ಟೀಂ ಇಂಡಿಯಾ ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮಾ ಅವರ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಬಿಸಿಸಿಐ ಶಿಪಾರಸು ಮಾಡಿದೆ. ಇನ್ನು ಮೂವರು ಕ್ರಿಕೆಟಿಗರಿಗೆ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮೇ.31): ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಖೇಲ್‌ ರತ್ನಕ್ಕೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾರನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಶಿಫಾರಸು ಮಾಡಿದೆ. 

ಶಿಖರ್‌ ಧವನ್‌, ಇಶಾಂತ್‌ ಶರ್ಮಾ ಮತ್ತು ಮಹಿಳಾ ಕ್ರಿಕೆಟ್‌ ತಂಡದ ಆಲ್ರೌಂಡರ್‌ ದೀಪ್ತಿ ಶರ್ಮಾ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಅನುಭವದ ಆಧಾರದಲ್ಲಿ ಇಶಾಂತ್‌, ಧವನ್‌ಗೆ ಸ್ಥಾನ ನೀಡಲಾಗಿದೆ. 2018ರಲ್ಲಿ ಧವನ್‌ ಅರ್ಜುನ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಯುವ ವೇಗಿ ಜಸ್‌ಪ್ರೀತ್‌ ಬುಮ್ರಾ ಹೆಸರು ಕೂಡಾ ಅರ್ಜುನ ಪ್ರಶಸ್ತಿಗೆ ಕೇಳಿಬಂದಿತ್ತು. ಕೊನೆ ಕ್ಷಣದಲ್ಲಿ ಬುಮ್ರಾ ಬದಲು ಇಶಾಂತ್‌ಗೆ ಅವಕಾಶ ಕಲ್ಪಿಸಲಾಗಿದೆ.

ಕೊರೋನಾ ಎಫೆಕ್ಟ್: ಕ್ರೀಡಾ ಪ್ರಶಸ್ತಿಗಳಿಗೆ ಈ-ಮೇಲ್‌ನಲ್ಲಿ ಅರ್ಜಿ ಆಹ್ವಾನ

ಬಾಕ್ಸಿಂಗ್:

ಮೀರಾಬಾಯಿ ಚಾನು ಹೆಸರು ಅರ್ಜು​ನಕ್ಕೆ ಶಿಫಾ​ರ​ಸು

ಮಾಜಿ ವಿಶ್ವ ಚಾಂಪಿ​ಯನ್‌, ದೇಶದ ಕ್ರೀಡಾ​ಪ​ಟು​ಗ​ಳಿಗೆ ನೀಡುವ ಅತ್ಯು​ನ್ನತ ಪ್ರಶಸ್ತಿ ಖೇಲ್‌ ರತ್ನ ವಿಜೇತೆ ಮೀರಾ​ಬಾಯಿ ಚಾನು ಹೆಸ​ರನ್ನು, ಅರ್ಜುನ ಪ್ರಶ​ಸ್ತಿಗೆ ಶಿಫಾ​ರಸು ಮಾಡಿ ಭಾರ​ತೀಯ ವೇಟ್‌ಲಿಫ್ಟಿಂಗ್‌ ಫೆಡ​ರೇ​ಷನ್‌ ಅಚ್ಚರಿ ಮೂಡಿ​ಸಿದೆ. 2017ರಲ್ಲಿ ವಿಶ್ವ ಚಾಂಪಿ​ಯನ್‌ ಆಗಿದ್ದ ಚಾನುಗೆ 2018ರಲ್ಲಿ ಖೇಲ್‌ ರತ್ನ ದೊರೆ​ತಿತ್ತು. ಅದೇ ವರ್ಷ ಪ್ರದ್ಮಶ್ರೀ ಸಹ ನೀಡಿ ಗೌರ​ವಿ​ಸ​ಲಾ​ಗಿತ್ತು. ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಚಾನು, ‘ನ​ನಗೆ ಅರ್ಜುನ ಪ್ರಶಸ್ತಿ ಸಿಕ್ಕಿ​ರ​ಲಿಲ್ಲ. ಈ ಬಾರಿ ಸಿಕ್ಕರೆ ಸಂತೋಷವಾಗಿ ಸ್ವೀಕ​ರಿ​ಸುತ್ತೇನೆ’ ಎಂದಿ​ದ್ದಾರೆ.

ಶೂಟಿಂಗ್:

‘ಖೇಲ್‌ ರತ್ನ’ಕ್ಕೆ ಶೂಟರ್‌ ಅಂಜುಂ ಹೆಸರು ಶಿಫಾರಸು

ಭಾರತದ ತಾರಾ ಶೂಟರ್‌ ಅಂಜುಮ್‌ ಮೌದ್ಗಿಲ್‌ ಹೆಸರನ್ನು ಖೇಲ್‌ ರತ್ನ ಹಾಗೂ ಕೋಚ್‌ ಜಸ್ಪಾಲ್‌ ರಾಣಾರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಈ ಹಿಂದೆಯೇ ಶಿಫಾರಸು ಮಾಡಿದೆ. ಜಸ್ಪಾಲ್‌ ಹೆಸರನ್ನು ಸತತ 2ನೇ ವರ್ಷ ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಲಾಗಿದೆ. 

ಅರ್ಜುನ ಪ್ರಶಸ್ತಿಗೆ ಯುವ ಪಿಸ್ತೂಲ್‌ ಶೂಟರ್‌ಗಳಾದ ಸೌರಭ್‌ ಚೌಧರಿ, ಅಭಿಷೇಕ್‌ ವರ್ಮಾ, ಮನು ಭಾಕರ್‌ ಮತ್ತು ರೈಫಲ್‌ ಶೂಟರ್‌ ಎಲ್ವೇನಿಲ್‌ ವಲಾರಿವನ್‌ ಹೆಸರು ಶಿಫಾರಸು ಮಾಡಲಾಗಿದೆ ಎಂದು ರೈಫಲ್‌ ಸಂಸ್ಥೆಯ ಮೂಲಗಳು ತಿಳಿಸಿವೆ