Hockey World Cup: ಫ್ರಾನ್ಸ್ ಎದುರು ಆಸ್ಪ್ರೇಲಿಯಾಕ್ಕೆ 8-0 ಭರ್ಜರಿ ಗೆಲುವು
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಭರ್ಜರಿ ಶುಭಾರಂಭ
3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಫ್ರಾನ್ಸ್ ವಿರುದ್ದ ಭರ್ಜರಿ ಜಯಭೇರಿ
ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ತಂಡಗಳು ಟೂರ್ನಿಯಲ್ಲಿ ಶುಭಾಶಯ
ಭುವನೇಶ್ವರ(ಜ.14): 3 ಬಾರಿ ಚಾಂಪಿಯನ್ ಆಸ್ಪ್ರೇಲಿಯಾ ತಾನೇಕೆ ಈ ಸಲವೂ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನ್ನುವುದನ್ನು ಮೊದಲ ಪಂದ್ಯದಲ್ಲೇ ತೋರಿಸಿದೆ. ಫ್ರಾನ್ಸ್ ವಿರುದ್ಧ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ 8-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು.
ಅನುಭವಿ ಆಟಗಾರರಾದ ಟಾಮ್ ಕ್ರೇಗ್ ಹಾಗೂ ಜೆರೆಮಿ ಹೇವರ್ಡ್‌ರ ಹ್ಯಾಟ್ರಿಕ್ ಗೋಲುಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕ್ರೇಗ್ 8, 31 ಮತ್ತು 44ನೇ ನಿಮಿಷಗಳಲ್ಲಿ ಗೋಲು ಬಾರಿಸಿದರೆ, ಹೇವರ್ಡ್ ಕೇವಲ 12 ನಿಮಿಷಗಳ ಅಂತರದಲ್ಲಿ ಸಿಕ್ಕ ಮೂರು ಪೆನಾಲ್ಟಿಕಾರ್ನರ್(26, 28 ಮತ್ತು 38ನೇ ನಿಮಿಷ)ಗಳನ್ನು ಗೋಲಾಗಿ ಪರಿವರ್ತಿಸಿದರು. ಮತ್ತೆರಡು ಗೋಲುಗಳನ್ನು ಫ್ಲಿನ್(26ನೆ ನಿಮಿಷ) ಹಾಗೂ ವಿಕ್‌ಹ್ಯಾಮ್ ಟಾಮ್(53ನೇ ನಿಮಿಷ) ದಾಖಲಿಸಿದರು.
ಅರ್ಜೆಂಟೀನಾ, ಇಂಗ್ಲೆಂಡ್ ತಂಡಗಳ ಶುಭಾರಂಭ
ಭುವನೇಶ್ವರ: ರಿಯೋ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ತಂಡಗಳು ಶುಭಾರಂಭ ಮಾಡಿವೆ. ‘ಎ’ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 1-0ಯಲ್ಲಿ ಗೆದ್ದರೆ, ‘ಡಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವೇಲ್ಸ್ ವಿರುದ್ಧ 5-0 ಗೋಲುಗಳ ದೊಡ್ಡ ಗೆಲುವು ಸಂಪಾದಿಸಿತು.
ಭಾರತಕ್ಕೆ 2-0 ಗೆಲುವಿನ ಆರಂಭ!
ರೂರ್ಕೆಲಾ: ಎಫ್‌ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ತಂಡ ಗೆಲುವಿನ ಆರಂಭ ಪಡೆದಿದೆ. ಶುಕ್ರವಾರ ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನಿಸಿರುವ ಇಲ್ಲಿನ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ 2-0 ಗೋಲುಗಳ ಗೆಲುವು ಸಾಧಿಸಿತು.
ಭಾರತ ಶುಭಾರಂಭ ಮಾಡಿದರೂ ತಂಡದ ಕೆಲ ಸಮಸ್ಯೆಗಳು ಮುಂದುವರಿದಿದ್ದು, ಟೂರ್ನಿ ಸಾಗಿದಂತೆ ಅಪಾಯ ತಂದೊಡ್ಡುವ ಆತಂಕ ಮೂಡಿಸಿದೆ. ಪಂದ್ಯದಲ್ಲಿ ದೊರೆತ 5 ಪೆನಾಲ್ಟಿಕಾರ್ನರ್ ಅವಕಾಶಗಳಲ್ಲಿ ಭಾರತ ಗೋಲು ಗಳಿಸಿದ್ದು ಕೇವಲ ಒಂದರಲ್ಲಿ ಮಾತ್ರ. ಇನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿಸ್ಟೊ್ರೕಕ್ ಅವಕಾಶವನ್ನೂ ವ್ಯರ್ಥ ಮಾಡಿದರು. ಸುಲಭವಾಗಿ ಗೋಲು ಗಳಿಸುವ ಅವಕಾಶಗಳನ್ನೂ ಭಾರತ ಕೈಚೆಲ್ಲಿತು. ಗುಂಪು ಹಂತದ ಮುಕ್ತಾಯಕ್ಕೆ ಗೋಲು ವ್ಯತ್ಯಾಸದ ಆಧಾರದಲ್ಲಿ ಮುಂದಿನ ಹಂತದ ಸ್ಥಾನಗಳು ನಿರ್ಧಾರವಾಗುವ ಪರಿಸ್ಥಿತಿ ಎದುರಾದರೆ ಈ ಪಂದ್ಯದಲ್ಲಿ ಆದ ನಷ್ಟಭಾರತಕ್ಕೆ ಮುಳುವಾಗಬಹುದು.
