ವಿಶ್ವ ಹಾಕಿ ರ‍್ಯಾಂಕಿಂಗ್: 3ನೇ ಸ್ಥಾನಕ್ಕೆ ಲಗ್ಗೆ ಭಾರತ..! ಚಾಂಪಿಯನ್ ತಂಡಕ್ಕೆ ಭರ್ಜರಿ ಬಹುಮಾನ
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಚಾಂಪಿಯನ್
ದಾಖಲೆಯ 4ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ
ಭಾರತ ತಂಡ ಎಫ್‌ಐಎಚ್ ವಿಶ್ವ ಹಾಕಿ ರ್ಯಾಂಕಿಂಗ್‌ನಲ್ಲಿ ಮತ್ತೆ 3ನೇ ಸ್ಥಾನಕ್ಕೆ ಲಗ್ಗೆ
ನವದೆಹಲಿ: ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡ ಎಫ್‌ಐಎಚ್ ವಿಶ್ವ ಹಾಕಿ ರ್ಯಾಂಕಿಂಗ್‌ನಲ್ಲಿ ಮತ್ತೆ 3ನೇ ಸ್ಥಾನಕ್ಕೇರಿದೆ. ಭಾನುವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ 1 ಸ್ಥಾನ ಪ್ರಗತಿ ಸಾಧಿಸಿತು. ಸದ್ಯ ಭಾರತ 2771 ಅಂಕಗಳನ್ನು ಸಂಪಾದಿಸಿದ್ದರೆ, ನೆದರ್‌ಲೆಂಡ್ಸ್(3095 ಅಂಕ) ಹಾಗೂ ಬೆಲ್ಜಿಯಂ(2917) ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. 3ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ 4ನೇ ಸ್ಥಾನಕ್ಕೆ ಕುಸಿಯಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ 2ನೇ ಬಾರಿಗೆ 3ನೇ ಸ್ಥಾನಕ್ಕೇರಿದೆ. ಈ ಮೊದಲು 2021ರಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಳಿಕ 3ನೇ ಸ್ಥಾನ ಪಡೆದಿತ್ತು.
ಏಷ್ಯನ್ ಹಾಕಿ ಸಾಧಕರಿಗೆ ನಗದು ಬಹುಮಾನ ಪ್ರಕಟ
ಚೆನ್ನೈ: 4ನೇ ಬಾರಿ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ ಹಾಕಿ ಇಂಡಿಯಾ ಹಾಗೂ ತಮಿಳುನಾಡು ಸರ್ಕಾರ ನಗದು ಬಹುಮಾನ ಘೋಷಿಸಿದೆ. ತಮಿಳ್ನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತಂಡಕ್ಕೆ ಅಭಿನಂದನೆ ಸಲ್ಲಿಸಿ 1.1 ಕೋಟಿ ರು. ನಗದು ಬಹುಮಾನ ನೀಡುವುದಾಗಿ ಟ್ವೀಟರ್‌ನಲ್ಲಿ ಘೋಷಿಸಿದ್ದಾರೆ. ಇದೇ ವೇಳೆ ಹಾಕಿ ಇಂಡಿಯಾ ತಂಡದ ಪ್ರತಿ ಆಟಗಾರನಿಗೆ ತಲಾ 3 ಲಕ್ಷ ರು. ಹಾಗೂ ಸಹಾಯಕ ಸಿಬ್ಬಂದಿಗೆ ತಲಾ 1.5 ಲಕ್ಷ ರು. ಬಹುಮಾನ ನೀಡುವುದಾಗಿ ಪ್ರಕಟಿಸಿದೆ.
Breaking: ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಚಾಂಪಿಯನ್
ಭಾರತದ ಮುಡಿಗೇರಿದ ಏಷ್ಯನ್ ಹಾಕಿ ಕಿರೀಟ!
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತದ ಪಾರುಪತ್ಯ ಮುಂದುವರಿದಿದ್ದು, ದಾಖಲೆಯ 4ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ಅತ್ಯಾಕರ್ಷಕ ಕಮ್‌ಬ್ಯಾಕ್‌ಗೆ ಸಾಕ್ಷಿಯಾದ 7ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಪಡೆ, ಬಲಿಷ್ಠ ಮಲೇಷ್ಯಾ ವಿರುದ್ದ 4-3 ಗೋಲುಗಳಿಂದ ರೋಚಕ ಜಯಗಳಿಸಿತು. ಸೋಲಿನ ಸುಳಿಗೆ ಸಿಲುಕಿದ್ದರೂ 11 ನಿಮಿಷಗಳ ಅಂತರಲ್ಲಿ 3 ಗೋಲು ಬಾರಿಸಿ ಭಾರತ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿತು. 5ನೇ ಬಾರಿ ಬಾರಿ ಫೈನಲ್ ಆಡಿದ ಭಾರತ 2018ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಚೊಚ್ಚಲ ಬಾರಿ ಫೈನಲ್‌ಗೇರಿದ್ದ ಮಲೇಷ್ಯಾದ ಟ್ರೋಫಿ ಎತ್ತಿಹಿಡಿಯುವ ಕನಸು ಭಗ್ನಗೊಂಡಿತು.
ಐಪಿಎಲ್ ಸ್ಟಾರ್‌ಗಳನ್ನು ಕೆಡವಿ ಟಿ20 ಸರಣಿ ಗೆದ್ದ ವಿಂಡೀಸ್!
