ಕತ್ತಲಲ್ಲೇ ಬೆಳಗಿದ ಹಾಕಿ ಪ್ರತಿಭೆ ನೀಲಂ! ಬಿದಿರಿನ ಹಾಕಿ ಸ್ಟಿಕ್‌ನಿಂದ ವಿಶ್ವಕಪ್‌ವರೆಗಿನ ಜರ್ನಿಯೇ ಅದ್ಭುತ
ಕಿತ್ತು ತಿನ್ನುವ ಬಡತನದ ನಡುವೆಯೂ ವಿಧಿಗೆ ಸವಾಲೆಸೆದ ನೀಲಂ ಸಂಜೀಪ್
7ನೇ ವಯಸ್ಸಿನಲ್ಲೇ ಬಿದರಿನ ಕೋಲಿನಲ್ಲಿ ಹಾಕಿ ಸ್ಟಿಕ್ ಮಾಡಿಕೊಂಡಿದ್ದ ನೀಲಂ
ಇದೀಗ ಹಾಕಿ ವಿಶ್ವಕಪ್‌ನಲ್ಲಿ ಭಾರತ ದೇಶ ಪ್ರತಿನಿಧಿಸುತ್ತಿರುವ ಛಲದಂಕ ಮಲ್ಲ
ರೂರ್ಕೆಲಾ(ಜ.14): ಕಿತ್ತು ತಿನ್ನುವ ಬಡತನದ ನಡುವೆ, ವಿದ್ಯುತ್ ಇಲ್ಲದ ಮನೆಯಲ್ಲಿ 19 ವರ್ಷ ಬೆಳೆದು ಹಾಕಿಯನ್ನೆ ಉಸಿರಾಗಿಸಿದ್ದ ಒಡಿಶಾದ ಯುವ ತಾರೆ ನೀಲಂ ಸಂಜೀಪ್ ಸದ್ಯ ತವರಿನಲ್ಲೇ ಭಾರತದ ಪರ ಹಾಕಿ ವಿಶ್ವಕಪ್ ಆಡುತ್ತಿದ್ದು, ದೇಶಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ಕನಸು ಕಾಣುತ್ತಿದ್ದಾರೆ.
ರೂರ್ಕೆಲಾದ ಕುಚ್ಚ ಗ್ರಾಮದ ನೀಲಂ 7ನೇ ವಯಸ್ಸಿನಲ್ಲೇ ಬಿದಿರಿನ ಹಾಕಿ ಸ್ಟಿಕ್ ಕೈಗೆತ್ತಿಕೊಂಡರು. ಹರಿದ ಬಟ್ಟೆಗಳನ್ನು ಬಾಲ್ ಮಾಡಿ ಆಡಲು ಶುರುವಿಟ್ಟರು. ಆದರೆ ಹಾಕಿ ನೀಲಂ ಪಾಲಿಗೆ ಸುಲಭದಲ್ಲಿ ಒಲಿಯಲಿಲ್ಲ. ನೀರು, ಗ್ಯಾಸ್ ಯಾವುದರ ವ್ಯವಸ್ಥೆಯೂ ಇಲ್ಲದ ಮಣ್ಣಿನ ಮನೆಯಲ್ಲಿ ಬೆಳೆದ ನೀಲಂ, ಶಾಲೆಯಿಂದ ಬಂದ ನಂತರ ಪೋಷಕರ ಜೊತೆ ತೋಟದಲ್ಲಿ ಕೆಲಸ ಮಾಡುತ್ತಲೇ ಬಿಡುವಿನ ವೇಳೆಯಲ್ಲಿ ಸಹೋದರನ ಜೊತೆ ಹಾಕಿ ಆಡುತ್ತಿದ್ದರು.
