Hockey World Cup: ಆತಿಥೇಯ ಭಾರತಕ್ಕಿಂದು ಇಂಗ್ಲೆಂಡ್ ಚಾಲೆಂಜ್..!
ಹಾಕಿ ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ-ಇಂಗ್ಲೆಂಡ್ ಸೆಣಸಾಟ
ಸತತ ಎರಡನೇ ಗೆಲುವು ದಾಖಲಿಸುವ ವಿಶ್ವಾಸದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪಡೆ
ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ
ರೂರ್ಕೆಲಾ(ಜ.15): ಸ್ಪೇನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ತವರಿನಲ್ಲಿ ವಿಶ್ವಕಪ್ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿರುವ ಭಾರತ ಹಾಕಿ ತಂಡ, ‘ಡಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಭಾನುವಾರ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಲಿದೆ.
ಹೊಚ್ಚಹೊಸ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಸಮಬಲರ ನಡುವಿನ ಸೆಣಸಾಟ ಎಂದೇ ಕರೆಸಿಕೊಳ್ಳುತ್ತಿದೆ. ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ವೇಲ್ಸ್ ವಿರುದ್ಧ 5-0 ಗೋಲುಗಳ ಅಮೋಘ ಗೆಲುವು ಪಡೆದಿದ್ದು, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.
ಸ್ಪೇನ್ ವಿರುದ್ಧ ಭಾರತದ ರಕ್ಷಣಾ ಪಡೆ ಅತ್ಯುತ್ತಮ ಪ್ರದರ್ಶನ ತೋರಿತ್ತು. ನಾಯಕ ಹರ್ಮನ್‌ಪ್ರೀತ್ ಸಿಂಗ್, ಉಪನಾಯಕ ಅಮಿತ್ ರೋಹಿದಾಸ್, ಗೋಲ್‌ಕೀಪರ್‌ಗಳಾದ ಶ್ರೀಜೇಶ್ ಹಾಗೂ ಕೃಷನ್ ಪಾಠಕ್, ಸ್ಪೇನ್‌ನ ಆಕ್ರಮಣಕಾರಿ ಆಟವನ್ನು ನಿರಾಯಾಸವಾಗಿ ನಿಯಂತ್ರಿಸಿದ್ದರು. ಇದರ ಪರಿಣಾಮ ಭಾರತ ಕಳೆದ 12 ಪಂದ್ಯಗಳಲ್ಲಿ ಮೊದಲ ಬಾರಿಗೆ ‘ಕ್ಲೀನ್ ಶೀಟ್’(ಒಂದೂ ಗೋಲು ಬಿಟ್ಟುಕೊಡದೆ ಇರುವುದು) ಸಾಧಿಸಿತು.
ಸ್ಪೇನ್‌ಗೆ ಹೋಲಿಸಿದರೆ ಇಂಗ್ಲೆಂಡ್ ತಂಡದಿಂದ ವಿಭಿನ್ನ ರೀತಿಯ ಸವಾಲು ಎದುರಾಗಲಿದೆ. ಇಂಗ್ಲೆಂಡ್ ತನ್ನ ಆಟದ ಶೈಲಿಯನ್ನು ಪ್ರತಿ ಕ್ವಾರ್ಟರ್‌ನಲ್ಲೂ ಬದಲಿಸಲಿದೆ. ಇದೇ ಕಾರಣದಿಂದಾಗಿ ವೇಲ್ಸ್ ವಿರುದ್ಧ ಎಲ್ಲಾ ನಾಲ್ಕೂ ಕ್ವಾರ್ಟರ್‌ಗಳಲ್ಲಿ ಗೋಲು ಬಾರಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸುವ ಅನಿವಾರ್ಯತೆಗೆ ಭಾರತ ಸಿಲುಕಬಹುದು. ಚೆಂಡು ಇಂಗ್ಲೆಂಡ್ ಹಿಡಿತಕ್ಕೆ ಸಿಕ್ಕಾಗ ಭಾರತೀಯರು ಎಷ್ಟುಬೇಗ ಮರಳಿ ಪಡೆಯಲಿದ್ದಾರೆ ಎನ್ನುವುದು ನಿರ್ಣಾಯಕವೆನಿಸಲಿದೆ. ಈ ನಿಟ್ಟಿನಲ್ಲಿ ಅನುಭವಿ ಮಿಡ್‌ಫೀಲ್ಡರ್, ಮಾಜಿ ನಾಯಕ ಮನ್‌ಪ್ರೀತ್ ಸಿಂಗ್ ಹಾಗೂ ಸದ್ಯ ತಂಡದ ಮಿಡ್‌ಫೀಲ್ಡ್ ‘ಕಿಂಗ್’ ಎನಿಸಿರುವ ಹಾರ್ದಿಕ್ ಸಿಂಗ್ ಮೇಲೆ ದೊಡ್ಡ ಜವಾಬ್ದಾರಿ ಇರಲಿದೆ.
