Junior Hockey World Cup: ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ..!
* ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತಕ್ಕೆ ಪೋಲೆಂಡ್ ಸವಾಲು
* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಭಾರತ ಜೂನಿಯರ್ ಹಾಕಿ ತಂಡ
* ಕ್ವಾರ್ಟರ್ ಫೈನಲ್ ಪ್ರವೇಶಿಸಬೇಕಿದ್ದರೇ ಪೋಲೆಂಡ್ ಎದುರು ಗೆಲ್ಲಬೇಕಿದೆ ಭಾರತ
ಭುವನೇಶ್ವರ(ನ.27): ಜೂನಿಯರ್ ಹಾಕಿ ವಿಶ್ವಕಪ್ (Junior Hockey World Cup) ಟೂರ್ನಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ (Indian Junior Hockey Team) ತಂಡ ಶನಿವಾರ ಪೋಲೆಂಡ್ ವಿರುದ್ಧ ಸೆಣಸಾಡಲಿದೆ. ಕ್ವಾರ್ಟರ್ ಫೈನಲ್ ತಲುಪುವ ನಿರೀಕ್ಷೆಯಲ್ಲಿರುವ ಭಾರತ ಆಡಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿದ್ದು, ಶನಿವಾರ ನಡೆಯುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತ ಕ್ವಾರ್ಟರ್ ಪ್ರವೇಶಿಸಲಿದ್ದು, ಸೋತರೆ ಪೋಲೆಂಡ್ ಅಂತಿಮ 8ರ ಸುತ್ತು ಪ್ರವೇಶಿಸಲಿದೆ. ಫ್ರಾನ್ಸ್ 2 ಗೆಲುವಿನೊಂದಿಗೆ ಕ್ವಾರ್ಟರ್ ಸ್ಥಾನ ಖಚಿತಪಡಿಸಿಕೊಂಡಿದೆ. ಭಾರತ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ವಿರೋಚಿತ ಸೋಲುಂಡಿತ್ತು. ಆದರೆ 2ನೇ ಪಂದ್ಯದಲ್ಲಿ ಕೆನಡಾ ವಿರುದ್ಧ 13-1 ಗೋಲುಗಳ ಅಂತರದಲ್ಲಿ ಗೆದ್ದಿತ್ತು.
ಏಷ್ಯನ್ ಚಾಂಪಿಯನ್ಸ್ ಹಾಕಿ: ಮನ್‌ಪ್ರೀತ್ ಸಿಂಗ್ ನಾಯಕ
ನವದೆಹಲಿ: ಮುಂದಿನ ತಿಂಗಳು ಢಾಕಾದಲ್ಲಿ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (Asian Champions Trophy Hockey) ಹಾಕಿ ಟೂರ್ನಿಗೆ 20 ಮಂದಿಯ ಭಾರತ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಹಾಲಿ ಚಾಂಪಿಯನ್ ಭಾರತ ತಂಡವನ್ನು ಮನ್‌ಪ್ರೀತ್ ಸಿಂಗ್ (Manpreet Singh) ಮುನ್ನಡೆಸಲಿದ್ದಾರೆ.
ತಾರಾ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಉಪನಾಯಕನಾಗಿ ಆಯ್ಕೆಯಾಗಿದ್ದು, ಅನುಭವಿ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ವಿಶ್ರಾಂತಿ ಪಡೆದಿದ್ದಾರೆ. ಟೋಕಿಯೋ ಒಲಿಂಪಿಕ್ಸ್ (Tokyo Olympics) ಯಶಸ್ಸಿನ ಬಳಿಕ ಭಾರತಕ್ಕೆ ಇದು ಮೊದಲ ಟೂರ್ನಿಯಾಗಿದ್ದು, ಹಲವು ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Santosh Trophy: ಕರ್ನಾಟಕ ಫುಟ್ಬಾಲ್ ತಂಡಕ್ಕೆ ಸತತ ಎರಡನೇ ಜಯ
ಡಿಸೆಂಬರ್ 14ರಂದು ಹಾಲಿ ಚಾಂಪಿಯನ್ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ ಮೊದಲ ಪಂದ್ಯ ಆಡಲಿದ್ದು, ಡಿಸೆಂಬರ್ 15ಕ್ಕೆ ಬಾಂಗ್ಲಾದೇಶ. 17ಕ್ಕೆ ಪಾಕಿಸ್ತಾನ, 18ಕ್ಕೆ ಮಲೇಷ್ಯಾ ಹಾಗೂ 19ರಂದು ಜಪಾನ್ ವಿರುದ್ಧ ಸೆಣಸಾಟ ನಡೆಸಲಿದೆ. ಡಿಸೆಂಬರ್ 22ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ಮಹಿಳಾ ಫುಟ್ಬಾಲ್: ಬ್ರೆಜಿಲ್ ವಿರುದ್ಧ ಭಾರತಕ್ಕೆ ಸೋಲು
ಮನೌಸ್(ಬ್ರೆಜಿಲ್): ಮುಂದಿನ ವರ್ಷ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ (AFC Asian Cup) ಸಿದ್ಧತೆಗಾಗಿ ನಡೆದ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾರತ ಮಹಿಳಾ ಫುಟ್ಬಾಲ್ ತಂಡ (Indian Women's Football Team) ಬ್ರೆಜಿಲ್ ವಿರುದ್ಧ ಸೋಲನುಭವಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಮಾಜಿ ವಿಶ್ವಕಪ್ ರನ್ನರ್ ಅಪ್ ಬ್ರೆಜಿಲ್ 6-1 ಗೋಲುಗಳಿಂದ ಜಯ ಸಾಧಿಸಿತು.