ಕ್ರೀಡಾ ಹಾಸ್ಟೆಲ್‌ಗೆ ಆಯ್ಕೆ: 2010ರಲ್ಲಿ ಸುಂದರ್‌ಗಢದ ಕ್ರೀಡಾ ಹಾಸ್ಟೆಲ್‌ಗೆ ಸೇರಿದ ನಂತರ ನೀಲಂ ಬದುಕು ಬದಲಾಯಿತು. ಕಠಿಣ ಪರಿಶ್ರಮದ ಮೂಲಕ ಮೇಲೆ ಬಂದು ವಿವಿಧ ಟೂರ್ನಿಗಳಲ್ಲಿ ಮಿಂಚಿ ಒಡಿಶಾ ತಂಡಕ್ಕೆ ಸೇರಿದರು. 17ನೇ ವರ್ಷದಲ್ಲೇ ಭಾರತಕ್ಕೆ ಪಾದಾರ್ಪಣೆ ಮಾಡಿ ಅಲ್ಲೂ ಉತ್ತಮ ಪ್ರದರ್ಶನ ತೋರಿದರು. ಇದಾದ ಬಳಿಕ ಕುಚ್ಚ ಗ್ರಾಮಕ್ಕೆ 2017ರಲ್ಲಿ ವಿದ್ಯುತ್ ಸಂಕರ್ಪ ನೀಡಲಾಗಿದ್ದರೂ ನೀಲಂ ಅದೇ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ‘ಸರ್ಕಾರ ಇನ್ನಾದರೂ ನಮ್ಮ ಮನೆಗೆ ನೆರವು ಒದಗಿಸಲಿ’ ಎಂದು ನೀಲಂ ತಂದೆ ಬಿಪಿನ್ ನೊಂದು ನುಡಿದಿದ್ದಾರೆ.
"ನನ್ನ ಮಗ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ನೀಲಂ ತಮ್ಮ ಬಾಲ್ಯದ ದಿನಗಳಲ್ಲಿ ಬಿದಿರಿನ ಕೋಲಿನಲ್ಲಿ ಬಟ್ಟೆಯ ಚೆಂಡನ್ನು ಮಾಡಿಕೊಂಡು ತನ್ನ ಹಿರಿಯ ಸಹೋದರರು ಹಾಗೂ ಸ್ನೇಹಿತರ ಜತೆಗೂಡಿ ಹಾಕಿ ಅಭ್ಯಾಸ ನಡೆಸುತ್ತಿದ್ದ" ಎಂದು ನೀಲಂ ಅವರ ತಂದೆ ಬಿಪಿನ್ ಹೇಳಿಕೊಂಡಿದ್ದಾರೆ.
ಹಾಕಿ ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ, ಬಲಿಷ್ಠ ಸ್ಪೇನ್ ವಿರುದ್ಧ 2-0 ಗೆಲುವು!
"ನಮಗೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ನಮಗೆ ಬೇರೆ ಆಯ್ಕೆಯೇ ಇಲ್ಲ, ಹೀಗಾಗಿಯೇ ನಾವಿನ್ನೂ ಮಣ್ಣಿನ ಮನೆಯಲ್ಲಿಯೇ ವಾಸವಾಗಿದ್ದೇವೆ. ಬಿಡುವಿನ ಸಮಯದಲ್ಲಿ ನಮ್ಮ ಮಗ ಮನೆಗೆ ಬಂದಾಗಲೂ ಈ ಹಳೆಯ ಮನೆಯಲ್ಲಿಯೇ ಉಳಿದುಕೊಳ್ಳುತ್ತಾನೆ. ಯಾವುದಾದರೂ ಯೋಜನೆಯಲ್ಲಿ ಸರ್ಕಾರವು ನಮಗೆ ಒಳ್ಳೆಯ ಮನೆಯನ್ನು ಕಟ್ಟಿಕೊಟ್ಟರೇ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ" ಎಂದು ನೀಲಂ ತಂದೆ ಬಿಪಿನ್ ಹೇಳಿದ್ದಾರೆ.
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ: 16 ತಂಡಗಳು ಪಾಲ್ಗೊಂಡಿರುವ ಈ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೀಗ ತಾನಾಡಿದ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸ್ಪೇನ್ ವಿರುದ್ದ ಭಾರತ ಹಾಕಿ ತಂಡವು 2-0 ಅಂತರದ ಗೆಲುವು ದಾಖಲಿಸಿದೆ. ಇನ್ನುಳಿದಂತೆ ಇದೇ ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ ತಂಡಗಳು ಕೂಡಾ ಸ್ಥಾನ ಪಡೆದಿವೆ.