Hockey World Cup: ಇಂದು ಹಾಕಿ ವಿಶ್ವಕಪ್ ಸೆಮೀಸ್ ಫೈಟ್‌..!

ನಿರ್ಣಾಯಕ ಘಟ್ಟದತ್ತ ಹಾಕಿ ವಿಶ್ವಕಪ್‌ ಟೂರ್ನಿ
ಮೊದಲ ಸೆಮೀಸ್‌ನಲ್ಲಿ ಆಸ್ಟ್ರೇಲಿಯಾಗೆ ಜರ್ಮನಿ ಸವಾಲು
ಎರಡನೇ ಸೆಮೀಸ್‌ನಲ್ಲಿ ಬೆಲ್ಜಿಯಂ-ನೆದರ್‌ಲೆಂಡ್ಸ್‌ ಹೋರಾಟ

Hockey World Cup Semi Final Australia take on Germany in first match kvn

ಭುವನೇಶ್ವರ: 15ನೇ ಆವೃತ್ತಿಯ ಎಫ್‌ಐಎಚ್‌ ಹಾಕಿ ವಿಶ್ವಕಪ್‌ ಸೆಮಿಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, 4 ಚಾಂಪಿಯನ್‌ ತಂಡಗಳ ನಡುವಿನ ರೋಚಕ ಕಾದಾಟಕ್ಕೆ ಶುಕ್ರವಾರ ಭುವನೇಶ್ವರದ ಕಳಿಂಗಾ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮೊದಲ ಸೆಮೀಸ್‌ನಲ್ಲಿ 3 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾಕ್ಕೆ 2 ಬಾರಿ ಪ್ರಶಸ್ತಿ ವಿಜೇತ ಜರ್ಮನಿ ಸವಾಲು ಎದುರಾಗಲಿದೆ. ಮತ್ತೊಂದು ಸೆಮೀಸ್‌ನಲ್ಲಿ 3 ಬಾರಿ ಚಾಂಪಿಯನ್‌ ನೆದರ್‌ಲೆಂಡ್‌್ಸ ಹಾಗೂ ಹಾಲಿ ಚಾಂಪಿಯನ್‌ ಬೆಲ್ಜಿಯಂ ಸೆಣಸಾಡಲಿವೆ.

ಸತತ 12ನೇ ಬಾರಿಗೆ ಹಾಕಿ ವಿಶ್ವಕಪ್‌ನ ಸೆಮಿಫೈನಲ್‌ ಪ್ರವೇಶಿಸಿರುವ ಆಸ್ಪ್ರೇಲಿಯಾ, 1986, 2010, 2014ರಲ್ಲಿ ಚಾಂಪಿಯನ್‌ ಆಗಿತ್ತು. ಕಳೆದ ಆವೃತ್ತಿಯಲ್ಲಿ ಸೆಮೀಸ್‌ನಲ್ಲಿ ಸೋಲನುಭವಿಸಿದ್ದ ತಂಡ 6ನೇ ಬಾರಿ ಫೈನಲ್‌ ಪ್ರವೇಶಿಸುವ ತವಕದಲ್ಲಿದೆ. ಗುಂಪು ಹಂತದಲ್ಲಿ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದ ಆಸೀಸ್‌, ಸ್ಪೇನ್‌ ವಿರುದ್ಧ ಜಯಿಸಿತ್ತು. ಮತ್ತೊಂದೆಡೆ ಕ್ವಾರ್ಟರ್‌ ಪಂದ್ಯದ ಪೆನಾಲ್ಟಿಶೂಟೌಟ್‌ನಲ್ಲಿ 4-3 ಗೋಲುಗಳಿಂದ ಇಂಗ್ಲೆಂಡನ್ನು ರೋಚಕವಾಗಿ ಮಣಿಸಿದ 2 ಬಾರಿ ಚಾಂಪಿಯನ್‌ ಜರ್ಮನಿ ವಿಶ್ವಕಪ್‌ನಲ್ಲಿ 12ನೇ ಬಾರಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. 2010ರ ಬಳಿಕ ಮೊದಲ ಬಾರಿ ಅಂತಿಮ 4ರ ಫಟ್ಟಪ್ರವೇಶಿಸಿರುವ ತಂಡ 5ನೇ ಫೈನಲ್‌ ಮೇಲೆ ಕಣ್ಣಿಟ್ಟಿದೆ.

ಡಚ್‌ vs ಬೆಲ್ಜಿಯಂ ಫೈಟ್‌

ಕಳೆದೆರಡು ಆವೃತ್ತಿಗಳ ರನ್ನರ್‌-ಅಪ್‌ ನೆದರ್‌ಲೆಂಡ್‌್ಸ ಈ ಬಾರಿಯೂ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದ್ದು, ಸೆಮೀಸ್‌ನಲ್ಲಿ ಬೆಲ್ಜಿಯಂ ವಿರುದ್ಧ ಸೆಣಸಾಡಲಿದೆ. ಕಳೆದ ಆವೃತ್ತಿ ವಿಶ್ವಕಪ್‌ನಲ್ಲಿ ಭುವನೇಶ್ವರದಲ್ಲೇ ನಡೆದಿದ್ದ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಡಚ್‌ ಪಡೆ ಸೋತಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಗುಂಪು ಹಂತದಲ್ಲಿ ಎಲ್ಲಾ 3 ಪಂದ್ಯ ಗೆದ್ದಿದ್ದ ನೆದರ್‌ಲೆಂಡ್‌್ಸ, ಕ್ವಾರ್ಟರ್‌ನಲ್ಲಿ ಕೊರಿಯಾ ವಿರುದ್ಧ 5-1 ಗೋಲುಗಳಿಂದ ಗೆಲುವು ಸಾಧಿಸಿತ್ತು. ತಂಡಕ್ಕಿದು 11ನೇ ಸೆಮಿಫೈನಲ್‌ ಆಗಿದ್ದು, ದಾಖಲೆಯ 8ನೇ ಬಾರಿ ಫೈನಲ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಬೆಲ್ಜಿಯಂ 2ನೇ ಬಾರಿ ಪ್ರಶಸ್ತಿ ಸುತ್ತಿಗೇರುವ ಕಾತರದಲ್ಲಿದೆ.

