ಭುವನೇಶ್ವರ(ಫೆ.08): ಎಫ್‌ಐಎಚ್‌ ಪ್ರೊ ಲೀಗ್‌ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಆಡುತ್ತಿರುವ ಭಾರತ ಪುರುಷರ ಹಾಕಿ ತಂಡ, ಸತತ 2ನೇ ಗೆಲುವಿನ ವಿಶ್ವಾಸದಲ್ಲಿದೆ. ಕಳೆದ ತಿಂಗಳು ನೆದರ್‌ಲೆಂಡ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಭಾರತ, ಶನಿವಾರ ಹಾಗೂ ಭಾನುವಾರ ವಿಶ್ವ ಚಾಂಪಿಯನ್‌ ಬೆಲ್ಜಿಯಂ ತಂಡದ ಸವಾಲನ್ನು ಎದುರಿಸಲಿದೆ.

ಇದನ್ನೂ ಓದಿ: ಕೊಡಗಿನ ಅಂಕಿತ ಭಾರತ ಹಾಕಿ ತಂಡದ ಕೋಚ್!

ಮೊದಲ ಪಂದ್ಯದ ಮೊದಲ ಚರಣದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ 5-2 ಗೋಲುಗಳಿಂದ ಗೆದ್ದಿದ್ದ ಭಾರತ, 2ನೇ ಪಂದ್ಯ 3-3ರಲ್ಲಿ ಡ್ರಾಗೊಂಡ ಬಳಿಕ ಶೂಟೌಟ್‌ನಲ್ಲಿ 3-1ರಲ್ಲಿ ಗೆಲುವು ಸಾಧಿಸಿ 5 ಅಂಕ ಸಂಪಾದಿಸಿತ್ತು. ಆದರೆ ಆ ಬಳಿಕ ಮನ್‌ಪ್ರೀತ್‌ ಸಿಂಗ್‌ ಪಡೆ ಮತ್ತ್ಯಾವುದೇ ಪಂದ್ಯವನ್ನಾಡಿಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕಿಳಿದಿದೆ.

ಇದನ್ನೂ ಓದಿ: ಪ್ರೊ ಲೀಗ್‌ ಹಾಕಿ: ನೆದರ್‌ಲ್ಯಾಂಡ್ ಎದುರು ಭಾರತ ಜಯಭೇರಿ

4 ಪಂದ್ಯಗಳಿಂದ 11 ಅಂಕ ಗಳಿಸಿರುವ ಬೆಲ್ಜಿಯಂ ಅಗ್ರಸ್ಥಾನದಲ್ಲಿದೆ. ತಂಡ 2018ರಲ್ಲಿ ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲೇ ನಡೆದಿದ್ದ ವಿಶ್ವಕಪ್‌ನಲ್ಲಿ ಗೆದ್ದು ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿತ್ತು. ಅಲ್ಲದೇ ಇತ್ತೀಚೆಗಷ್ಟೇ ಆಸ್ಪ್ರೇಲಿಯಾವನ್ನು ಹಿಂದಿಕ್ಕಿ ವಿಶ್ವ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಗೆದ್ದು ಬೀಗಿದ್ದ ಬೆಲ್ಜಿಯಂ ತಂಡ, ಈ ಮುಖಾಮುಖಿಯಲ್ಲೂ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಈ ಪಂದ್ಯದ ಬಳಿಕ ಫೆ.21 ಹಾಗೂ 22ರಂದು ಆಸ್ಪ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸಲಿದೆ. ಬಳಿಕ ತವರಿನಾಚೆಯ ಪಂದ್ಯಗಳನ್ನಾಡಲಿದೆ. ಜರ್ಮನಿ ವಿರುದ್ಧ ಏ.25, 26, ಗ್ರೇಟ್‌ ಬ್ರಿಟನ್‌ ವಿರುದ್ಧ ಮೇ 2, 3, ಅರ್ಜೆಂಟೀನಾ ವಿರುದ್ಧ ಜೂ.5, 6 ಹಾಗೂ ಸ್ಪೇನ್‌ ವಿರುದ್ಧ ಜೂ.13, 14ರಂದು ಸೆಣಸಲಿದೆ.