Asianet Suvarna News Asianet Suvarna News

FIH Hockey Awards: ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ

* ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ ನೀಡುವ ಎಲ್ಲಾ ಪ್ರಶಸ್ತಿಗಳು ಈ ಬಾರಿ ಭಾರತದ ಪಾಲು

* ಎಲ್ಲಾ 8 ಪ್ರಶಸ್ತಿಗಳನ್ನು ಗೆದ್ದುಕೊಂಡ ಭಾರತ 

* ಭಾರತಕ್ಕೇ ಎಲ್ಲಾ ಪ್ರಶಸ್ತಿ ಸಿಕ್ಕಿರುವುದಕ್ಕೆ ಬೆಲ್ಜಿಯಂ ಅಸಮಾಧಾನ

Indian Hockey Players Clean sweeps FIH annual awards kvn
Author
Lausanne, First Published Oct 7, 2021, 8:37 AM IST

ಲುಸ್ಸಾನೆ(ಅ.07): ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌(ಎಫ್‌ಐಎಚ್‌) ವಾರ್ಷಿಕ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ಭಾರತ ಕ್ಲೀನ್‌ ಸ್ವೀಪ್‌ ಮಾಡಿದೆ. ಎಲ್ಲಾ ಎಂಟೂ ವಿಭಾಗಗಳಲ್ಲಿ ಭಾರತಕ್ಕೇ ಪ್ರಶಸ್ತಿ ಲಭಿಸಿದೆ. 1998ರಿಂದ ಎಫ್‌ಐಎಚ್‌ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಭಾರತ ಕ್ಲೀನ್‌ ಸ್ವೀಪ್‌ ಸಾಧನೆಗೈದಿದೆ.

ಟೋಕಿಯೋ ಒಲಿಂಪಿಕ್ಸ್‌ (Tokyo Olympics) ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ತಂಡದಲ್ಲಿದ್ದ ಹರ್ಮನ್‌ಪ್ರೀತ್‌ ಸಿಂಗ್‌ (Harmanpreet Singh) ಪುರುಷರ ವಿಭಾಗದಲ್ಲಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಐತಿಹಾಸಿಕ 4ನೇ ಸ್ಥಾನ ಪಡೆದ ಮಹಿಳಾ ತಂಡದ ಸದಸ್ಯೆ ಗುರ್ಜೀತ್‌ ಕೌರ್‌ (Gurjit Kaur) ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ದಿಗ್ಗಜ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌(PR Sreejesh) ಹಾಗೂ ಸವಿತಾ ಪೂನಿಯಾ (Savita Punia) ವರ್ಷದ ಶ್ರೇಷ್ಠ ಗೋಲ್‌ಕೀಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇನ್ನು ವಿವೇಕ್‌ ಸಾಗರ್‌ ಪ್ರಸಾದ್‌ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದರೆ, ಶರ್ಮಿಳಾ ದೇವಿ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುರುಷರ ತಂಡದ ಕೋಚ್‌ ಗ್ರಹಮ್‌ ರೀಡ್‌, ಮಹಿಳಾ ತಂಡದ ಮಾಜಿ ಕೋಚ್‌ ಸೋರ್ಡ್‌ ಮರಿನೆ ವರ್ಷದ ಶ್ರೇಷ್ಠ ಕೋಚ್‌ಗಳೆನಿಸಿದ್ದಾರೆ.

ಟೋಕಿಯೋ 2020: ಹರ್ಮನ್‌ಪ್ರೀತ್, ಶ್ರೀಜೇಶ್‌ಗೆ ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ?

ಆಯ್ಕೆ ಹೇಗೆ?: ವೋಟಿಂಗ್‌ ಮೂಲಕ ಪ್ರಶಸ್ತಿಗೆ ಆಯ್ಕೆ ನಡೆಯಲಿದೆ. ರಾಷ್ಟ್ರೀಯ ತಂಡದ ಕೋಚ್‌ಗಳು ಹಾಗೂ ನಾಯಕರು ರಾಷ್ಟ್ರೀಯ ಫೆಡರೇಷನ್‌ ಅನ್ನು ಪ್ರತಿನಿಧಿಸಲಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ಇವರ ಕೊಡುಗೆ ಶೇ.50ರಷ್ಟು ಇರಲಿದೆ. ಅಭಿಮಾನಿಗಳು ಹಾಗೂ ಆಟಗಾರರು(ಶೇ.25), ಮಾಧ್ಯಮ(ಶೇ.25) ಚಲಾಯಿಸಿದ ಮತಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

ಭಾರತಕ್ಕೇ ಎಲ್ಲಾ ಪ್ರಶಸ್ತಿ: ಬೆಲ್ಜಿಯಂ ತೀವ್ರ ಆಕ್ಷೇಪ

ವರ್ಷದ ಎಲ್ಲಾ ಪ್ರಶಸ್ತಿಗಳೂ ಭಾರತದ ಪಾಲಾಗಿದ್ದಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ವಿಜೇತ ಬೆಲ್ಜಿಯಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬೆಲ್ಜಿಯಂನ ಹಲವು ಆಟಗಾರರು ವಿವಿಧ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದರೂ ಒಂದೂ ಪ್ರಶಸ್ತಿ ಸಿಗದಿರುವುದು ವೋಟಿಂಗ್‌ನಲ್ಲಿರುವ ಲೋಪವನ್ನು ಎತ್ತಿ ತೋರಿಸುತ್ತದೆ. ಎಫ್‌ಐಎಚ್‌ ಜೊತೆ ಈ ಬಗ್ಗೆ ಚರ್ಚಿಸುತ್ತೇವೆ ಎಂದು ಬೆಲ್ಜಿಯಂ ಹಾಕಿ ಸಂಸ್ಥೆ ಟ್ವೀಟ್‌ ಮಾಡಿದೆ. ಯುರೋಪ್‌ನ 42 ರಾಷ್ಟ್ರೀಯ ಸಂಸ್ಥೆ/ಫೆಡರೇಷನ್‌ಗಳ ಪೈಕಿ ಕೇವಲ 19 ಸಂಸ್ಥೆಗಳು ಮತ ಚಲಾಯಿಸಿವೆ. ಅಲ್ಲದೇ ಸುಮಾರು 3 ಲಕ್ಷ ಅಭಿಮಾನಿಗಳು ಮತ ಚಲಾಯಿಸಿದ್ದು, ಈ ಪೈಕಿ ಬಹುತೇಕರು ಭಾರತೀಯರೇ ಆಗಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios