆಚ್ಚದ ಬೃಹತ್ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. 25 ಸಾವಿರ ಜನರು ಒಟ್ಟಾಗಿ ಪಂದ್ಯ ವೀಕ್ಷಿಸಬಹುದಾಗಿದೆ. ಅಲ್ಲದೆ 600 ಮಂದಿ ಕುಳಿತುಕೊಳ್ಳಲು ವಿಐಪಿ ಗ್ಯಾಲರಿಯನ್ನು ನಿರ್ಮಾಣ ಮಾಡಲಾಗಿದ್ದು ಮೈದಾನ ಹಾಗೂ ಗ್ಯಾಲರಿ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ.
ಕೊಡವ ಹಾಕಿ ಕಪ್‌ಗೆ ದಾಖಲೆಯ 336 ತಂಡಗಳು ಭಾಗಿ: ಆಯೋಜಕರು
ಒಂದೇ ಮೈದಾನದಲ್ಲಿ ಒಟ್ಟು ಮೂರು ಸುಸಜ್ಜಿತ ಹಾಕಿ ಮೈದಾನ ತಯಾರಾಗಿದ್ದು ಒಂದು ತಿಂಗಳ ಕಾಲ ನಡೆಯುವ ಈ ಹಾಕಿ ಉತ್ಸವದಲ್ಲಿ ಹಾಕಿ ಪ್ರಿಯರು ಪಾಲ್ಗೊಂಡು ಸಂಭ್ರಮಿಸಲಿದ್ದಾರೆ.
ನಾಲ್ಕು ವರ್ಷಗಳ ಬಳಿಕ ಸಂಭ್ರಮ:
ಪಾಂಡಂಡ ಕುಟ್ಟಪ್ಪ- ಕಾಶಿ ಸಹೋದರರ ಪರಿಕಲ್ಪನೆಯಲ್ಲಿ ಕೊಡವ ಹಾಕಿ ಸಂಸ್ಥೆ ಮೂಲಕ ಪ್ರತಿ ವರ್ಷ ಒಂದೊಂದು ಕೊಡವ ಕುಟುಂಬದ ನೇತೃತ್ವದಲ್ಲಿ ಹಾಕಿ ಉತ್ಸವ ಆಯೋಜಿಸಲಾಗುತ್ತಿದೆ. ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಾಕಿ ಉತ್ಸವಕ್ಕೆ ಈ ವರ್ಷ ಚಾಲನೆ ದೊರೆತಿದ್ದು 336 ತಂಡ ಪಾಲ್ಗೊಳ್ಳುತ್ತಿರುವುದು ಐತಿಹಾಸಿಕ ದಾಖಲೆ.
ಏನೇನು ಕಾರ್ಯಕ್ರಮ?
-ಬೆಳಗ್ಗೆ 10 ಗಂಟೆಗೆ ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ
-ಕೊಡವ ಕುಟುಂಬಗಳ 23 ಮಂದಿ ಪ್ರತಿನಿಧಿಗಳು ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ಟೂರ್ನಿಗೆ ಸಾಂಪ್ರದಾಯಿಕ ಚಾಲನೆ.
-ಬೆಳಗ್ಗೆ 11.15ಕ್ಕೆ ಕೊಡವ ಹಾಕಿ ಅಕಾಡೆಮಿ ಮತ್ತು ಅಪ್ಪಚೆಟ್ಟೋಳಂಡ ಹಾಕಿ ಉತ್ಸವದ ಧ್ವಜಾರೋಹಣ.
-ಬೆಳಗ್ಗೆ 11.30ಕ್ಕೆ 37ನೇ ಕೂಗ್‌ರ್ ಫೀಲ್ಡ್ ರೆಜಿಮೆಂಟ್ ತಂಡ ಮತ್ತು ಕೊಡವ ಅಕಾಡೆಮಿ ಇಲೆವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ
-ಮಧ್ಯಾಹ್ನ 2.30ಕ್ಕೆ ಇಂಡಿಯಾ ಜೂನಿಯರ್ ಇಲೆವೆನ್ ಮತ್ತು ಕರ್ನಾಟಕ ಇಲೆವೆನ್ ತಂಡಗಳ ನಡುವೆ ಮತ್ತೊಂದು ಪ್ರದರ್ಶನ ಪಂದ್ಯ .
ಆಕರ್ಷಕ ಮೆರವಣಿಗೆ, ಸಾಂಸ್ಕೃತಿಕ ಪ್ರದರ್ಶನ
ಬೆಳಗ್ಗೆ ನಾಪೋಕ್ಲಿನಲ್ಲಿ ಆಕರ್ಷಕ ಬೃಹತ್ ಮೆರವಣಿಗೆ ನಡೆಯಲಿದೆ. ಹಾಕಿ ಉತ್ಸವವನ್ನು ಮೊದಲು ಆಯೋಜಿಸಿದ ಪಾಂಡಂಡ ಕುಟುಂಬ ಸೇರಿದಂತೆ ಇಲ್ಲಿಯವರೆಗೆ ಪಂದ್ಯಾವಳಿ ಆಯೋಜಿಸಿದ ಕೊಡವ ಕುಟುಂಬಗಳ 23 ಮಂದಿ ಪ್ರತಿನಿಧಿಗಳು ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ಪಂದ್ಯಾವಳಿಗೆ ಸಾಂಪ್ರದಾಯಿಕ ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕರ್ನಾಟಕದ ವಿವಿಧ ಕಲಾ ತಂಡಗಳು ಪಾಲ್ಗೊಂಡು ಸಾಂಸ್ಕೃತಿಕ ವೈವಿಧ್ಯತೆಯನ್ನು ಅನಾವರಣಗೊಳಿಸಲಿದ್ದಾರೆ. ಇದೇ ಸಂದರ್ಭ ಬೆಳಗ್ಗೆ 11.15ಕ್ಕೆ ಕೊಡವ ಹಾಕಿ ಅಕಾಡೆಮಿ ಮತ್ತು ಅಪ್ಪಚೆಟ್ಟೋಳಂಡ ಹಾಕಿ ಉತ್ಸವದ ಧ್ವಜಾರೋಹಣ ನೆರವೇರಲಿದೆ. ಬೆಳಗ್ಗೆ 11.30ಕ್ಕೆ 37ನೇ ಕೂಗ್‌ರ್ ಫೀಲ್ಡ್ ರೆಜಿಮೆಂಟ್ ತಂಡ ಮತ್ತು ಕೊಡವ ಅಕಾಡೆಮಿ ಇಲೆವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಮಧ್ಯಾಹ್ನ ಇಂಡಿಯಾ ಜೂನಿಯರ್ ಇಲೆವೆನ್ ಮತ್ತು ಕರ್ನಾಟಕ ಇಲೆವೆನ್ ತಂಡಗಳ ನಡುವೆ ಮತ್ತೊಂದು ಪ್ರದರ್ಶನ ಪಂದ್ಯ ಆಯೋಜಿಸಲಾಗಿದೆ.