ಭುವನೇಶ್ವರ್‌(ಜ.18): ಮುಂಬರುವ ಒಲಿಂಪಿಕ್‌ ಕ್ರೀಡಾಕೂಟವನ್ನು ಗುರಿಯಾಗಿಸಿಕೊಂಡು ಅಭ್ಯಾಸ ನಡೆಸುತ್ತಿರುವ ಭಾರತ ಪುರುಷರ ಹಾಕಿ ತಂಡ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಶನಿವಾರ ವಿಶ್ವ ನಂ.3 ನೆದರ್‌ಲ್ಯಾಂಡ್‌ ತಂಡವನ್ನು ಎದುರಿಸಲಿದೆ. ಈ ಮೂಲಕ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಪೂರ್ವಭಾವಿಯಾಗಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಕಿವೀಸ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

ವಿಶ್ವ ನಂ.5ನೇ ರಾರ‍ಯಂಕಿಂಗ್‌ ಹೊಂದಿರುವ ಭಾರತ ಪ್ರಬಲ ತಂಡಗಳ ಪೈಕಿ ಒಂದಾಗಿದೆ. ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಭಾರತ ತಂಡ ಪ್ರತಿಷ್ಠಿತ ಲೀಗ್‌ನ ಎರಡನೇ ಪಂದ್ಯವನ್ನು ಭಾನುವಾರ ಆಡಲಿದೆ. ಫೆಬ್ರವರಿ 8 ಮತ್ತು 9 ರಂದು ವಿಶ್ವ ಚಾಂಪಿಯನ್‌ ಬೆಲ್ಜಿಯಂ ವಿರುದ್ಧ, ಫೆ.22 ಮತ್ತು 23ರಂದು ಆಸ್ಪ್ರೇಲಿಯಾ ವಿರುದ್ಧ ಆಡಲಿದೆ. 

ಇದನ್ನೂ ಓದಿ: ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಹೇಳಿದ ಸುನಿತಾ..

ಆ ಬಳಿಕ ಭಾರತ ತಂಡ ಜರ್ಮನಿಗೆ ಪ್ರವಾಸ ಬೆಳೆಸಿ ಅವರದ್ದೇ ನೆಲದಲ್ಲಿ ಏಪ್ರಿಲ್‌ 25 ಮತ್ತು 26 ರಂದು, ಗ್ರೇಟ್‌ ಬ್ರಿಟನ್‌ನಲ್ಲಿ ಮೇ 2 ಮತ್ತು 3ರಂದು ತಲಾ ಎರಡೆರಡು ಪಂದ್ಯ ಆಡಲಿದೆ. ಅಲ್ಲಿಂದ ವಾಪಸ್ಸಾದ ಬಳಿಕ ಮೇ 23 ಮತ್ತು 24ರಂದು ತವರಿನಲ್ಲೇ ನ್ಯೂಜಿಲೆಂಡ್‌ ವಿರುದ್ಧ ಎರಡು ಪಂದ್ಯವಾಡಿ, ಅರ್ಜೆಂಟೀನಾ ಪ್ರವಾಸ ಬೆಳೆಸಲಿದೆ. ಜೂ.5 ಮತ್ತು 6ರಂದು ಅರ್ಜೆಂಟೀನಾದಲ್ಲಿ ಇನ್ನೆರಡು ಪಂದ್ಯ ಆಡಲಿದೆ. ಜೂ.13 ಮತ್ತು 14ರಂದು ಲೀಗ್‌ನ ಕೊನೆಯ ಎರಡು ಪಂದ್ಯವನ್ನು ಸ್ಪೇನ್‌ನಲ್ಲಿ ಆಡಲಿದೆ.