Asianet Suvarna News Asianet Suvarna News

ಜೋಹರ್‌ ಹಾಕಿ ಕಪ್‌ ಫೈನಲ್‌: ಆಸೀಸ್‌ ಮಣಿಸಿ ಭಾರತ ಚಾಂಪಿಯನ್

ಮೂರನೇ ಬಾರಿಗೆ ಜೋಹರ್ ಕಪ್ ಹಾಕಿ ಟ್ರೋಫಿ ಗೆದ್ದ ಭಾರತ
ಆಸ್ಟ್ರೇಲಿಯಾ ವಿರುದ್ದ ಶೂಟೌಟ್‌ನಲ್ಲಿ ರೋಚಕ ಗೆಲುವು ಸಾಧಿಸಿದ ಭಾರತ
ಈ ಮೊದಲು ಭಾರತ 2013, 2014ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು

India Beat Australia in Shootout To Win 3rd Sultan Of Johar Cup title kvn
Author
First Published Oct 30, 2022, 9:10 AM IST

ಜೋಹರ್‌ ಬಹ್ರು(ಅ.30): 5 ವರ್ಷಗಳ ಬಳಿಕ ಭಾರತ ಸುಲ್ತಾನ್‌ ಆಫ್‌ ಜೋಹರ್‌ ಕಿರಿಯರ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿದೆ. ಭಾರೀ ರೋಚಕತೆಯಿಂದ ಕೂಡಿದ್ದ ಫೈನಲ್‌ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ಶೂಟೌಟ್‌ನಲ್ಲಿ 5-4 ಗೋಲುಗಳ ಅಂತರದಲ್ಲಿ ಭಾರತ ಗೆಲುವು ಸಾಧಿಸಿತು.

ನಿಗದಿತ 60 ನಿಮಿಷಗಳ ಮುಕ್ತಾಯಕ್ಕೆ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದವು. ಹೀಗಾಗಿ ಫಲಿತಾಂಶಕ್ಕಾಗಿ ಶೂಟೌಟ್‌ ಮೊರೆ ಹೋಗಲಾಯಿತು. ಭಾರತ ಈ ಮೊದಲು 2013, 2014ರಲ್ಲಿ ಚಾಂಪಿಯನ್‌ ಆಗಿತ್ತು. 2012, 2015, 2018 ಹಾಗೂ 2019ರಲ್ಲಿ ರನ್ನರ್‌ ಆಪ್‌ ಆಗಿತ್ತು. 2020, 2021ರಲ್ಲಿ ಕೋವಿಡ್‌ ಕಾರಣದಿಂದ ಟೂರ್ನಿ ನಡೆದಿರಲಿಲ್ಲ.

ಭಾರತ ಕಿರಿಯರ ಹಾಕಿ ತಂಡವು ಮೂರನೇ ಬಾರಿಗೆ ಜೋಹರ್ ಕಪ್ ಟ್ರೋಫಿ ಜಯಿಸಿದ ಬೆನ್ನಲ್ಲೇ ಹಾಕಿ ಇಂಡಿಯಾ, ಬಂಪರ್ ನಗದು ಬಹುಮಾನ ಘೋಷಿಸಿದೆ. ಚಾಂಪಿಯನ್‌ ಭಾರತ ತಂಡದ ಎಲ್ಲಾ ಆಟಗಾರರಿಗೆ ತಲಾ 2 ಲಕ್ಷ ರುಪಾಯಿ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ತಲಾ ಒಂದು ಲಕ್ಷ ರುಪಾಯಿ ಬಹುಮಾನ ಘೋಷಣೆ ಮಾಡಿದೆ. 

ಫ್ರೆಂಚ್‌ ಓಪನ್‌ ಫೈನಲ್‌ಗೆ ಸಾತ್ವಿಕ್‌-ಚಿರಾಗ್‌ ಲಗ್ಗೆ

ಪ್ಯಾರಿಸ್‌: ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್ನರಾದ ಭಾರತದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿಇಲ್ಲಿ ನಡೆಯುತ್ತಿರುವ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ ಫೈನಲ್‌ಗೇರಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.1 ಜೋಡಿಗೆ ಸೋಲುಣಿಸಿದ್ದ ಭಾರತೀಯರು ಸೆಮಿಫೈನಲ್‌ನಲ್ಲಿ ಕೊರಿಯಾದ ಚೊಯ್‌ ಸೊ ಗ್ಯು ಹಾಗೂ ಕಿಮ್‌ ವೊನ್‌ ಹೊ ವಿರುದ್ಧ 21-18, 21-14 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಈ ವರ್ಷ ಇಂಡಿಯಾ ಓಪನ್‌ ಟೂರ್ನಿ ಗೆದ್ದಿದ್ದ ಸಾತ್ವಿಕ್‌-ಚಿರಾಗ್‌ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಬ್ಯಾಡ್ಮಿಂಟನ್‌ ಕಿರಿಯರ ವಿಶ್ವ ಕೂಟ: ಶಂಕರ್‌ ಫೈನಲ್‌ಗೆ