ಆರಂಭದಲ್ಲೇ ಉಭಯ ತಂಡಗಳಿಂದ ಎದುರಾದ ತೀವ್ರ ಪೈಪೋಟಿ ಕ್ರೀಡಾಭಿಮಾನಿಗಳಿಗೆ ಫೈನಲ್ ಪಂದ್ಯದ ಥ್ರಿಲ್ ನೀಡಿತು. 9ನೇ ನಿಮಿಷದಲ್ಲೇ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಜುಗರಾಜ್ ಸಿಂಗ್ ಭಾರತದ ಮುನ್ನಡೆಗೆ ಕಾರಣರಾದರು. ಆದರೆ ಪಂದ್ಯದಲ್ಲಿ ಸಮಬಲ ಸಾಧಿಸಲು ಮಲೇಷ್ಯಾಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. 14ನೇ ನಿಮಿಷದಲ್ಲಿ ಮಲೇಷ್ಯಾದ ಅಬು ಕಮಾಲ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಬಳಿಕ 2ನೇ ಕ್ವಾರ್ಟರ್‌ನಲ್ಲಿ ಮಲೇಷ್ಯಾ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. 4 ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದ ಮಲೇಷ್ಯಾ 2ರಲ್ಲಿ ಗೋಲು ದಾಖಲಿಸಿ ಮುನ್ನಡೆ ಪಡೆಯಿತು. 2ನೇ ಕ್ವಾರ್ಟರ್ ಮುಕ್ತಾಯಕ್ಕೆ 1-3ರಿಂದ ಹಿನ್ನಡೆ ಅನುಭವಿಸಿದ ಭಾರತ ಬಳಿಕ ಆಕ್ರಮಣಕಾರಿ ಆಟಕ್ಕಿಳಿದರೂ ಮಲೇಷ್ಯಾದ ರಕ್ಷಣಾ ಪಡೆ ಭಾರತವನ್ನು ಹಿಮ್ಮೆಟ್ಟಿಸಿತು. ಇನ್ನೇನು ಪಂದ್ಯ ಭಾರತದ ಕೈ ಜಾರಿತು ಎನ್ನುವಷ್ಟರಲ್ಲಿ, 3ನೇ ಕ್ವಾರ್ಟರ್‌ನ ಕೊನೆ ನಿಮಿಷದಲ್ಲಿ ಭಾರತ ಎರಡೆರಡು ಗೋಲು ದಾಖಲಿಸಿ ಪಂದ್ಯವನ್ನು ಮತ್ತೆ ತನ್ನತ್ತ ಒಲಿಸಿಕೊಂಡಿತು. ಪೆನಾಲ್ಟಿ ಸ್ಟ್ರೋಕ್ ಮೂಲಕ ಹರ್ಮನ್‌ಪ್ರೀತ್ ಗೋಲು ಬಾರಿಸಿದರೆ, ಕೆಲವೇ ಸೆಕೆಂಡ್ ಬಳಿಕ ಗುರ್ಜಂತ್ ಸಿಂಗ್ ಗೋಲು ಬಾರಿಸಿ 3-3 ಸಮಬಲಕ್ಕೆ ಕಾರಣರಾದರು.
ಮತ್ತಷ್ಟು ರೋಚಕತೆ ಹುಟ್ಟು ಹಾಕಿದ ಕೊನೆ ಕ್ವಾರ್ಟರ್‌ನಲ್ಲಿ ಮಲೇಷ್ಯಾ ತೀವ್ರ ಹೋರಾಟ ಪ್ರದರ್ಶಿಸಿದರೂ ಸೋಲು ತಪ್ಪಿಸಲಾಗಲಿಲ್ಲ. 56ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ಹೊಡೆದ ಆಕರ್ಷಕ ಗೋಲು ಭಾರತ ಗೆಲುವು ಖಚಿತಪಡಿಸಿಕೊಳ್ಳುವುದರ ಜೊತೆಗೆ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತ!
ಟೂರ್ನಿಯಲ್ಲಿ ಭಾರತ 4ನೇ ಬಾರಿಗೆ ಪ್ರಶಸ್ತಿ ಜಯಿಸಿದ್ದು, 3 ಬಾರಿ ಚಾಂಪಿಯನ್ ಪಾಕಿಸ್ತಾನವನ್ನು ಹಿಂದಿಕ್ಕಿದೆ. 2011ರ ಚೊಚ್ಚಲ ಆವೃತ್ತಿ ಹಾಗೂ ಬಳಿಕ 2016ರಲ್ಲಿ ಚಾಂಪಿಯನ್ ಆಗಿದ್ದ ಭಾರತ, ಬಳಿಕ 2018ರಲ್ಲಿ ಪಾಕಿಸ್ತಾನ ಜೊತೆ ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಕಳೆದ ಆವೃತ್ತಿಯಲ್ಲಿ ಕೊರಿಯಾ ಚಾಂಪಿಯನ್ ಆಗಿತ್ತು.
ಜಪಾನ್‌ಗೆ 3ನೇ ಸ್ಥಾನ
ಫೈನಲ್‌ಗೂ ಮುನ್ನ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕೊರಿಯಾ ವಿರುದ್ಧ ಜಪಾನ್ 5-3 ಗೋಲುಗಳಿಂದ ಜಯಗಳಿಸಿತು. ಜಪಾನ್ ತಂಡ ಕಳೆದ ಆವೃತ್ತಿಯಲ್ಲಿ ದ.ಕೊರಿಯಾ ವಿರುದ್ಧವೇ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.