Australian Open: ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ರಬೈಕೆನಾ-ಸಬಲೆಂಕಾ ಫೈಟ್
ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್‌ಗೆ ಕ್ಷಣಗಣನೆ
ಪ್ರಶಸ್ತಿಗಾಗಿಂದು ಎಲೈನಾ ರಬೈಕೆನಾ ಹಾಗೂ ಅರಿನಾ ಸಬಲೆಂಕಾ ನಡುವೆ ಬಿಗ್ ಫೈಟ್
ಹಾಲಿ ವಿಂಬಲ್ಡನ್ ಚಾಂಪಿಯನ್ ಎಲೈನಾ ರಬೈಕೆನಾಗೆ ಮತ್ತೊಂದು ಗ್ರ್ಯಾನ್ ಸ್ಲಾಂ ಗೆಲ್ಲುವ ಗುರಿ
ಮೆಲ್ಬರ್ನ್(ಜ.27): ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಫೈನಲ್ ಈ ಬಾರಿ ಹಾಲಿ ವಿಂಬಲ್ಡನ್ ಚಾಂಪಿಯನ್ ಎಲೈನಾ ರಬೈಕೆನಾ ಹಾಗೂ ಅರಿನಾ ಸಬಲೆಂಕಾ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ. ಕಜಕಸ್ತಾನದ ರಬೈಕೆನಾ ಮೊದಲ ಸೆಮಿಫೈನಲ್‌ನಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಗೆದ್ದರೆ, ಸಬಲೆಂಕಾ ಪೋಲೆಂಡ್‌ನ ಮಗ್ಡ ಲಿನೆಟ್ಟೆವಿರುದ್ಧ ಜಯಭೇರಿ ಬಾರಿಸಿದರು.
ಗುರುವಾರ 1 ಗಂಟೆ 41 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್ ಅಂತಿಮ 4ರ ಸುತ್ತಿನಲ್ಲಿ ರಬೈಕೆನಾ 7-6(7/4), 6-3 ನೇರ ಸೆಟ್‌ಗಳಲ್ಲಿ ಜಯಗಳಿಸಿ, ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ 2ನೇ, ಆಸ್ಪ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದರು. ರಬೈಕೆನಾ 4ನೇ ಸುತ್ತಿನಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್‌ರನ್ನು ಸೋಲಿಸಿದ್ದರು. 2012, 2013ರಲ್ಲಿ ಆಸ್ಪ್ರೇಲಿಯನ್ ಓಪನ್ ಗೆದ್ದಿದ್ದ ಮಾಜಿ ವಿಶ್ವ ನಂ.1 ಅಜರೆಂಕಾರ ಮತ್ತೊಂದು ಪ್ರಶಸ್ತಿ ಕನಸು ಭಗ್ನಗೊಂಡಿತು.
ಮತ್ತೊಂದು ಸೆಮೀಸ್‌ನಲ್ಲಿ ಶ್ರೇಯಾಂಕರಹಿತ ಲಿನೆಟ್ಟೆ ವಿರುದ್ಧ ಸಬಲೆಂಕಾ 7-6(7/1), 6-1 ನೇರ ಗೇಮ್‌ಗಳಲ್ಲಿ ಜಯ ಸಾಧಿಸಿದರು. ಇದರೊಂದಿಗೆ ಚೊಚ್ಚಲ ಬಾರಿ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೇರಿದ್ದ ಲಿನೆಟ್ಟೆಯ ಚಾಂಪಿಯನ್ ಪಟ್ಟದ ಕನಸು ನನಸಾಗಲಿಲ್ಲ. ಈ ಮೊದಲು 3 ಬಾರಿ ಗ್ರ್ಯಾನ್‌ಸ್ಲಾಂ ಸೆಮಿಫೈನಲ್‌ನಲ್ಲಿ ಸೋತಿದ್ದ ಸಬಲೆಂಕಾ ಮೊದಲ ಬಾರಿ ಪ್ರಶಸ್ತಿ ಸುತ್ತಿಗೇರಿದರು. ಫೈನಲ್ ಪಂದ್ಯ ಶನಿವಾರ ನಡೆಯಲಿದೆ.
ಸೆಮಿಗೆ ಜೋಕೋ!
ಮೆಲ್ಬರ್ನ್: 22ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದು ರಾಫೆಲ್ ನಡಾಲ್ ದಾಖಲೆ ಸರಿಗಟ್ಟಲು ಎದುರು ನೋಡುತ್ತಿರುವ ಸರ್ಬಿಯಾದ ನೋವಾಕ್ ಜೋಕೋವಿಚ್ ಆಸ್ಪ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Hockey World cup ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು, 8-0 ಗೋಲುಗಳ ಸುರಿಮಳೆ!
