Asianet Suvarna News Asianet Suvarna News

ಹಾಕಿ ವಿಶ್ವಕಪ್ ಚಾಂಪಿಯನ್‌ ಜರ್ಮನಿ ನಂ.1 ಸ್ಥಾನಕ್ಕೆ ಲಗ್ಗೆ..!

ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಜರ್ಮನಿ ಚಾಂಪಿಯನ್‌
ಜರ್ಮನಿ ವಿಶ್ವ ಹಾಕಿ ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನಕ್ಕೇರಿದೆ
ಎರಡನೇ ಸ್ಥಾನಕ್ಕೇರಿದ ನೆದರ್‌ಲೆಂಡ್ಸ್‌

Germany Hockey Team rise to the top in FIH Rankings kvn
Author
First Published Feb 1, 2023, 9:34 AM IST

ಲಾಸನ್ನೆ(ಫೆ.01): ಹಾಕಿ ವಿಶ್ವಕಪ್‌ ಚಾಂಪಿಯನ್‌ ಜರ್ಮನಿ ವಿಶ್ವ ಹಾಕಿ ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನಕ್ಕೇರಿದೆ. ಮಂಗಳವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌‌ನಲ್ಲಿ ಆಸ್ಪ್ರೇಲಿಯಾವನ್ನು ಹಿಂದಿಕ್ಕಿ ಜರ್ಮನಿ ಅಗ್ರಸ್ಥಾನಕ್ಕೇರಿತು. ಆಸ್ಪ್ರೇಲಿಯಾ 4ನೇ ಸ್ಥಾನಕ್ಕೆ ಕುಸಿದಿದ್ದು, ಭಾರತ 6ನೇ ಸ್ಥಾನದಲ್ಲೇ ಮುಂದುವರಿದಿದೆ. ರನ್ನರ್‌-ಅಪ್‌ ಬೆಲ್ಜಿಯಂ 2ರಿಂದ 3ನೇ ಸ್ಥಾನಕ್ಕೆ ಕುಸಿದರೆ, ನೆದರ್‌ಲೆಂಡ್‌್ಸ 1 ಸ್ಥಾನ ಮೇಲೇರಿ 2ನೇ ಸ್ಥಾನಕ್ಕೇರಿತು.

2023ರ ಪುರುಷರ ಹಾಕಿ ವಿಶ್ವಕಪ್‌ ಜರ್ಮನಿ ಪಾಲಾಗಿದೆ. ಭಾನುವಾರ ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ 2018ರ ಚಾಂಪಿಯನ್‌ ಬೆಲ್ಜಿಯಂ ವಿರುದ್ಧ ಪೆನಾಲ್ಟಿಶೂಟೌಟ್‌ನಲ್ಲಿ 5-4 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಒಟ್ಟಾರೆ 3ನೇ ಹಾಗೂ 2006ರ ಬಳಿಕ ಮೊದಲ ವಿಶ್ವಕಪ್‌ ಟ್ರೋಫಿ ಎತ್ತಿಹಿಡಿತು. 2002ರಲ್ಲಿ ಜರ್ಮನಿ ಚೊಚ್ಚಲ ವಿಶ್ವಕಪ್‌ ಜಯಿಸಿತ್ತು.

ಟೂರ್ನಿಯಲ್ಲಿ ಜರ್ಮನಿ ತೋರಿದ ಸಾಹಸ ಯಾವ ಸಿನಿಮಾ ಕಥೆಗೂ ಕಮ್ಮಿಯಲ್ಲ. ಸತತ 3 ಪಂದ್ಯಗಳಲ್ಲಿ ತಂಡ 0-2 ಗೋಲುಗಳ ಹಿನ್ನಡೆ ಅನುಭವಿಸಿದರೂ ಪುಟಿದೆದ್ದು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಇಂಗ್ಲೆಂಡ್‌, ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧವೂ ತಂಡ 0-2ರ ಹಿನ್ನಡೆಯನ್ನು ಮೆಟ್ಟಿನಿಂತು ಗೆಲುವು ಸಂಪಾದಿಸಿತ್ತು.

11ನೇ ಸ್ಥಾನಕ್ಕೇರಿದ ಲಕ್ಷ್ಯ ಸೆನ್

ನವದೆಹಲಿ: ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ತಾರಾ ಶಟ್ಲರ್‌ ಲಕ್ಷ್ಯ ಸೆನ್‌ ಬ್ಯಾಡ್ಮಿಂಟನ್‌ ವಿಶ್ವ ರ‍್ಯಾಂಕಿಂಗ್‌ನ ಪುರುಷರ ಸಿಂಗಲ್ಸ್‌ನಲ್ಲಿ 11ನೇ ಸ್ಥಾನಕ್ಕೇರಿದ್ದಾರೆ. ಎಚ್‌.ಎಸ್‌.ಪ್ರಣಯ್‌ 9ನೇ ಸ್ಥಾನದಲ್ಲೇ ಮುಂದುವರಿದಿದ್ದು, ಕಿದಂಬಿ ಶ್ರೀಕಾಂತ್‌ 16ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 9ನೇ ಸ್ಥಾನ ಕಾಯ್ದುಕೊಂಡಿದ್ದು, ಸೈನಾ ನೆಹ್ವಾಲ್‌ 26ನೇ ಸ್ಥಾನಕ್ಕೇರಿದ್ದಾರೆ.

