FIH Pro League: ಜರ್ಮನಿ ವಿರುದ್ಧ ಭಾರತಕ್ಕೆ 3-0 ಜಯ
* ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಭಾರತ ಭರ್ಜರಿ ಪ್ರದರ್ಶನ
* ಜರ್ಮನಿ ವಿರುದ್ದ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಭದ್ರಪಡಿಸಿಕೊಂಡ ಭಾರತ
* 2 ಗೋಲು ಬಾರಿಸಿ ಮಿಂಚಿದ ಹರ್ಮನ್‌ಪ್ರೀತ್ ಸಿಂಗ್
ಭುವನೇಶ್ವರ(ಏ.15): ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ (FIH Pro League Hockey Tournament) ಭಾರತ ಪುರುಷರ ತಂಡ (Indian Men's Hockey Team) ತನ್ನ ಜಯದ ಓಟವನ್ನು ಮುಂದುವರಿಸಿದೆ. ಜರ್ಮನಿ ವಿರುದ್ಧ ಗುರುವಾರ ನಡೆದ ಮೊದಲ ಪಂದ್ಯದಲ್ಲಿ 3-0 ಗೋಲುಗಳ (India beat Germany by 3-0) ಗೆಲುವು ಸಾಧಿಸಿತು. 11 ಪಂದ್ಯಗಳಲ್ಲಿ 8 ಗೆಲುವುಗಳನ್ನು ಸಾಧಿಸಿರುವ ಭಾರತ ಒಟ್ಟು 24 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 17 ಅಂಕ ಗಳಿಸಿರುವ ಜರ್ಮನಿ 2ನೇ ಸ್ಥಾನದಲ್ಲೇ ಮುಂದುವರಿದಿದೆ.
ಭಾರತ ಪರ ಹರ್ಮನ್‌ಪ್ರೀತ್ ಸಿಂಗ್ (18 ನೇ ನಿಮಿಷ, 27ನೇ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ 2 ಗೋಲು ಗಳಿಸಿದರು. 45ನೇ ನಿಮಿಷದಲ್ಲಿ ಅಭಿಷೇಕ್ ಮತ್ತೊಂದು ಗೋಲು ಗಳಿಸಿದರು. 2ನೇ ಪಂದ್ಯ ಶುಕ್ರವಾರ ನಡೆಯಲಿದೆ.ಭಾರತ ತಂಡಕ್ಕೆ ತವರಿನಲ್ಲಿ ಕೊನೆ ಪಂದ್ಯಗಳೆನಿಸಿವೆ. ಇನ್ನುಳಿದ ಪಂದ್ಯಗಳನ್ನು ಭಾರತ ವಿದೇಶಗಳಲ್ಲಿ ಆಡಬೇಕಿದೆ.
2023ರ ಹಾಕಿ ವಿಶ್ವಕಪ್ ಲೋಗೋ ಬಿಡುಗಡೆ
ಭುವನೇಶ್ವರ: 15ನೇ ಆವೃತ್ತಿಯ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2023ರ (FIH Men's Hockey World Cup) ಲಾಂಛನವನ್ನು ಗುರುವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಡುಗಡೆಗೊಳಿಸಿದರು. ಟೂರ್ನಿ 2023ರ ಜ.13ರಿಂದ 29ರ ವರೆಗೆ ಭುವನೇಶ್ವರ ಹಾಗೂ ರೂರ್ಕೆಲಾ ನಗರಗಳಲ್ಲಿ ನಡೆಯಲಿವೆ. 2018ರಲ್ಲೂ ವಿಶ್ವಕಪ್ ಆಯೋಜಿಸಿದ್ದ ಒಡಿಶಾಗೆ ಸತತ 2ನೇ ಬಾರಿ ಆತಿಥ್ಯ ಹಕ್ಕು ಲಭಿಸಿದೆ.
ರಾಷ್ಟ್ರೀಯ ಪುರುಷರ ಹಾಕಿ: ಕರ್ನಾಟಕ ಸೆಮಿಫೈನಲ್‌ಗೆ
ಭೋಪಾಲ್: 12ನೇ ಆವೃತ್ತಿಯ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ಪಶ್ಚಿಮ ಬಂಗಾಳ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ರಾಜ್ಯ ತಂಡ 4-3 ಗೋಲುಗಳಿಂದ ಗೆಲುವು ಸಾಧಿಸಿತು. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ರಾಜ್ಯ 24ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಿತು.
ಕರ್ನಾಟಕ ಹಾಕಿ ತಂಡದ ಪರ ಹರೀಶ್ ಮೊದಲ ಗೋಲು ಬಾರಿಸಿದರೆ, ದೀಕ್ಷಿತ್ ಹಾಗೂ ಯತೀಶ್ ಹೊಡೆದ ಗೋಲಿನಿಂದ ರಾಜ್ಯ ತಂಡ 3-0 ಮುನ್ನಡೆ ಪಡೆಯಿತು. ಬಳಿಕ ಬಂಗಾಳ 3 ಗೋಲು ಹೊಡೆದು ಸಮಬಲ ಸಾಧಿಸಿತು. ಕೊನೆಯಲ್ಲಿ ದೀಕ್ಷಿತ್ ಬಾರಿಸಿದ ಮತ್ತೊಂದು ಗೋಲು ರಾಜ್ಯಕ್ಕೆ ಗೆಲುವು ತಂದುಕೊಟ್ಟಿತು.
ಬ್ಯಾಡ್ಮಿಂಟನ್ ಸಂಸ್ಥೆ ನಡೆಗೆ ಸೈನ್ ನೆಹ್ಬಾಲ್ ಆಕ್ರೋಶ
ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ತಮ್ಮನ್ನು ಕಾಮನ್‌ವೆಲ್ತ್, ಏಷ್ಯನ್ ಗೇಮ್ಸ್‌ನಿಂದ ಹೊರಹಾಕಲು ಇಚ್ಛಿಸುತ್ತಿದೆ ಎಂದು 2 ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಸೈನಾ ನೆಹ್ವಾಲ್ (Saina Nehwal) ಆಕ್ರೋಶ ವ್ಯಕ್ತಪಡಿಸಿದ್ದಾರೆ.
FIH Pro League Hockey : ಭಾರತಕ್ಕೆ ಇಂದು ಜರ್ಮನಿ ಸವಾಲು
‘ಸತತ ಆಟದಿಂದ ದಣಿದಿದ್ದರಿಂದ ಏಪ್ರಿಲ್ 15-20ಕ್ಕೆ ನಡೆಯಲಿರುವ ಆಯ್ಕೆ ಟ್ರಯಲ್ಸ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದೆ. ಹಿರಿಯ ಆಟಗಾರ್ತಿಯಾಗಿ ನಿರಂತರವಾಗಿ ಆಡುವುದು ಅಸಾಧ್ಯ. ಅದನ್ನು ತಿಳಿಸಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇವಲ ಒಂದು ಸೋಲಿನಿಂದಾಗಿ ಬಿಎಐ ನನ್ನನ್ನು ಕೆಳಕ್ಕೆ ದೂಡಲು ಯತ್ನಿಸುತ್ತಿದೆ. ಅದಕ್ಕಾಗಿಯೇ ತರಾತುರಿಯಲ್ಲಿ ಆಯ್ಕೆ ಟ್ರಯಲ್ಸ್ ನಡೆಸುತ್ತಿದೆ ಎಂದು’ ಗುರುವಾರ ಸರಣಿ ಟ್ವೀಟ್‌ಗಳ ಮೂಲಕ ಕಿಡಿಕಾರಿದ್ದಾರೆ.
ಮಾಜಿ ಪ್ರಥಮ ದರ್ಜೆ ಅಂಪೈರ್ ರಾಮಣ್ಣ ನಿಧನ
ಬೆಂಗಳೂರು: ಮಾಜಿ ಪ್ರಥಮ ದರ್ಜೆ ಅಂಪೈರ್ ಎನ್.ಎಸ್.ರಾಮಣ್ಣ ಅವರು ಕಳೆದ ಶನಿವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. 1975-1986ರ ನಡುವೆ ರಾಮಣ್ಣ ಅವರು 10 ಪ್ರಥಮ ದರ್ಜೆ ಹಾಗೂ 3 ದೇವ್‌ದಾರ್ ಟ್ರೋಫಿ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ‍್ಯನಿರ್ವಹಿಸಿದ್ದರು. ರಾಮಣ್ಣ ನಿಧನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಂತಾಪ ಸೂಚಿಸಿದೆ.