9 ಬಾರಿ ಆಸ್ಪ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿರುವ ಮಾಜಿ ವಿಶ್ವ ನಂ.1 ಜೋಕೋ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.6, ರಷ್ಯಾದ ಆ್ಯಂಡ್ರೆ ರುಬ್ಲೆವ್ ವಿರುದ್ಧ ಸುಲಭ ಗೆಲುವು ಸಾಧಿಸಿದರು. 2 ಗಂಟೆ 3 ನಿಮಿಷಗಳ ಕಾಲ ನಡೆದ ಪಂದ್ಯವನ್ನು ಜೋಕೋ 6-1, 6-2, 6-4 ನೇರ ಸೆಟ್‌ಗಳಲ್ಲಿ ಜಯಿಸಿ, ದಾಖಲೆಯ 44ನೇ ಬಾರಿ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೇರಿದರು. ಮತ್ತೊಂದು ಕ್ವಾರ್ಟರ್ ಹಣಾಹಣಿಯಲ್ಲಿ ಅಮೆರಿಕದ ಬೆನ್ ಶೆಲ್ಟನ್ ವಿರುದ್ಧ ಅದೇ ದೇಶದ ಟಾಮಿ ಪಾಲ್ 7-6(8/6), 6-3, 5-7, 6-4 ಸೆಟ್‌ಗಳಿಂದ ಗೆದ್ದು ಮೊದಲ ಸಲ ಸೆಮಿಫೈನಲ್‌ಗೇರಿದರು. ಸೆಮೀಸ್ ಪಾಲ್, ಜೋಕೋವಿಚ್ ವಿರುದ್ಧ ಆಡಲಿದ್ದಾರೆ.
ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್‌ಗೆ
ಜಕಾರ್ತ: ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಸೇನ್ ಮಲೇಷ್ಯಾದ ತ್ಸೆ ಯಂಗ್ ವಿರುದ್ಧ 19-21, 21-8, 21-17ರಿಂದ ಜಯಗಳಿಸಿದರು. ಆದರೆ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಚೀನಾದ ಹಾನ್ ಹ್ಯು ವಿರುದ್ಧ ಸೋತು ಹೊರಬಿದ್ದರು.
ಟಿಟಿ: 33ನೇ ಸ್ಥಾನಕ್ಕೆ ಬಾತ್ರಾ
ನವದೆಹಲಿ: ಭಾರತದ ತಾರಾ ಟೇಬಲ್ ಟೆನಿಸ್ ಪಟು ಮನಿಕಾ ಬಾತ್ರಾ ವಿಶ್ವ ರಾರಯಂಕಿಂಗ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಜೀವನಶ್ರೇಷ್ಠ 33ನೇ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಶರತ್ ಕಮಾಲ್ 2 ಸ್ಥಾನ ಮೇಲೇರಿ 46ನೇ ಸ್ಥಾನ ಪಡೆದಿದ್ದು, ಜಿ.ಸತ್ಯನ್ 40ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಿಶ್ರ ಡಬಲ್ಸ್ ಜೋಡಿ ಮನಿತಾ-ಸತ್ಯನ್ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಿರಿಯರ ಬಾಸ್ಕೆಟ್‌ಬಾಲ್: ತಮಿಳುನಾಡು ಫೈನಲ್‌ಗೆ
ಬೆಂಗಳೂರು: 72ನೇ ರಾಷ್ಟ್ರೀಯ ಕಿರಿಯರ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಬಾಲಕರ ವಿಭಾಗದಲ್ಲಿ ಉತ್ತರ ಪ್ರದೇಶ ಹಾಗೂ ಬಾಲಕಿಯರ ವಿಭಾಗದಲ್ಲಿ ತಮಿಳುನಾಡು ತಂಡಗಳು ಫೈನಲ್ ಪ್ರವೇಶಿಸಿದೆ. ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಉ.ಪ್ರ. ತಂಡ ತಮಿಳುನಾಡು ವಿರುದ್ಧ ಗೆಲುವು ಸಾಧಿಸಿತು. ಬಾಲಕಿಯರ ವಿಭಾಗದ ಅಂತಿಮ 4ರ ಘಟ್ಟದ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ತಮಿಳುನಾಡು ಜಯಗಳಿಸಿತು.