Junior Hockey World Cup: ಸೆಮೀಸ್‌ನಲ್ಲಿಂದು ಭಾರತ-ಜರ್ಮನಿ ಕಾದಾಟ
* ಜೂನಿಯರ್ ಹಾಕಿ ವಿಶ್ವಕಪ್‌ನ ಸೆಮೀಸ್‌ನಲ್ಲಿಂದು ಭಾರತ-ಜರ್ಮನಿ ಸೆಣಸಾಟ
* ಹಾಲಿ ಚಾಂಪಿಯನ್ ಭಾರತಕ್ಕಿಂದು ಬಲಿಷ್ಠ ಜರ್ಮನಿ ಸವಾಲು
* 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ಕಿರಿಯರ ಹಾಕಿ ತಂಡ
ಭುವನೇಶ್ವರ್(ಡಿ.03): ಹಾಲಿ ಚಾಂಪಿಯನ್ ಭಾರತ ತಂಡ 12ನೇ ಆವೃತ್ತಿಯ ಜೂನಿಯರ್ ಹಾಕಿ ವಿಶ್ವಕಪ್ (Junior Hockey World Cup) ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ, ಆರು ಬಾರಿಯ ಚಾಂಪಿಯನ್ ಜರ್ಮನಿ (Germany) ವಿರುದ್ಧ ಸೆಣಸಾಡಲಿದೆ. 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ, 4ನೇ ಬಾರಿ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ಬಲಿಷ್ಠ ಜರ್ಮನಿ 8ನೇ ಬಾರಿ ಫೈನಲ್ ತಲುಪುವ ನಿರೀಕ್ಷೆಯಲ್ಲಿದೆ.
ಗುಂಪು ಹಂತದಲ್ಲಿ ಫ್ರಾನ್ಸ್ ವಿರುದ್ಧ ಮೊದಲ ಪಂದ್ಯ 4-5 ಗೋಲುಗಳಲ್ಲಿ ಸೋತಿದ್ದ ವಿವೇಕ್ ಸಾಗರ್ ನೇತೃತ್ವದ ಭಾರತ, ಬಳಿಕ ಕೆನಡಾ ಹಾಗೂ ಪೋಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದು ಅಂತಿಮ 8ರ ಘಟ್ಟ ಪ್ರವೇಶಿಸಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಕಳೆದ ಬಾರಿಯ ರನ್ನರ್-ಅಪ್ ಬೆಲ್ಜಿಯಂ ವಿರುದ್ಧ 1-0 ಗೋಲಿನಿಂದ ಜಯಗಳಿಸಿ ಸತತ 2ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ತಂಡ ತನ್ನ ನಾಲ್ವರು ಪೆನಾಲ್ಟಿಕಾರ್ನರ್ ತಜ್ಞರಾದ ಸಂಜಯ್, ಶಾರದಾನಂದ ತಿವಾರಿ, ಅರೈಜೀತ್ ಸಿಂಗ್ ಹಾಗೂ ಅಭಿಷೇಕ್ ಲಾಕ್ರಾ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಿದೆ. ಬೆಲ್ಜಿಯಂ ವಿರುದ್ಧವೂ ಭಾರತ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿಯೇ ಗೆಲುವು ಸಾಧಿಸಿತ್ತು.
ಮತ್ತೊಂದೆಡೆ, ಗುಂಪು ಹಂತದಲ್ಲಿ ಮೂರೂ ಪಂದ್ಯಗಳನ್ನು ಗೆದ್ದಿದ್ದ ಕಳೆದ ಆವೃತ್ತಿಯ ಕಂಚು ವಿಜೇತ ಜರ್ಮನಿ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಶೂಟೌಟ್‌ನಲ್ಲಿ 3-1 ಗೋಲುಗಳಲ್ಲಿ ಗೆಲುವು ಸಾಧಿಸಿತ್ತು. ಶುಕ್ರವಾರ ನಡೆಯುವ ಇನ್ನೊಂದು ಸೆಮೀಸ್‌ನಲ್ಲಿ ಅರ್ಜೆಂಟೀನಾ ಹಾಗೂ ಫ್ರಾನ್ಸ್ ಸೆಣಸಾಡಲಿದೆ. ಫೈನಲ್ ಪಂದ್ಯ ಡಿಸೆಂಬರ್ 5ರಂದು ನಡೆಯಲಿದೆ.
ಅರ್ಜೆಂಟೀನಾ-ಫ್ರಾನ್ಸ್ ಪಂದ್ಯ ಆರಂಭ: ಸಂಜೆ 4.30ಕ್ಕೆ
ಭಾರತ-ಜರ್ಮನಿ ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
5 ವರ್ಷದಲ್ಲಿ ಹಾಕಿಗೆ 65 ಕೋಟಿ ರುಪಾಯಿ ಖರ್ಚು: ಕೇಂದ್ರ
ನವದೆಹಲಿ: ಭಾರತದ ಪುರುಷರ ಹಾಕಿ ತಂಡಕ್ಕೆ (Indian Men's Hockey Team) ಕಳೆದ 5 ವರ್ಷಗಳಲ್ಲಿ 65 ಕೋಟಿ ರುಪಾಯಿಗೂ ಅಧಿಕ ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ. ‘2016-17 ರಿಂದ 2020-21ರ ಅವಧಿಯಲ್ಲಿ ಹಿರಿಯರ ತಂಡಕ್ಕೆ 45.5 ಕೋಟಿ ಹಾಗೂ ಕಿರಿಯರ ತಂಡಕ್ಕೆ 20.23 ಕೋಟಿ ಹಣ ಖರ್ಚು ಮಾಡಲಾಗಿದೆ.