ಹಾಕಿ ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ, ಬಲಿಷ್ಠ ಸ್ಪೇನ್ ವಿರುದ್ಧ 2-0 ಗೆಲುವು!
ಸಂಭ್ರಮ: ಭಾರತ ಪಂದ್ಯದ 12ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಪೆನಾಲ್ಟಿಕಾರ್ನರ್ ಅವಕಾಶದಲ್ಲಿ ಹರ್ಮನ್‌ಪ್ರೀತ್ ಬಾರಿಸಿದ ಚೆಂಡು ಸ್ಪೇನ್ ಗೋಲ್‌ಕೀಪರ್‌ನ ಪ್ಯಾಡ್‌ಗೆ ಬಡಿದು ಹಿಂದಿರುಗಿತು. ಗೋಲು ಪೆಟ್ಟಿಗೆಯ ಮುಂದೆಯೇ ಇದ್ದ ತವರಿನ ತಾರೆ, ಉಪನಾಯಕ ಅಮಿತ್ ರೋಹಿದಾಸ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ತಂಡದ ಖಾತೆ ತೆರೆದರು. ಸ್ಥಳೀಯ ಆಟಗಾರ ಟೂರ್ನಿಯಲ್ಲಿ ಭಾರತ ಪರ ಮೊದಲ ಗೋಲು ದಾಖಲಿಸಿದ್ದನ್ನು ಕಂಡು ಕ್ರೀಡಾಂಗಣದಲ್ಲಿ ನೆರೆದಿದ್ದ 20000ಕ್ಕೂ ಹೆಚ್ಚು ಅಭಿಮಾನಿಗಳು ಸಂಭ್ರಮಿಸಿದರು.
ಪಂದ್ಯದುದ್ದಕ್ಕೂ ಮಿಡ್‌ಫೀಲ್ಡ್‌ನಲ್ಲಿ ಮಿಂಚಿದ ಹಾರ್ದಿಕ್ ಸಿಂಗ್ 26ನೇ ನಿಮಿಷದಲ್ಲಿ ಭಾರತದ ಮುನ್ನಡೆಯನ್ನು 2-0ಗೇರಿಸಿದರು. ಅಂಕಣದ ಬಲ ಭಾಗದಿಂದ ಆಕ್ರಮಣಕಾರಿಯಾಗಿ ಮುನ್ನಡೆದ ಹಾರ್ದಿಕ್, ಸ್ಪೇನ್‌ನ ಹಲವು ಡಿಫೆಂಡರ್‌ಗಳ ಜೊತೆ ಗೋಲ್‌ಕೀಪರನ್ನೂ ವಂಚಿಸುವಲ್ಲಿ ಯಶಸ್ವಿಯಾದರು.
32ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಸ್ಟ್ರೋಕನ್ನು ಗೋಲಾಗಿಸುವಲ್ಲಿ ಹರ್ಮಿನ್‌ಪ್ರೀತ್ ವಿಫಲರಾದರು. ಪಂದ್ಯದಲ್ಲಿ ಸ್ಪೇನ್‌ಗೆ 3 ಪೆನಾಲ್ಟಿಕಾರ್ನರ್ ಅವಕಾಶ ದೊರೆತರೂ ಭಾರತದ ಯುವ ಗೋಲ್‌ಕೀಪರ್ ಕೃಷನ್ ಪಾಠಕ್‌ರನ್ನು ವಂಚಿಸಲು ಸಾಧ್ಯವಾಗಲಿಲ್ಲ.
ಕ್ರೀಡಾಂಗಣ ಹೌಸ್‌ಫುಲ್!
ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದಿರುವ, ನೂತನವಾಗಿ ನಿರ್ಮಾಣಗೊಂಡಿರುವ ಬಿರ್ಸಾ ಮುಂಡಾ ಕ್ರೀಡಾಂಗಣ ಶುಕ್ರವಾರ ತುಂಬಿ ತಳುಕುತ್ತಿತ್ತು. 20,000ಕ್ಕೂ ಹೆಚ್ಚು ಆಸನ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣ ಸಂಪೂರ್ಣವಾಗಿ ಭರ್ತಿಯಾಗಿತ್ತು.
ಇಂದಿನ ಪಂದ್ಯಗಳು
ನ್ಯೂಜಿಲೆಂಡ್-ಚಿಲಿ ಮಧ್ಯಾಹ್ನ 1ಕ್ಕೆ
ನೆದರ್‌ಲೆಂಡ್‌್ಸ-ಮಲೇಷ್ಯಾ ಸಂಜೆ 3ಕ್ಕೆ
ಬೆಲ್ಜಿಯಂ-ಕೊರಿಯಾ ಸಂಜೆ 5ಕ್ಕೆ
ಜರ್ಮನಿ-ಜಪಾನ್ ಸಂಜೆ 7ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಫ್ಯಾನ್‌ಕೋಡ್ ಆ್ಯಪ್