ಗಾಯಾಳು ರೂಪಿಂದರ್‌ ಸಿಂಗ್ ಏಷ್ಯಾಕಪ್‌ ಹಾಕಿ ಟೂರ್ನಿಯಿಂದಲೇ ಔಟ್‌

* ಏಷ್ಯಾ ಕಪ್‌ ಹಾಕಿ ಟೂರ್ನಿಯಿಂದ ಹಿರಿಯ ಹಾಕಿ ಆಟಗಾರ ರೂಪಿಂದರ್‌ ಸಿಂಗ್‌ ಔಟ್

* ಅಭ್ಯಾಸದ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ.

* ಉಪನಾಯಕನಾಗಿ ಆಯ್ಕೆಯಾಗಿದ್ದ ಬೀರೇಂದ್ರ ಲಾಕ್ರಾ ತಂಡದ ನಾಯಕತ್ವ ವಹಿಸಿದ್ದಾರೆ

Indian Hockey Team Rupinder Pal Singh ruled out of Mens Asia Cup due to injury kvn

ಬೆಂಗಳೂರು(ಮೇ.14): ನಿವೃತ್ತಿ ತ್ಯಜಿಸಿ ಭಾರತ ತಂಡಕ್ಕೆ ವಾಪಸಾಗಿ ನಾಯಕನ ಸ್ಥಾನ ಪಡೆದಿದ್ದ ಹಿರಿಯ ಹಾಕಿ ಆಟಗಾರ ರೂಪಿಂದರ್‌ ಸಿಂಗ್‌ (Rupinder Pal Singh) ಗಾಯಗೊಂಡಿದ್ದು, ಮೇ 23ರಿಂದ ಜಕಾರ್ತದಲ್ಲಿ ಆರಂಭವಾಗಲಿರುವ ಏಷ್ಯಾ ಕಪ್‌ ಹಾಕಿ ಟೂರ್ನಿಯಿಂದ (Asia Cup Hockey Tournament) ಹೊರಬಿದ್ದಿದ್ದಾರೆ. ಅಭ್ಯಾಸ ವೇಳೆ ಅವರು ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಟೂರ್ನಿಗೆ ಲಭ್ಯರಿಲ್ಲ ಎಂದು ಹಾಕಿ ಇಂಡಿಯಾ (Hockey India) ಶುಕ್ರವಾರ ಮಾಹಿತಿ ನೀಡಿದೆ. 

20 ಆಟಗಾರರನ್ನೊಳಗೊಂಡ ಭಾರತ ಹಾಕಿ ತಂಡಕ್ಕೆ ರೂಪಿಂದರ್ ಪಾಲ್ ಸಿಂಗ್ ನಾಯಕರಾಗಿದ್ದರು. ಇದೀಗ ಉಪನಾಯಕನಾಗಿ ಆಯ್ಕೆಯಾಗಿದ್ದ ಬೀರೇಂದ್ರ ಲಾಕ್ರಾ ತಂಡದ ನಾಯಕತ್ವ ವಹಿಸಲಿದ್ದು, ಕರ್ನಾಟಕದ ಹಿರಿಯ ಆಟಗಾರ ಎಸ್‌.ವಿ.ಸುನಿಲ್‌ (SV Sunil) ಉಪನಾಯಕನಾಗಿ ನೇಮಕಗೊಂಡಿದ್ದಾರೆ. ರೂಪಿಂದರ್‌ ಬದಲು ನೀಲಂ ಸಂಜೀಪ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ಹಾಕಿ ತಂಡ ಹೀಗಿದೆ ನೋಡಿ:

ಗೋಲ್ ಕೀಪರ್: ಪಂಕಜ್‌ ಕುಮಾರ್ ರಜಾಕ್, ಸೂರಜ್ ಕಾರ್ಕೇರ

ಡಿಫೆಂಡರ್ಸ್‌: ಯಶ್ದೀಪ್ ಸಿವಾಚ್, ಅಭಿಷೇಕ್ ಲಾಕ್ರಾ, ಬೀರೇಂದ್ರ ಲಾಕ್ರಾ(ನಾಯಕ), ಮನ್ಜೀತ್, ಡಿಪ್ಸಾನ್ ತಿರ್ಕೆ.

ಮಿಡ್‌ ಫೀಲ್ಡರ್ಸ್‌: ವಿಷ್ಣುಕಾಂತ್ ಸಿಂಗ್, ರಾಜ್ ಕುಮಾರ್ ಪಾಲ್, ಮರಿಸ್ವರೆನ್ ಸ್ಕೆತಿವೆಲ್, ಶೇಷೇಗೌಡ ಬಿ ಎಂ, ಸಿಮರ್‌ಜಿತ್ ಸಿಂಗ್.