BWF Badminton World Tour Finals: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು, ಲಕ್ಷ್ಯ ಸೆನ್
ತರಬೇತಿ ಶಿಬಿರ, ವಿದೇಶಿ ಹಾಗೂ ದೇಸಿ ಟೂರ್ನಿ, ಕೋಚ್‌ಗಳ ಸಂಭಾವನೆ ಹಾಗೂ ಕ್ರೀಡಾ ಸಲಕರಣೆಗಳಿಗಾಗಿ ಹಣ ಬಳಸಿದ್ದೇವೆ. ಜೊತೆಗೆ, ಖೇಲೋ ಇಂಡಿಯಾ (Khelo India) ಯೋಜನೆ ಅಡಿಯಲ್ಲಿ 20 ನಿರ್ಮಾಣ ಕಾಮಗಾರಿಗಳಿಗೆ 104 ಕೋಟಿ ರು. ಬಿಡುಗಡೆ ಮಾಡಲಾಗಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ಮಾಹಿತಿ ನೀಡಿದರು.
ಅಂಜುಗೆ ವಿಶ್ವ ಅಥ್ಲೆಟಿಕ್ಸ್ ವರ್ಷದ ಮಹಿಳೆ ಗೌರವ
ಮೊಂಟೆ ಕಾರ್ಲೊ(ಮೊನಾಕೊ): ಭಾರತದ ಮಾಜಿ ಲಾಂಗ್ ಜಂಪ್ ಪಟು ಅಂಜು ಬಾಬಿ ಜಾರ್ಜ್(Anju Bobby George) ಅವರು ವಿಶ್ವ ಅಥ್ಲೆಟಿಕ್‌ನ ‘ವರ್ಷದ ಮಹಿಳೆ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಭಾರತೀಯ ಅಥ್ಲೆಟಿಕ್ಸ್‌ಗೆ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಅಂಜು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ವಾರ್ಷಿಕ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ಯುವ ಲಾಂಗ್ ಜಂಪ್ ಪಟುಗಳಿಗೆ ತರಬೇತಿ ನೀಡುತ್ತಿರುವ 44 ವರ್ಷದ ಅಂಜು 2003ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು. 2016ರಲ್ಲಿ ಅವರು ಯುವತಿಯರಿಗಾಗಿ ತರಬೇತಿ ಅಕಾಡೆಮಿ ತೆರೆದಿದ್ದು, ಹಲವು ಯುವ ಪ್ರತಿಭೆಗಳನ್ನು ಅಥ್ಲೆಟಿಕ್ಸ್ ಕಡೆಗೆ ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಮಿಷನ್ ಒಲಿಂಪಿಕ್ಸ್ ಸೆಲ್‌ಗೆ 7 ಮಾಜಿ ಕ್ರೀಡಾಳುಗಳು
ನವದೆಹಲಿ: ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆಲ್ಲಬೇಕು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ಕ್ರೀಡಾ ಸಚಿವಾಲಯ, ಮಿಷನ್ ಒಲಿಂಪಿಕ್ಸ್ ಸೆಲ್(ಎಂಒಸಿ)ಗೆ 7 ಮಾಜಿ ಕ್ರೀಡಾಪಟುಗಳನ್ನು ಸೇರ್ಪಡೆಗೊಳಿಸಿದೆ. ಬೈಚುಂಗ್ ಭುಟಿಯಾ, ಅಂಜು ಬಾಬಿ ಜಾರ್ಜ್, ಸರ್ದಾರ್ ಸಿಂಗ್, ವೀರೆನ್ ರಸ್ಕ್ವಿನ್ಹಾ, ಅಂಜಲಿ ಭಾಗ್ವತ್, ಮೊನಾಲಿಸಾ ಮೆಹ್ತಾ ಹಾಗೂ ತೃಪ್ತಿ ಮುರ್ಗುಂಡೆ ಅವರನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ.
Pro Kabaddi League: ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ, ಡಿ.22ರಿಂದ ಬೆಂಗಳೂರಿನಲ್ಲಿ ಟೂರ್ನಿ ಆರಂಭ!
ಸಮಿತಿಯಲ್ಲಿ ಕೆಲ ಕ್ರೀಡಾ ಸಂಸ್ಥೆಗಳ ಅಧ್ಯಕ್ಷರು ಸಹ ಇರಲಿದ್ದು, ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಸಂದೀಪ್ ಪ್ರಧಾನ್ ಮುಖ್ಯಸ್ಥರಾಗಿದ್ದಾರೆ. ಸಮಿತಿಯು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ (ಟಾಫ್ಸ್) ಅಡಿಯಲ್ಲಿ ಮುಂದಿನ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳ ಆಯ್ಕೆ ಹಾಗೂ ತರಬೇತಿಗೆ ಸಲಹೆ ನೀಡಲಿದೆ. ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ಎಂಒಸಿಯನ್ನು ಸ್ಥಾಪಿಸಿ ಪ್ರಯೋಗ ನಡೆಸಲಾಗಿತ್ತು. ಭಾರತ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ಪದಕ ಗೆದ್ದ ಕಾರಣ, ಈ ಸಮಿತಿಗೆ ಮತ್ತಷ್ಟುಮಹತ್ವ ನೀಡಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ.