ನವದೆಹಲಿ(ಫೆ.21): ಕೋವಿಡ್‌ ಲಾಕ್‌ಡೌನ್‌ ಬಳಿಕ ಇದೇ ಮೊದಲ ಬಾರಿಗೆ ಭಾರತ ಪುರುಷರ ಹಾಕಿ ತಂಡ ವಿದೇಶ ಪ್ರವಾಸ ಕೈಗೊಳ್ಳಲಿದೆ. ಭಾನುವಾರ ಬೆಂಗಳೂರಿನಿಂದ ಜರ್ಮನಿಗೆ ತೆರಳಲಿರುವ 22 ಸದಸ್ಯರ ತಂಡ, ಫೆ.28, ಮಾ.2ರಂದು ಕ್ರೆಫೆಲ್ಡ್‌ನಲ್ಲಿ ಆತಿಥೇಯ ತಂಡದ ವಿರುದ್ಧ ಆಡಲಿದೆ. 

ಅಲ್ಲಿಂದ ಬೆಲ್ಜಿಯಂಗೆ ತೆರಳಲಿರುವ ಭಾರತ ತಂಡ, ಆಂಟ್ವಪ್‌ರ್‍ನಲ್ಲಿ ಗ್ರೇಟ್‌ ಬ್ರಿಟನ್‌ ವಿರುದ್ಧ ಮಾ.6 ಹಾಗೂ ಮಾ.8ರಂದು ಪಂದ್ಯಗಳನ್ನು ಆಡಲಿದೆ. ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಈ ಪ್ರವಾಸ ನೆರವಾಗಲಿದೆ. 22 ಸದಸ್ಯರನ್ನೊಳಗೊಂಡ ತಂಡ ಜರ್ಮನಿ ಪ್ರವಾಸ ಕೈಗೊಳ್ಳಲಿದೆ. ಗೋಲ್‌ ಕೀಪರ್‌ ಶ್ರೀಜೇಶ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಕಾಯಂ ನಾಯಕ ಮನ್‌ಪ್ರೀತ್‌ ಸಿಂಗ್‌, ಹಿರಿಯ ಆಟಗಾರರಾದ ಎಸ್‌.ವಿ.ಸುನಿಲ್‌ ಹಾಗೂ ರೂಪಿಂದರ್‌ ಪ್ರವಾಸಕ್ಕೆ ಗೈರಾಗಲಿದ್ದಾರೆ.

ಹಾಕಿ: ಭಾರತ-ಅರ್ಜೆಂಟೀನಾ 1-1ರಲ್ಲಿ ರೋಚಕ ಡ್ರಾ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ ಹಾಕಿ ತಂಡದ ಕೋಚ್‌ ಗ್ರೇಹಂ ರಿಡ್‌, ಸುಮಾರು ಒಂದು ವರ್ಷದ ಬಳಿಕ ನಾವು ಮೊದಲ ಸ್ಪರ್ಧಾತ್ಮಕ ಆಟಕ್ಕೆ ಮರಳುತ್ತಿದ್ದೇವೆ. ಅದು ಯೂರೋಪ್‌ ಪ್ರವಾಸದ ಮೂಲಕ ಆರಂಭವಾಗುತ್ತಿರುವುದು ಖುಷಿಯ ವಿಚಾರ. ಬಲಿಷ್ಠ ತಂಡಗಳಾದ ಜರ್ಮನಿ ಹಾಗೂ ಗ್ರೇಟ್‌ ಬ್ರಿಟನ್‌ ವಿರುದ್ದ ಆಡುವುದರಿಂದ ಮುಂಬರುವ ಎಫ್‌ಐಎಚ್‌ ಹಾಕಿ ಪ್ರೊ ಲೀಗ್ ಹಾಗೂ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನಮ್ಮ ತಂಡಕ್ಕೆ ನೆರವಾಗಲಿದೆ. ಅಗ್ರಶ್ರೇಯಾಂಕದ ಟಾಪ್‌ 10 ತಂಡಗಳ ವಿರುದ್ದ ಆಡುವುದು ಯಾವಾಗಲೂ ತಂಡಕ್ಕೆ ಉತ್ತಮ ಅನುಭವ ಸಿಗುವಂತಾಗಲಿದೆ ಎಂದು ಕೋಚ್‌ ಅಭಿಪ್ರಾಯಪಟ್ಟಿದ್ದಾರೆ.