ಬೆಂಗಳೂರು ಟಾರ್ಪೆಡೊಸ್‌ಗೆ ಡೇವಿಡ್‌ ನೂತನ ಕೋಚ್‌

ಬೆಂಗಳೂರು: 2ನೇ ಆವೃತ್ತಿಯ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಕಣಕ್ಕಿಳಿಯುವ ಮುನ್ನ ಬೆಂಗಳೂರು ಟಾರ್ಪೆಡೊಸ್‌ ತಂಡ ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತ, ಅಮೆರಿಕದ ಡೇವಿಡ್‌ ಲೀ ಅವರನ್ನು ನೂತನ ಕೋಚ್‌ ಆಗಿ ನೇಮಿಸಿದೆ. ಡೇವಿಡ್‌ ಕಳೆದ ಬಾರಿ ಕ್ಯಾಲಿಕಟ್‌ ಹೀರೋಸ್‌ ತಂಡದ ಪರ ಆಡಿದ್ದು, ಮೊದಲ ಬಾರಿ ತರಬೇತುದಾರರಾಗಿ ಕಾಣಿಸಿಕೊಳ್ಳಲಿದ್ದಾರೆ. 

Khelo India: ಬಾಸ್ಕೆಟ್‌ಬಾಲ್‌ನಲ್ಲಿ ರಾಜ್ಯಕ್ಕೆ ಸೋಲು

ಕಳೆದ ಆವೃತ್ತಿಯಲ್ಲಿ ನಾಕೌಟ್‌ ಪ್ರವೇಶಿಸಲು ವಿಫಲವಾಗಿದ್ದ ಬೆಂಗಳೂರು ತಂಡ ಈ ಬಾರಿ ಪಂಕಜ್‌ ಶರ್ಮಾ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ತಂಡದಲ್ಲಿ ಕರ್ನಾಟಕ ವಿನಾಯಕ್‌ ರೋಖಡೆ ಸೇರಿದಂತೆ ಪ್ರಮುಖ ಆಟಗಾರರಿದ್ದು, ಫೆ.4ಕ್ಕೆ ಮೊದಲ ಪಂದ್ಯದಲ್ಲಿ ಕೋಲ್ಕತಾ ಥಂಡರ್‌ಬೋಲ್ಟ್ಸ್ ವಿರುದ್ಧ ಆಡಲಿದೆ.

ಕುಸ್ತಿ ಫೆಡರೇಶನ್‌ ತನಿಖೆಯ ಮೇಲ್ವಿಚಾರಣೆಗೆ ಬಬಿತಾ

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ ವಿರುದ್ಧದ ಕುಸ್ತಿಪಟುಗಳ ಗಂಭೀರ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆಯ ಮೇಲ್ವಿಚಾರಣೆಗಾಗಿ ನೇಮಕಗೊಂಡ ಸಮಿತಿಗೆ ಮಾಜಿ ಕುಸ್ತಿಪಟು, ಬಿಜೆಪಿ ನಾಯಕಿ ಬಬಿತಾ ಫೋಗಟ್‌ ಕೂಡಾ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗಷ್ಟೇ ಕ್ರೀಡಾ ಸಚಿವಾಲಯ ಮೇರಿ ಕೋಮ್‌ ನೇತೃತ್ವದ 5 ಮಂದಿಯ ಸಮಿತಿಯನ್ನು ರಚಿಸಿತ್ತು.

ಫೆಬ್ರವರಿ 20ರಿಂದ 5ನೇ ಆವೃತ್ತಿಯ ಬೆಂಗ್ಳೂರು ಓಪನ್‌ ಟೆನಿಸ್‌

ಬೆಂಗಳೂರು: 5ನೇ ಆವೃತ್ತಿಯ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ ಫೆಬ್ರವರಿ 20ರಿಂದ 26ರ ವರೆಗೆ ನಡೆಯಲಿದ್ದು, ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ(ಕೆಎಸ್‌ಎಲ್‌ಟಿಎ) ಟೂರ್ನಿಗೆ ಆತಿಥ್ಯ ವಹಿಸಲಿದೆ. ವಿಶ್ವದ ಮಾಜಿ ನಂ.10 ಆಟಗಾರ ಫ್ರಾನ್ಸ್‌ ಲ್ಯೂಕಾಸ್‌ ಪೊಯಿಲೆ, ಹಾಲಿ ಚಾಂಪಿಯನ್‌ ತೈವಾನ್‌ನ ಚುನ್‌ ಹಿನ್‌ ತ್ಸೆಂಗ್‌ ಸೇರಿದಂತೆ ಪ್ರಮುಖ ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅರ್ಹತಾ ಪಂದ್ಯಗಳು ಫೆ.19, 20ಕ್ಕೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Follow Us:
Download App:
  • android
  • ios