ಇದೇ ಮೊದಲ ಬಾರಿ ಬ್ರೆಜಿಲ್ ವಿರುದ್ಧ ಆಡಿದ ವಿಶ್ವ ರ‍್ಯಾಂಕಿಂಗ್‌ನಲ್ಲಿ 57ನೇ ಸ್ಥಾನದಲ್ಲಿರುವ ಭಾರತ ಪಂದ್ಯದ ಮೊದಲಾರ್ಧದಲ್ಲಿ ಪ್ರಬಲ ಹೋರಾಟ ನೀಡಿತು. ಮೊದಲ ನಿಮಿಷದಲ್ಲೇ ಬ್ರೆಜಿಲ್ ಗೋಲು ಗಳಿಸಿದರೆ, ಭಾರತದ ಮನಿಶಾ ಕಲ್ಯಾಣ್ 8ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲಗೊಳಿಸಿದರು. 36ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಆತಿಥೇಯ ಬ್ರೆಜಿಲ್, ದ್ವಿತೀಯಾರ್ಧದಲ್ಲಿ 4 ಗೋಲು ಹೊಡೆದು ಗೆಲುವು ಸಾಧಿಸಿತು. ಭಾರತ ತಂಡವು ನ.28ಕ್ಕೆ ಚಿಲಿ ಹಾಗೂ ಡಿ.1ಕ್ಕೆ ವೆನೆಝುವೆಲಾ ವಿರುದ್ಧ ಆಡಲಿದೆ.
ಸಂತೋಷ್ ಟ್ರೋಫಿ: ಇಂದು ರಾಜ್ಯಕ್ಕೆ ತೆಲಂಗಾಣ ಸವಾಲು
ಬೆಂಗಳೂರು: ಸಂತೋಷ್ ಟ್ರೋಫಿ (Santosh Trophy) ದಕ್ಷಿಣ ವಲಯ ಅರ್ಹತಾ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಶನಿವಾರ ತೆಲಂಗಾಣ ವಿರುದ್ಧ ಸೆಣಸಾಡಲಿದೆ.ಸದ್ಯ ‘ಎ’ ಗುಂಪಿನಲ್ಲಿ ಕರ್ನಾಟಕ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ತೆಲಂಗಾಣ ವಿರುದ್ಧವೂ ಗೆದ್ದು ಮುಂದಿನ ಹಂತ ಪ್ರವೇಶಿಸುವ ಕಾತರದಲ್ಲಿದೆ.
ಗುಂಪಿನಿಂದ ಒಂದು ತಂಡಕ್ಕೆ ಮಾತ್ರ ಮುಂದಿನ ಹಂತ ಪ್ರವೇಶಿಸುವ ಅವಕಾಶವಿದೆ. ಶನಿವಾರ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಆಂಧ್ರಪ್ರದೇಶ ವಿರುದ್ಧ ತಮಿಳನಾಡು ಗೆದ್ದು, ತೆಲಂಗಾಣ ವಿರುದ್ಧ ರಾಜ್ಯ ತಂಡ ಸೋತರೆ ಗೋಲು ಗಳಿಕೆಯ ಆಧಾರದಲ್ಲಿ ಮುಂದಿನ ಸುತ್ತು ಪ್ರವೇಶಿಸುವ ತಂಡ ನಿರ್ಣಯವಾಗಲಿದೆ.