ಫಾರ್ವಡ್ಸ್‌: ಪವಾನ್ ರಾಬ್ಬಾರ್, ಆಭರಣ್ ಸುದೇವ್, ಎಸ್ ವಿ ಸುನಿಲ್(ಉಪನಾಯಕ), ಉತ್ತಮ್ ಸಿಂಗ್, ಎಸ್. ಕಾರ್ತಿ, ನಿಲಮ್ ಸಂಜೀಪ್

ವಿಶ್ವ ಚೆಸ್‌ ಉಪಾಧ್ಯಕ್ಷ ಸ್ಥಾನಕ್ಕೆ ಆನಂದ್‌ ಸ್ಪರ್ಧೆ

ಚೆನ್ನೈ: ಭಾರತದ ದಿಗ್ಗಜ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಅವರು ವಿಶ್ವ ಚೆಸ್‌ ಫೆಡರೇಷನ್‌ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಚೆನ್ನೈನಲ್ಲಿ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ 44ನೇ ಚೆಸ್‌ ಒಲಿಂಪಿಯಾಡ್‌ ವೇಳೆ ಫೆಡರೇಶನ್‌ ಚುನಾವಣೆ ನಡೆಯಲಿದ್ದು, ಆನಂದ್‌ ಅವರು ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಲಿದ್ದಾರೆ. 

ಐತಿಹಾಸಿಕ ಸಾಧನೆ ಮಾಡಿದ ಭಾರತ ಬ್ಯಾಡ್ಮಿಂಟನ್ ತಂಡ, ಥಾಮಸ್ ಕಪ್ ಫೈನಲ್ ಗೆ ಲಗ್ಗೆ!

5 ಬಾರಿ ವಿಶ್ವ ಚಾಂಪಿಯನ್‌ ಆನಂದ್‌ ಅವರು ಮತ್ತೊಮ್ಮೆ ಅಧಿಕಾರ ಬಯಸಿರುವ ಹಾಲಿ ಅಧ್ಯಕ್ಷ ರಷ್ಯಾದ ಅರ್ಕಾಡಿ ಡ್ವೊರ್ಕೊವಿಚ್‌ ತಂಡದಿಂದ ಕಣಕ್ಕಿಳಿಯಲಿದ್ದಾರೆ. ಆನಂದ್‌ ಈ ಬಾರಿ ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತ ತಂಡಕ್ಕೆ ಮಾರ್ಗದರ್ಶಕರಾಗಿ ಕಾರ‍್ಯನಿರ್ವಹಿಸಲಿದ್ದಾರೆ.

ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ

ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ 24ನೇ ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತೊಂದು ಪದಕ ತನ್ನದಾಗಿಸಿಕೊಂಡಿದ್ದು, 12 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಶುಕ್ರವಾರ ನಡೆದ ಪುರುಷರ ಡಬಲ್ಸ್‌ ಟೆನಿಸ್‌ ಫೈನಲ್‌ನಲ್ಲಿ ಧನರಾಜ್‌ ದುಬೆ-ಪೃಥ್ವಿ ಶೇಖರ್‌ ಜೋಡಿ ಫ್ರಾನ್ಸ್‌ನ ಅಲಿಕ್ಸ್‌ ಲಾರೆಂಟ್‌-ವಿನ್ಸೆಂಟ್‌ ಜೋಡಿ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಕಳೆದ ಬಾರಿ ಮಿಶ್ರ ಡಬಲ್ಸ್‌ನಲ್ಲಿ ಕಂಚು ಗೆದ್ದಿದ್ದ ಪೃಥ್ವಿಗೆ ಇದು 2ನೇ ಪದಕ.

ವಿಶ್ವ ಬಾಕ್ಸಿಂಗ್‌: ಲವ್ಲೀನಾಗೆ ಪ್ರಿ ಕ್ವಾರ್ಟರ್‌ನಲ್ಲಿ ಸೋಲು

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕಂಚಿನ ಪದಕ ವಿಜೇತ ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌ ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಲವ್ಲೀನಾ 70 ಕೆ.ಜಿ. ವಿಭಾಗದ ಅಂತಿಮ 16ರ ಸುತ್ತಿನ ಸ್ಪರ್ಧೆಯಲ್ಲಿ ನೈಜೀರಿಯಾದ ಸಿಂಡಿ ವಿರುದ್ಧ 1-4 ಅಂತರದಲ್ಲಿ ಪರಾಭವಗೊಂಡರು. ಇನ್ನು, 50 ಕೆ.ಜಿ. ವಿಭಾಗದಲ್ಲಿ ಭಾರತದ ಅನಾಮಿಕಾ, 54 ಕೆ.ಜಿ. ವಿಭಾಗದಲ್ಲಿ ಶಿಕ್ಷಾ, 60 ಕೆ.ಜಿ. ವಿಭಾಗದಲ್ಲಿ ಜಾಸ್ಮಿನ್‌ ಅಂತಿಮ 16ರ ಸುತ್ತಿಗೆ ಪ್ರವೇಶಿದ್ದಾರೆ.
 

Latest Videos
Follow Us:
Download App:
  • android
  • ios