ಕತ್ತಲಲ್ಲೇ ಬೆಳಗಿದ ಹಾಕಿ ಪ್ರತಿಭೆ ನೀಲಂ! ಬಿದಿರಿನ ಹಾಕಿ ಸ್ಟಿಕ್‌ನಿಂದ ವಿಶ್ವಕಪ್‌ವರೆಗಿನ ಜರ್ನಿಯೇ ಅದ್ಭುತ
ಪೆನಾಲ್ಟಿಕಾರ್ನರ್‌ಗಳೇ ನಿರ್ಣಾಯಕ: ಭಾರತ ಮೊದಲ ಪಂದ್ಯದಲ್ಲಿ ಗೆದ್ದರೂ ತಂಡದ ಪೆನಾಲ್ಟಿಕಾರ್ನರ್ ಸಮಸ್ಯೆ ಮುಂದುವರಿದಿದ್ದು ಆತಂಕಕ್ಕೆ ಕಾರಣವಾಯಿತು. ಸಿಕ್ಕ ಐದೂ ಪೆನಾಲ್ಟಿ ಕಾರ್ನರ್‌ಗಳಲ್ಲಿ ಭಾರತ ಒಂದರಲ್ಲೂ ನೇರವಾಗಿ ಗೋಲು ಬಾರಿಸಲಿಲ್ಲ. ಜೊತೆಗೆ ಹರ್ಮನ್‌ಪ್ರೀತ್ ಪೆನಾಲ್ಟಿಸ್ಟ್ರೋಕ್ ಅವಕಾಶವನ್ನೂ ವ್ಯರ್ಥ ಮಾಡಿದರು. ಪೆನಾಲ್ಟಿಕಾರ್ನರ್ ಅವಕಾಶಗಳನ್ನು ಸೃಷ್ಟಿಸುವುದು ಮಾತ್ರವಲ್ಲ, ಭಾರತೀಯರು ಆ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವುದರ ಕಡೆಗೂ ಹೆಚ್ಚು ಗಮನ ಹರಿಸಬೇಕಿದೆ.
2022ರಲ್ಲಿ ಇಂಗ್ಲೆಂಡ್ ವಿರುದ್ಧ ಸೋಲದ ಭಾರತ
ಕಳೆದ ವರ್ಷ ಭಾರತ ಹಾಗೂ ಇಂಗ್ಲೆಂಡ್ ತಂಡಗಳು 3 ಪಂದ್ಯಗಳಲ್ಲಿ ಎದುರಾಗಿದ್ದವು. ಕಾಮನ್‌ವೆಲ್ತ್ ಗೇಮ್ಸ್‌ನ ಪಂದ್ಯ 4-4ರಲ್ಲಿ ಡ್ರಾಗೊಂಡರೆ, ಎಫ್‌ಐಎಚ್ ಪ್ರೊ ಲೀಗ್‌ನ ಮೊದಲ ಪಂದ್ಯ 3-3ರಲ್ಲಿ ಡ್ರಾ ಆಗಿತ್ತು. ಪ್ರೊ ಲೀಗ್‌ನ 2ನೇ ಪಂದ್ಯದಲ್ಲಿ ಭಾರತ 4-3ರ ಗೆಲುವು ಸಾಧಿಸಿತ್ತು.
ಇಂದಿನ ಪಂದ್ಯಗಳು
ಸ್ಪೇನ್-ವೇಲ್ಸ್, ಸಂಜೆ 5ಕ್ಕೆ
ಭಾರತ-ಇಂಗ್ಲೆಂಡ್, ಸಂಜೆ 7ಕ್ಕೆ
ಹಾಲಿ ಚಾಂಪಿಯನ್ ಬೆಲ್ಜಿಯಂಗೆ 5-0 ಜಯ
ಭುವನೇಶ್ವರ/ರೂರ್ಕೆಲಾ: ಹಾಲಿ ಚಾಂಪಿಯನ್ ಬೆಲ್ಜಿಯಂ 2023ರ ಪುರುಷರ ಹಾಕಿ ವಿಶ್ವಕಪ್‌ನಲ್ಲಿ 5-0 ಗೋಲುಗಳ ಗೆಲುವಿನ ಭರ್ಜರಿ ಆರಂಭ ಪಡೆದಿದೆ. ಶನಿವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಸುಲಭವಾಗಿ ಮಣಿಸಿತು. ಮೊದಲ ಕ್ವಾರ್ಟರ್ ಗೋಲು ರಹಿತ ಮುಕ್ತಾಯ ಕಂಡ ಬಳಿಕ ದ್ವಿತೀಯ ಕ್ವಾರ್ಟರ್‌ನ ಕೊನೆಯಲ್ಲಿ ಬೆಲ್ಜಿಯಂ ಗೋಲಿನ ಖಾತೆ ತೆರೆಯಿತು. ಹೆಂಡ್ರಿಕ್ ಅಲೆಕ್ಸಾಂಡರ್ ಪೆನಾಲ್ಟಿಕಾರ್ನರ್ ಮೂಲಕ ಮೊದಲ ಗೋಲು ಬಾರಿಸಿದರು. 42ನೇ ನಿಮಿಷದಲ್ಲಿ ಟ್ಯಾನ್‌ಗೈ, 49ನೇ ನಿಮಿಷದಲ್ಲಿ ಫೆä್ಲರೆಂಟ್, 51ನೇ ನಿಮಿಷದಲ್ಲಿ ಸೆಬಾಸ್ಟಿಯನ್, 57ನೇ ನಿಮಿಷದಲ್ಲಿ ಆರ್ಥರ್ ಗೋಲು ಬಾರಿಸಿದರು.
ಇನ್ನು ‘ಬಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಜಪಾನ್ ವಿರುದ್ಧ ಜರ್ಮನಿ 3-0 ಅಂತರದಲ್ಲಿ ಜಯಿಸಿತು. ‘ಸಿ’ ಗುಂಪಿನಲ್ಲಿ ಚಿಲಿ ವಿರುದ್ಧ ನ್ಯೂಜಿಲೆಂಡ್ 3-1ರಲ್ಲಿ ಗೆದ್ದರೆ, ಮಲೇಷ್ಯಾ ವಿರುದ್ಧ ಕಳೆದ ಆವೃತ್ತಿಯ ರನ್ನರ್-ಅಪ್ ನೆದರ್‌ಲೆಂಡ್‌್ಸ 4-0 ಗೋಲುಗಳ ಅಂತರದಲ್ಲಿ ಗೆಲುವು ಪಡೆಯಿತು.