Junior Hockey World Cup: ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್ ಭಾರತಕ್ಕೆ ಶಾಕ್..!
* ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯ
* ಸೆಮಿಫೈನಲ್‌ನಲ್ಲಿ ಜರ್ಮನಿ ಎದುರು ಮುಗ್ಗರಿಸಿದ ಹಾಲಿ ಚಾಂಪಿಯನ್ ಭಾರತ
* ಕಂಚಿನ ಪದಕಕ್ಕಾಗಿ ಭಾರತ-ಫ್ರಾನ್ಸ್ ಕಾದಾಟ
ಭುವನೇಶ್ವರ್(ಡಿ.04): ಹಾಲಿ ಚಾಂಪಿಯನ್ ಭಾರತ 12ನೇ ಆವೃತ್ತಿಯ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ (Junior Hockey World Cup) ಸೆಮಿಫೈನಲ್‌ನಲ್ಲಿ ಸೋತು ಆಘಾತ ಅನುಭವಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ, 6 ಬಾರಿಯ ಚಾಂಪಿಯನ್ ಜರ್ಮನಿ (Germany) ವಿರುದ್ಧ 2-4 ಗೋಲುಗಳ ಅಂತರದಲ್ಲಿ ಸೋಲನುಭವಿಸಿತು. 4ನೇ ಬಾರಿ ಫೈನಲ್ ಪ್ರವೇಶಿಸುವ ಗುರಿಯೊಂದಿಗೆ ಕಣಕ್ಕಿಳಿದ ವಿವೇಕ್ ಸಾಗರ್ ನೇತೃತ್ವದ ಭಾರತ, ಆರಂಭದಲ್ಲೇ ಹಿನ್ನಡೆ ಅನುಭವಿಸಿತು.
15ನೇ ನಿಮಿಷದಲ್ಲಿ ಎರಿಕ್ ಗೋಲು ಬಾರಿಸಿ ಜರ್ಮನಿಯ ಗೋಲಿನ ಖಾತೆ ತೆರೆದರೆ, ಫಿಲಿಪ್ ಹಾಗೂ ಮುಲ್ಲರ್ ಗೋಲು ಹೊಡೆದು ಗೋಲಿನ ಸಂಖ್ಯೆಯನ್ನು 3ಕ್ಕೆ ಏರಿಸಿದರು. 25ನೇ ನಿಮಿಷದಲ್ಲಿ ಭಾರತದ ಪರ ಉತ್ತಮ್ ಸಿಂಗ್ ಗೋಲು ಬಾರಿಸಿದರು. ಬಳಿಕ ಕುಟ್ಟೆರ್ ಜರ್ಮನಿ ಮುನ್ನಡೆಯನ್ನು 4-1ಕ್ಕೇರಿಸಿದರು. ಪಂದ್ಯದ ಕೊನೆಯ ನಿಮಿಷದಲ್ಲಿ ಬಾಬಿ ಸಿಂಗ್ ಗೋಲುಗಳಿಸಿ ಸೋಲಿನ ಅಂತರವನ್ನು ತಗ್ಗಿಸಿದರು. 7ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜರ್ಮನಿ, ಡಿಸೆಂಬರ್ 5ರಂದು ಫೈನಲ್‌ನಲ್ಲಿ ಅರ್ಜೆಂಟಿನಾ ವಿರುದ್ಧ ಸ್ಪರ್ಧಿಸಲಿದೆ.
ಅರ್ಜೆಂಟೀನಾ ಫೈನಲ್‌ಗೆ: ಶುಕ್ರವಾರ ನಡೆದ ಮೊದಲ ಸೆಮೀಸ್‌ನಲ್ಲಿ ಫ್ರಾನ್ಸ್ (France Hockey Team) ವಿರುದ್ಧ ಅರ್ಜೆಂಟೀನಾ ಗೆಲುವು ಸಾಧಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಗೋಲು ಗಳಿಸಲಿಲ್ಲ. ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 3-1ರಿಂದ ಗೆದ್ದು ಫೈನಲ್ ಪ್ರವೇಶಿಸಿತು.
