ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ದೊಡ್ಡ ಆಘಾತವೇಲ್ಸ್‌ ಎದುರಿನ ಪಂದ್ಯಕ್ಕೂ ಮುನ್ನ ಹಾರ್ದಿಕ್ ಸಿಂಗ್‌ಗೆ ಗಾಯಸ್ನಾಯು ಸೆಳೆತಕ್ಕೆ ಒಳಗಾಗಿರುವ ಹಾರ್ದಿಕ್‌ ಸಿಂಗ್ ಟೂರ್ನಿಯಿಂದಲೇ ಹೊರಬೀಳುವ ಭೀತಿ

ರೂರ್ಕೆಲಾ(ಜ.17): ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಹಿನ್ನಡೆ ಉಂಟಾಗಿದೆ. ತಂಡದ ಪ್ರಮುಖ ಮಿಡ್‌ಫೀಲ್ಡರ್‌ ಹಾರ್ದಿಕ್‌ ಸಿಂಗ್‌ ಗಾಯಗೊಂಡಿದ್ದು, ವೇಲ್ಸ್‌ ವಿರುದ್ಧ ಜ.19ರಂದು ನಡೆಯಲಿರುವ ‘ಡಿ’ ಗುಂಪಿನ ಅಂತಿಮ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಭಾನುವಾರ ಇಂಗ್ಲೆಂಡ್‌ ವಿರುದ್ಧದ ಪಂದ್ಯದ ನಾಲ್ಕನೇ ಕ್ವಾರ್ಟರ್‌ನಲ್ಲಿ ಹಾರ್ದಿಕ್‌ ಸ್ನಾಯು ಸೆಳೆತಕ್ಕೆ ಒಳಗಾದರು.

ಹಾರ್ದಿಕ್‌ ವಿಶ್ವಕಪ್‌ನಿಂದಲೇ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಭಾರತಕ್ಕೆ ಮತ್ತಷ್ಟುಹಿನ್ನಡೆ ಉಂಟಾಗಲಿದೆ. ಭಾನುವಾರ ರಾತ್ರಿ ಎಂಆರ್‌ಐ ಸ್ಕ್ಯಾನ್‌ಗೆ ಒಳಗಾದ ಹಾರ್ದಿಕ್‌ರ ಗಾಯದ ಪ್ರಮಾಣ ತೀವ್ರವಾಗಿರುವುದಾಗಿ ವರದಿಯಾಗಿದೆ. ಅತ್ಯುತ್ತಮ ಪ್ರದರ್ಶನ: ಸ್ಪೇನ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಪಂದ್ಯಗಳಲ್ಲಿ ಹಾರ್ದಿಕ್‌, ಭಾರತದ ಅತ್ಯುತ್ತಮ ಆಟಗಾರ ಎನಿಸಿಕೊಂಡಿದ್ದರು. ಸ್ಪೇನ್‌ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಆಕರ್ಷಕ ಗೋಲು ಬಾರಿಸಿ ತಂಡ 2-0 ಅಂತರದಲ್ಲಿ ಗೆಲ್ಲಲು ನೆರವಾಗಿದ್ದರು.

ಒಂದು ವೇಳೆ ಹಾರ್ದಿಕ್‌ ವಿಶ್ವಕಪ್‌ನಿಂದ ಹೊರಬಿದ್ದರೆ ಅವರ ಬದಲಿಗೆ ರಾಜ್‌ಕುಮಾರ್‌ ಪಾಲ್‌ 18 ಸದಸ್ಯರ ತಂಡ ಕೂಡಿಕೊಳ್ಳುವ ನಿರೀಕ್ಷೆ ಇದೆ. ಟೂರ್ನಿ ಆರಂಭಕ್ಕೂ ಮೊದಲು ರಾಜ್‌ಕುಮಾರ್‌ ಹಾಗೂ ಡಿಫೆಂಡರ್‌ ಜುಗರಾಜ್‌ ಸಿಂಗ್‌ರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು.

5 ಸಾವಿರ ಹಾಕಿ ಬಾಲ್‌ನಿಂದ ಸ್ಯಾಂಡ್ ಆರ್ಟ್‌ನಲ್ಲಿ ಅತಿದೊಡ್ಡ ಹಾಕಿ ಸ್ಟಿಕ್ ನಿರ್ಮಾಣ: ಭಾರತ ವಿಶ್ವ ದಾಖಲೆ..!

ಒಂದು ವೇಳೆ ಹಾರ್ದಿಕ್‌ ಹೊರಬಿದ್ದರೆ, ಫಿಟ್ನೆಸ್‌ ಕಂಡುಕೊಂಡರೂ ವಿಶ್ವಕಪ್‌ ತಂಡಕ್ಕೆ ವಾಪಸಾಗಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌(ಎಫ್‌ಐಎಚ್‌)ನ ನಿಯಮದ ಪ್ರಕಾರ ತಂಡದಿಂದ ಹೊರಬೀಳುವ ಆಟಗಾರ ಮತ್ತೆ ವಾಪಸಗುವಂತಿಲ್ಲ.

ಭಾರತಕ್ಕೆ ದೊಡ್ಡ ನಷ್ಟ ಏಕೆ?

