Khelo India: ಬಾಸ್ಕೆಟ್ಬಾಲ್ನಲ್ಲಿ ರಾಜ್ಯಕ್ಕೆ ಸೋಲು
ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕಕ್ಕೆ ನಿರಾಸೆ
ಬಾಸ್ಕೆಟ್‌ಬಾಲ್ ಪಂದ್ಯದಲ್ಲಿ ಕರ್ನಾಟಕದ ತಂಡಗಳಿಗೆ ಸೋಲು
2ನೇ ಪಂದ್ಯದಲ್ಲಿ ರಾಜ್ಯ ತಂಡ ಮಧ್ಯಪ್ರದೇಶವನ್ನು ಎದುರಿಸಲಿದೆ
ಭೋಪಾಲ್(ಫೆ.01): 5ನೇ ಆವೃತ್ತಿ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕದ ಬಾಸ್ಕೆಟ್‌ಬಾಲ್ ತಂಡಗಳು ಸೋಲನುಭವಿಸಿವೆ. ಬಾಲಕರ ವಿಭಾಗದ ಆರಂಭಿಕ ಪಂದ್ಯದಲ್ಲಿ ರಾಜ್ಯ ತಂಡ ಪಂಜಾಬ್ ವಿರುದ್ಧ 68-72 ಅಂಕಗಳಿಂದ ಪರಾಭವಗೊಂಡಿತು. ಬುಧವಾರ ರಾಜಸ್ಥಾನ ವಿರುದ್ಧ 2ನೇ ಪಂದ್ಯವಾಡಲಿದೆ. ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡ ಕೇರಳ ವಿರುದ್ಧ 66-69 ಅಂಕಗಳಿಂದ ಸೋಲನುಭವಿಸಿತು. 2ನೇ ಪಂದ್ಯದಲ್ಲಿ ರಾಜ್ಯ ತಂಡ ಮಧ್ಯಪ್ರದೇಶವನ್ನು ಎದುರಿಸಲಿದೆ.
ಇದೇ ವೇಳೆ ವಾಲಿಬಾಲ್‌ನಲ್ಲಿ ರಾಜ್ಯ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಲು ವಿಫಲವಾಗಿದೆ. ಮೊದಲ ಪಂದ್ಯದಲ್ಲಿ ಪಶ್ಚಿಮ ಬಂಗಾಳ ವಿರುದ್ಧ ಸೋತಿದ್ದ ಕರ್ನಾಟಕ ಬುಧವಾರ ತಮಿಳುನಾಡಿಗೆ ಶರಣಾಯಿತು. ಕೊನೆ ಪಂದ್ಯದಲ್ಲಿ ಬುಧವಾರ ಮಧ್ಯಪ್ರದೇಶ ವಿರುದ್ಧ ಸೆಣಸಾಡಲಿದೆ. ಇನ್ನು, ಟೇಬಲ್ ಟೆನಿಸ್‌ನಲ್ಲಿ ಬಾಲಕಿಯರ ಸಿಂಗಲ್ಸ್‌ನಲ್ಲಿ ಯಶಸ್ವಿನಿ ಅಂತಿಮ 8ರ ಘಟ್ಟಪ್ರವೇಶಿಸಿದ್ದು, ರಾಜ್ಯದ ಉಳಿದ ಆಟಗಾರರು ಸಿಂಗಲ್ಸ್‌ನಲ್ಲಿ ಸೋತು ಹೊರಬಿದ್ದಿದ್ದಾರೆ.
30 ವರ್ಷ ಬಳಿಕ ಸ್ಟಾಫರ್ಡ್ ಚಾಲೆಂಜ್ ಕಪ್ ಫುಟ್ಬಾಲ್!
ಬೆಂಗಳೂರು: ಪ್ರತಿಷ್ಠಿತ ಸ್ಟಾಫರ್ಡ್ ಚಾಲೆಂಜ್ ಕಪ್ ಫುಟ್ಬಾಲ್ ಟೂರ್ನಿಯನ್ನು 30 ವರ್ಷಗಳ ಬಳಿಕ ಮತ್ತೊಮ್ಮೆ ನಡೆಸುವುದಾಗಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ) ಘೋಷಿಸಿದೆ. 40ನೇ ಆವೃತ್ತಿತ ಟೂರ್ನಿ ಫೆಬ್ರವರಿ 23ರಂದು ಆರಂಭಗೊಳ್ಳಲಿದ್ದು, 16 ತಂಡಗಳು ಸ್ಪರ್ಧಿಸಲಿವೆ ಎಂದು ತಿಳಿಸಿದೆ. ಎಲ್ಲಾ ಪಂದ್ಯಗಳಿಗೆ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣ ಆತಿಥ ವಹಿಸಲಿದೆ.
Border-Gavaskar Trophy: ಮೊದಲ ಟೆಸ್ಟ್‌ನಿಂದ ಆಸೀಸ್ ಮಾರಕ ವೇಗಿ ಔಟ್..!
ಐಎಸ್‌ಎಲ್‌ನ ಬೆಂಗಳೂರು ಎಫ್‌ಸಿ, ಚೆನ್ನೈಯಿನ್ ಎಫ್‌ಸಿ, ಐ-ಲೀಗ್‌ನ ಗೋಕುಲಂ ಕೇರಳ ಸೇರಿದಂತೆ ಕರ್ನಾಟಕ ಹಾಗೂ ಇತರೆ ರಾಜ್ಯಗಳ ತಂಡಗಳು ಕಣಕ್ಕಿಳಿಯಲಿವೆ. 16 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಗುಂಪಿನ ಅಗ್ರಸ್ಥಾನಿ ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ಮಾರ್ಚ್ 4ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿ 1938ರಲ್ಲಿ ಆರಂಭಗೊಂಡಿದ್ದು, 1993ರಲ್ಲಿ ಕೊನೆ ಬಾರಿ ಟೂರ್ನಿ ಆಯೋಜಿಸಲಾಗಿತ್ತು. ಹಲವು ವಿದೇಶಿ ತಂಡಗಳು ಕೂಡಾ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದವು. ಈ ಬಾರಿ ಭಾರತದ ಕ್ಲಬ್‌ಗಳು ಮಾತ್ರ ಕಣಕ್ಕಿಳಿಯಲಿವೆ ಎಂದು ಕೆಎಸ್‌ಎಫ್‌ಎ ಮಾಹಿತಿ ನೀಡಿದೆ.
ಮೊದಲ ಬಾರಿ ಭಾರತದಲ್ಲಿ ವಾಲಿಬಾಲ್ ಕ್ಲಬ್ ವಿಶ್ವಕೂಟ
ನವದೆಹಲಿ: ಇದೇ ಮೊದಲ ಬಾರಿ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್ ಆತಿಥ್ಯ ಹಕ್ಕು ಭಾರತಕ್ಕೆ ಲಭಿಸಿದ್ದು, ಬಹುನಿರೀಕ್ಷಿತ ಟೂರ್ನಿ ಡಿಸೆಂಬರ್ 6ರಿಂದ 10ರ ವರೆಗೆ ನಡೆಯಲಿದೆ ಎಂದು ವಿಶ್ವ ವಾಲಿವಾಲ್ ಫೆಡರೇಶನ್(ಎಫ್‌ಐವಿಬಿ) ಮಂಗಳವಾರ ಘೋಷಿಸಿದೆ. ಟೂರ್ನಿ ನಡೆಯಲಿರುವ ನಗರ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಭಾರತದ ಪ್ರೈಮ್ ವಾಲಿಬಾಲ್ ಲೀಗ್(ಪಿವಿಎಲ್) ಜೊತೆ ಎಫ್‌ಐವಿಬಿ 2 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, 2023, 2024ರ ವಿಶ್ವ ಕೂಟದಲ್ಲಿ ಪ್ರೈಮ್ ವಾಲಿಬಾಲ್ ಲೀಗ್‌ನ ಚಾಂಪಿಯನ್ ತಂಡಗಳು ಪಾಲ್ಗೊಳ್ಳಲಿವೆ. ವಿಶ್ವ ಕೂಟದಲ್ಲಿ ಇಟಲಿ, ಬ್ರೆಜಿಲ್, ಇರಾನ್ ಸೇರಿದಂತೆ ಪ್ರಮುಖ ದೇಶಗಳ ಕ್ಲಬ್‌ಗಳು ಕೂಡಾ ಕಣಕ್ಕಿಳಿಯಲಿವೆ.
ಜಾಗ್ರೆಬ್ ಓಪನ್ ಕುಸ್ತಿಗೆ ಭಾರತೀಯ ತಾರೆಯರಿಲ್ಲ!
ನವದೆಹಲಿ: ವರ್ಷದ ಮೊದಲ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ, ಕ್ರೊವೇಷಿಯಾದಲ್ಲಿ ಫೆಬ್ರವರಿ 1ರಿಂದ ಆರಂಭಗೊಳ್ಳಲಿರುವ ಜಾಗ್ರೆಬ್ ಓಪನ್‌ನಿಂದ ವಿನೇಶ್ ಫೋಗಟ್, ಭಜರಂಗ್ ಪೂನಿಯಾ ಸೇರಿ ಭಾರತದ 8 ಕುಸ್ತಿಪಟುಗಳು ಹಿಂದೆ ಸರಿದಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರ ವಿರುದ್ಧ ಧರಣಿ ಕೂತಿದ್ದ ಕುಸ್ತಿಪಟುಗಳು ತಾವು ಸರಿಯಾದ ಸಿದ್ಧತೆ ನಡೆಸದ ಕಾರಣ ಸ್ಪರ್ಧೆಸುತ್ತಿಲ್ಲ ಎಂದಿದ್ದಾರೆ. ಮೇರಿ ಕೋಮ್ ನೇತೃತ್ವದ ತನಿಖಾ ಮೇಲ್ವಿಚಾರಣ ಸಮಿತಿ ಬುಧವಾರವಷ್ಟೇ 36 ಸದಸ್ಯರ ತಂಡವನ್ನು ಪ್ರಕಟಗೊಳಿಸಿತ್ತು. ಈ ವರ್ಷ ಏಷ್ಯನ್ ಗೇಮ್ಸ್, 2024ರ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ದೃಷ್ಟಿಯಿಂದ ಈ ಪಂದ್ಯಾವಳಿ ಮಹತ್ವದೆನಿಸಿದೆ.