Junior Hockey World Cup: ಸೆಮೀಸ್‌ನಲ್ಲಿಂದು ಭಾರತ-ಜರ್ಮನಿ ಕಾದಾಟ
ಕಂಚಿಗಾಗಿ ನಾಳೆ ಫ್ರಾನ್ಸ್ ವಿರುದ್ಧ ಭಾರತ ಸೆಣಸು: ಭಾರತ ತಂಡ ಕಂಚಿನ ಪದಕಕ್ಕಾಗಿ ಭಾನುವಾರ ಫ್ರಾನ್ಸ್ ವಿರುದ್ಧ ಸೆಣಸಾಡಲಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ 4-5 ಗೋಲುಗಳಲ್ಲಿ ಫ್ರಾನ್ಸ್‌ಗೆ ಶರಣಾಗಿದ್ದ ಭಾರತ, ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.
ಏಷ್ಯನ್ ಸ್ಕ್ವಾಶ್: ಭಾರತ ಪುರುಷರ ತಂಡ ಫೈನಲ್‌ಗೆ
ಕೌಲಾಲಂಪುರ: 20ನೇ ಆವೃತ್ತಿಯ ಏಷ್ಯನ್ ಸ್ಕ್ವಾಶ್ ಟೀಂ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ತಂಡ ಫೈನಲ್ ಪ್ರವೇಶಿಸಿದೆ. ಮಹಿಳಾ ತಂಡ ಸೆಮಿಪೈನಲ್‌ನಲ್ಲಿ ಸೋತು, ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. ಶುಕ್ರವಾರ ನಡೆದ ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಹಾಲಿ ಚಾಂಪಿಯನ್ ಹಾಂಕಾಂಗ್ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸಿತು. 3ನೇ ಬಾರಿ ಫೈನಲ್ ಪ್ರವೇಶಿಸಿರುವ ಪುರುಷರ ತಂಡ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ ಸ್ಪರ್ಧಿಸಲಿದೆ. ಇನ್ನು, ಮಹಿಳಾ ತಂಡ ಸೆಮೀಸ್‌ನಲ್ಲಿ ಹಾಂಕಾಂಗ್ ವಿರುದ್ಧ 1-2 ಅಂತರದಲ್ಲಿ ಸೋಲುಂಡಿತು.
ಟೆನಿಸ್: ಸೆಮೀಸ್ ತಲುಪಿದ ರುತುಜಾ, ಶ್ರೀವಳ್ಳಿ ರಶ್ಮಿಕಾ
ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಐಟಿಎಫ್ ಮಹಿಳಾ ವಿಶ್ವ ಟೂರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ರುತುಜಾ ಭೋಸಲೆ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಅವರು ಪ್ರತ್ಯೂಷಾ ವಿರುದ್ಧ ಗೆಲುವು ಸಾಧಿಸಿದರು. ಸೌಜನ್ಯಾ, ಪ್ರಾಂಜಲ ಯಡಪಲ್ಲಿ ಹಾಗೂ ಶ್ರೀವಳ್ಳಿ ರಶ್ಮಿಕಾ ಕೂಡಾ ಸೆಮೀಸ್ ತಲುಪಿದ್ದಾರೆ. ಇನ್ನು, ಡಬಲ್ಸ್‌ನಲ್ಲಿ ಶರ್ಮದಾ ಬಾಲು-ಶ್ರವ್ಯಾ ಶಿವಾನಿ ವಿರುದ್ಧ ಗೆದ್ದ ವೈದೇಹಿ-ಮಿಹಿಕಾ ಯಾದವ್ ಜೋಡಿ ಫೈನಲ್ ಪ್ರವೇಶಿಸಿದೆ. ಫೈನಲ್‌ನಲ್ಲಿ ಸೌಜನ್ಯಾ-ಭೋಸಲೆ ಜೋಡಿ ಅಥವಾ ಸೋಹಾ ಸಾದಿಕ್-ಸುಮ್ಹಿತಾ ಜೋಡಿ ವಿರುದ್ಧ ಸ್ಪರ್ಧಿಸಲಿದೆ.