ಹಾರ್ದಿಕ್‌ ವಿಶ್ವಕಪ್‌ನಿಂದ ಹೊರಬಿದ್ದರೆ ಭಾರತಕ್ಕೆ ದೊಡ್ಡ ಹಿನ್ನಡೆ ಉಂಟಾಗುವುದರಲ್ಲಿ ಅನುಮಾನವಿಲ್ಲ. ಮಿಡ್‌ಫೀಲ್ಡ್‌ನಲ್ಲಿ ‘ಕಿಂಗ್‌’ ಎನಿಸಿರುವ ಹಾರ್ದಿಕ್‌, ತಂಡದ ಫಾರ್ವರ್ಡ್‌ ಆಟಗಾರರಿಗೆ ಚೆಂಡನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅಲ್ಲದೇ ಚೆಂಡು ಎದುರಾಳಿ ಆಟಗಾರರ ಬಳಿ ಹೋದಾಗ ಬಹಳ ಕಡಿಮೆ ಸಮಯದಲ್ಲಿ ಚೆಂಡನ್ನು ಕಸಿದುಕೊಳ್ಳುವ(ಬಾಲ್‌ ರಿಕವರಿ) ಕೌಶಲ್ಯವನ್ನೂ ಹೊಂದಿದ್ದಾರೆ. ಇಷ್ಟುಮಾತ್ರವಲ್ಲದೇ ಅವರೊಬ್ಬ ಆಕ್ರಮಣಕಾರಿ ಮಿಡ್‌ಫೀಲ್ಡರ್‌. ಸ್ಟೆ್ರೖಕರ್‌ ಆಗಿಯೂ ತಂಡಕ್ಕೆ ನೆರವಾಗಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ. ಸ್ಪೇನ್‌ ವಿರುದ್ಧದ ಪಂದ್ಯದಲ್ಲಿ ಊಹಿಸಲಾಗದ ರೀತಿಯಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ್ದೇ ಇದ್ದಕ್ಕೆ ಉದಾಹರಣೆ.

ಹಾಕಿ: ನೆದರ್‌ಲೆಂಡ್ಸ್ ಕ್ವಾರ್ಟರ್‌ಗೆ ಲಗ್ಗೆ?

ರೂರ್ಕೆಲಾ: 3 ಬಾರಿ ಚಾಂಪಿಯನ್‌ ನೆದರ್‌ಲೆಂಡ್‌್ಸ 15ನೇ ಆವೃತ್ತಿ ಹಾಕಿ ವಿಶ್ವಕಪ್‌ನಲ್ಲಿ 2ನೇ ಗೆಲುವು ಸಾಧಿಸಿದ್ದು, ಕ್ವಾರ್ಟರ್‌ ಫೈನಲ್‌ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿದೆ. ಸೋಮವಾರ ಡಚ್‌ ಪಡೆ ನ್ಯೂಜಿಲೆಂಡ್‌ ವಿರುದ್ಧ 4-0 ಗೋಲುಗಳಿಂದ ಜಯಗಳಿಸಿತು. ಕೊನೆ ಪಂದ್ಯದಲ್ಲಿ ಚಿಲಿ ವಿರುದ್ಧ ಸೋತರೂ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದೆ.

ಮೊದಲ ಪಂದ್ಯದಲ್ಲಿ ಚಿಲಿ ವಿರುದ್ಧ ಜಯಿಸಿದ್ದ ನ್ಯೂಜಿಲೆಂಡ್‌ 3 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. 2ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದ ನೆದರ್‌ಲೆಂಡ್‌್ಸ ಮೊದಲಾರ್ಧಕ್ಕೆ 2-0 ಮುನ್ನಡೆ ಸಾಧಿಸಿತು. ಬ್ರಿಂಕ್‌ಮ್ಯಾನ್‌ ಥಿಯೆರ್ರಿ(2, 12ನೇ ನಿಮಿಷ) ಮೊದಲ 2 ಗೋಲು ಬಾರಿಸಿದರೆ, 19ನೇ ನಿಮಿಷದಲ್ಲಿ ಬಿಜೆನ್‌ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. 54ನೇ ನಿಮಿಷದಲ್ಲಿ ಚೆಪ್‌ ಬಾರಿಸಿದ ಗೋಲು ಗೆಲುವಿನ ಅಂತರವನ್ನು ಹೆಚ್ಚಿಸಿತು. ‘ಸಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಚಿಲಿ ವಿರುದ್ಧ ಮಲೇಷ್ಯಾ 3-2 ಗೆಲುವು ದಾಖಲಿಸಿತು.

ಅರ್ಜೆಂಟೀನಾ-ಆಸ್ಪ್ರೇಲಿಯಾ 3-3 ಗೋಲುಗಳಿಂದ ಡ್ರಾ!

ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿರುವ ಆಸ್ಪ್ರೇಲಿಯಾ, ಸೋಮವಾರ ಅರ್ಜೆಂಟೀನಾ ವಿರುದ್ಧ 3-3 ಗೋಲುಗಳಿಂದ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಇದರೊಂದಿಗೆ ‘ಎ’ ಗುಂಪಿನಲ್ಲಿ 4 ಅಂಕ ಸಂಪಾದಿಸಿದ ಆಸ್ಪ್ರೇಲಿಯಾ, ನೇರವಾಗಿ ಕ್ವಾರ್ಟರ್‌ಫೈನಲ್‌ಗೇರಲು ಕೊನೆ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮತ್ತೊಂದು ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಫ್ರಾನ್ಸ್‌ 2-1 ಜಯಗಳಿಸಿತು.