ಇಂದಿನ ಪಂದ್ಯಗಳು

ಆಸ್ಪ್ರೇಲಿಯಾ-ಜರ್ಮನಿ, ಸಂಜೆ 4.30ಕ್ಕೆ

ನೆದರ್‌ಲೆಂಡ್‌್ಸ-ಬೆಲ್ಜಿಯಂ, ಸಂಜೆ 7ಕ್ಕೆ

9-16ನೇ ಸ್ಥಾನ: ಭಾರತಕ್ಕೆ 8-0 ಭರ್ಜರಿ ಗೆಲುವು

ರೂರ್ಕೆಲಾ: ಹಾಕಿ ವಿಶ್ವಕಪ್‌ನ ಕ್ರಾಸ್‌ ಓವರ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಪೆನಾಲ್ಟಿಶೂಟೌಟ್‌ನ ಸಡನ್‌ ಡೆತ್‌ನಲ್ಲಿ ಆಘಾತಕಾರಿ ಸೋಲುಂಡಿದ್ದ ಆತಿಥೇಯ ಭಾರತ, 9ರಿಂದ 16ನೇ ಸ್ಥಾನಕ್ಕಾಗಿ ನಡೆದ ಮೊದಲ ಪಂದ್ಯದಲ್ಲಿ ಜಪಾನ್‌ ವಿರುದ್ಧ 8-0 ಗೋಲುಗಳಿಂದ ಭರ್ಜರಿ ಜಯಗಳಿಸಿದೆ. ಶನಿವಾರ 9-12ನೇ ಸ್ಥಾನಕ್ಕೆ ನಡೆಯುವ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಸೆಣಸಾಡಲಿದೆ.

ಗುಂಪು ಹಂತ ಹಾಗೂ ಕ್ರಾಸ್‌ ಓವರ್‌ನಲ್ಲಿ ಹಲವು ಪೆನಾಲ್ಟಿಕಾರ್ನರ್‌ ಅವಕಾಶಗಳನ್ನು ಬಳಸಿಕೊಳ್ಳಲು ವಿಫಲವಾಗಿದ್ದ ಭಾರತ ಈ ಪಂದ್ಯದಲ್ಲಿ ಸುಧಾರಿತ ಆಟ ಪ್ರದರ್ಶಿಸಿತು. 11 ಪೆನಾಲ್ಟಿಕಾರ್ನರ್‌ಗಳಲ್ಲಿ ಐದನ್ನು ಗೋಲಾಗಿ ಪರಿವರ್ತಿಸಿತು. 32ನೇ ನಿಮಿಷದಲ್ಲಿ ಪೆನಾಲ್ಟಿಕಾರ್ನರ್‌ ಮೂಲಕ ಮಂದೀಪ್‌ ಗೋಲಿನ ಖಾತೆ ತೆರೆದರೆ, 35 ಮತ್ತು 43ನೇ ನಿಮಿಷಗಳಲ್ಲಿ ಅಭಿಷೇಕ್‌ ಗೋಲು ದಾಖಲಿಸಿ ಮುನ್ನಡೆ ಹೆಚ್ಚಿಸಿದರು. ವಿವೇಕ್‌ ಸಾಗರ್‌ 39ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರೆ, ಹರ್ಮನ್‌ಪ್ರೀತ್‌ ಸಿಂಗ್‌ 45, 58ನೇ ನಿಮಿಷಗಳಲ್ಲಿ ಪೆನಾಲ್ಟಿಕಾರ್ನರ್‌ ಮೂಲಕ ಗೋಲು ಹೊಡೆದರು. ಮನ್‌ಪ್ರೀತ್‌ ಸಿಂಗ್‌ ಹಾಗೂ ಸುಖ್‌ಜೀತ್‌ ಸಿಂಗ್‌ ಕೊನೆ 2 ನಿಮಿಷಗಳಲ್ಲಿ ಮತ್ತೆರಡು ಗೋಲು ಬಾರಿಸಿ ಗೆಲುವಿನ ಅಂತರವನ್ನು ಮತ್ತಷ್ಟುಹೆಚ್ಚಿಸಿದರು.

Australian Open: ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ರಬೈಕೆನಾ-ಸಬಲೆಂಕಾ ಫೈಟ್

9ರಿಂದ 16ನೇ ಸ್ಥಾನಕ್ಕಾಗಿ ನಡೆದ ಮತ್ತೊಂದು ಪಂದ್ಯದಲ್ಲಿ ಚಿಲಿ ವಿರುದ್ಧ ಅರ್ಜೆಂಟೀನಾ 8-0 ಗೋಲುಗಳಿಂದ ಗೆಲುವು ಸಾಧಿಸಿತು. ಫ್ರಾನ್ಸ್‌ ವಿರುದ್ಧ ವೇಲ್ಸ್‌ ಪೆನಾಲ್ಟಿಶೂಟೌಟ್‌ನಲ್ಲಿ 2-1ರಿಂದ ಗೆದ್ದರೆ, ಮಲೇಷ್ಯಾ ವಿರುದ್ಧ ದ.ಆಫ್ರಿಕಾ 6-3 ಗೋಲುಗಳಿಂದ ಜಯಗಳಿಸಿತು.

Latest Videos
Follow Us:
Download App:
  • android
  • ios