ಭಾರತ ಮಹಿಳಾ ಹಾಕಿ ನಾಯಕಿ ರಾಣಿ ರಾಂಪಾಲ್ ಖೇಲ್ ರತ್ನಕ್ಕೆ ಶಿಫಾರಸು
ಹಾಕಿ ಇಂಡಿಯಾ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಇನ್ನು ಬಾಕ್ಸಿಂಗ್ ಫೆಡರೇಷನ್ ವಿಶ್ವ ಬೆಳ್ಳಿ ವಿಜೇತ ಅಮಿತ್ ಪಂಗಲ್ ಮತ್ತು ವಿಕಾಸ್ ಕ್ರಿಷ್ಣನ್ ರನ್ನು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.02): ದೇಶದ ಅತ್ಯನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಹೆಸರನ್ನು ಹಾಕಿ ಇಂಡಿಯಾ ಶಿಫಾರಸು ಮಾಡಿದೆ. ಇನ್ನು ವಂದನಾ ಕಠಾರಿಯಾ, ಮೋನಿಕಾ ಹಾಗೂ ಹರ್ಮನ್‌ಪ್ರೀತ್ ಸಿಂಗ್ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಪ್ರಶಸ್ತಿಗೆ ಮಾಜಿ ಆಟಗಾರರಾದ ಆರ್.ಪಿ. ಸಿಂಗ್ ಹಾಗೂ ತುಷಾರ್ ಖಂಡೂರ್ ಹೆಸರನ್ನು ಶಿಫಾರಸು ಮಾಡಲಾಗಿದ್ದರೆ, ಕೋಚ್‌ಗಳಾದ ಬಿ.ಜೆ ಕರಿಯಪ್ಪ ಹಾಗೂ ರೊಮೇಶ್ ಪಠಾಣಿಯಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಖೇಲ್ ರತ್ನಕ್ಕೆ ರೋಹಿತ್ ಶರ್ಮಾ ಹೆಸರು ಶಿಫಾರಸು
ಜನವರಿ 2016ರಿಂದ ಡಿಸೆಂಬರ್ 2019ರವರೆಗೆ ತೋರಿದ ಪ್ರದರ್ಶನದ ಆಧಾರದಲ್ಲಿ ಈ ಎಲ್ಲರ ಹೆಸರನ್ನು ಶಿಫಾರಸು ಮಾಡಲಾಗಿದೆ. ರಾಣಿ ನೇತೃತ್ವದಲ್ಲಿ 2017ರಲ್ಲಿ ನಡೆದ ಮಹಿಳಾ ಹಾಕಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ರನ್ನರ್ ಅಪ್ ಪ್ರಶಸ್ತಿ ಜಯಿಸಿತ್ತು. ಇನ್ನು 2019ರಲ್ಲಿ ನಡೆದ ಒಲಿಂಪಿಕ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ ನಿರ್ಣಾಯಕ ಗೋಲು ಬಾರಿಸಿ ಭಾರತ ತಂಡವನ್ನು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದ್ದರು. ರಾಣಿ ಈಗಾಗಲೇ ಅರ್ಜುನ ಅವಾರ್ಡ್ ಹಾಗೂ ಪದ್ಮಶ್ರಿ ಪ್ರಶಸ್ತಿಯನ್ನು ಜಯಿಸಿದ್ದಾರೆ.
ಬಾಕ್ಸರ್ ಅಮಿತ್, ವಿಕಾಸ್ ಖೇಲ್ ರತ್ನಕ್ಕೆ ಶಿಫಾರಸು
ನವದೆಹಲಿ: ವಿಶ್ವ ಬೆಳ್ಳಿ ವಿಜೇತ ಅಮಿತ್ ಪಂಗಲ್ ಮತ್ತು ವಿಕಾಸ್ ಕ್ರಿಷ್ಣನ್ ರನ್ನು ಭಾರತ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ಕ್ರೀಡಾ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಸೋಮವಾರ ಶಿಫಾರಸು ಮಾಡಿದೆ.
ಜೊತೆಯಲ್ಲಿ ವಿಶ್ವ ಕಂಚು ವಿಜೇತೆ ಲೊವ್ಲಿನಾ ಬೊರ್ಗೈನ್, ಸಿಮ್ರನ್‌ಜಿತ್ ಕೌರ್ ಮತ್ತು ಮನೀಶ್ ಕೌಶಿಕ್‌ರನ್ನು ಅರ್ಜುನ ಪ್ರಶಸ್ತಿಗೆ ಹಾಗೂ ರಾಷ್ಟ್ರೀಯ ಮಹಿಳಾ ಕೋಚ್ ಮೊಹಮದ್ ಅಲಿ ಖಮಾರ್ ಮತ್ತು ಸಹಾಯಕ ಕೋಚ್ ಚೋಠೆ ಲಾಲ್ ಯಾದವ್‌ರನ್ನು ದ್ರೋಣಾಚಾರ‍್ಯ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಕಳೆದ 4 ವರ್ಷದ ಅವಧಿಯಲ್ಲಿನ ಪ್ರದರ್ಶನದ ಆಧಾರದಲ್ಲಿ ಬಾಕ್ಸರ್‌ಗಳ ಹೆಸರು ಶಿಫಾರಸು ಮಾಡಲಾಗಿದೆ ಎಂದು ಬಿಎಫ್‌ಐ ಹೇಳಿದೆ.