ಸ್ಯಾಂಟ್ಯಾಂಡರ್‌(ಸ್ಪೇನ್‌): ಭಾರತದ ಶಂಕರ್‌ ಮುತ್ತುಸ್ವಾಮಿ ಇಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌(ಅಂಡರ್‌-19)ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಪಾನಿಟ್ಚಾಫೆäನ್‌ ವಿರುದ್ಧ 21-13, 21-15 ಗೇಮ್‌ಗಳಲ್ಲಿ ಗೆದ್ದರು. ಟೂರ್ನಿ ಇತಿಹಾಸದಲ್ಲಿ ಪ್ರಶಸ್ತಿ ಜಯಿಸಿದ ಭಾರತದ ಏಕೈಕ ಶಟ್ಲರ್‌ ಎನ್ನುವ ದಾಖಲೆ ಸೈನಾ ನೆಹ್ವಾಲ್‌ ಹೆಸರಿನಲ್ಲಿದೆ. ಅವರು 2008ರಲ್ಲಿ ಚಾಂಪಿಯನ್‌ ಆಗಿದ್ದರು. 1996ರಲ್ಲಿ ಅಪರ್ಣಾ ಪೋಪಟ್‌, 2015ರಲ್ಲಿ ಸಿರಿಲ್‌ ವರ್ಮಾ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 2006ರಲ್ಲಿ ಸೈನಾ ಕೂಡ ಬೆಳ್ಳಿ ಗೆದ್ದಿದ್ದರು

ಪ್ರೊ ಕಬಡ್ಡಿ: ಡೆಲ್ಲಿ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್‌

ಪುಣೆ: ಕೊನೆ ಕ್ಷಣದಲ್ಲಿ ದಬಾಂಗ್‌ ಡೆಲ್ಲಿಯನ್ನು ಆಲೌಟ್‌ ಮಾಡಿದ ಬೆಂಗಳೂರು ಬುಲ್ಸ್‌ 47-43 ಅಂಕಗಳಲ್ಲಿ ರೋಚಕ ಗೆಲುವು ಸಾಧಿಸಿ 9ನೇ ಆವೃತ್ತಿ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಯುವ ರೈಡರ್‌ ಭರತ್‌ 20 ರೈಡ್‌ಗಳಲ್ಲಿ 20 ಅಂಕ ಪಡೆದು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಮೊದಲಾರ್ಧದಲ್ಲೇ ಡೆಲ್ಲಿಯನ್ನು 2 ಬಾರಿ ಆಲೌಟ್‌ ಮಾಡಿದ ಬುಲ್ಸ್‌ 20 ನಿಮಿಷಗಳ ಆಟದ ಮುಕ್ತಾಯಕ್ಕೆ 27-18ರ ಮುನ್ನಡೆ ಪಡೆಯಿತು. ಆದರೆ ದ್ವಿತೀಯಾರ್ಧದಲ್ಲಿ ಡೆಲ್ಲಿ ತಿರುಗಿಬಿತ್ತು. 26ನೇ ನಿಮಿಷದಲ್ಲಿ ಬುಲ್ಸ್‌ ಪಡೆಯನ್ನು ಆಲೌಟ್‌ ಮಾಡಿದ ಡೆಲ್ಲಿ 29ನೇ ನಿಮಿಷದಲ್ಲಿ 31-31ರ ಮುನ್ನಡೆ ಪಡೆಯಿತು.

FIH Pro League ನ್ಯೂಜಿಲೆಂಡ್ ವಿರುದ್ದ ರೋಚಕ ಗೆಲುವು ದಾಖಲಿಸಿ ಶುಭಾರಂಭ ಮಾಡಿದ ಭಾರತ

ಕೊನೆ ಒಂದೂವರೆ ನಿಮಿಷ ಬಾಕಿ ಇದ್ದಾಗ ಬುಲ್ಸ್‌ ಮತ್ತೆ ಆಲೌಟ್‌ ಆಗಿ 37-42ರ ಹಿನ್ನಡೆ ಕಂಡಿತು. ಆದರೆ ಭರತ್‌ರ ಒಂದೇ ರೈಡ್‌ ಆಲೌಟ್‌ ಸೇರಿ ಒಟ್ಟು 5 ಅಂಕಕ್ಕೆ ಸಾಕ್ಷಿಯಾಯಿತು. ಇದು ಪಂದ್ಯ ಬುಲ್ಸ್‌ ಪರ ವಾಲುವಂತೆ ಮಾಡಿತು. ದಿನದ 2ನೇ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ 30-19ರಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಜಯಿಸಿತು.

ಇಂದಿನ ಪಂದ್ಯಗಳು: 
ಬೆಂಗಳೂರು ಬುಲ್ಸ್‌-ಜೈಪುರ, ಸಂಜೆ 7.30ಕ್ಕೆ, 
ತಲೈವಾಸ್‌-ಡೆಲ್ಲಿ, ರಾತ್ರಿ 8.30ಕ್ಕೆ

Follow Us:
Download App:
  • android
  • ios