ಭುವನೇಶ್ವರ(ಫೆ.23): ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಭಾರತ ಗೆಲುವಿನ ಹಾದಿಗೆ ಮರಳಿದೆ. ಸತತ 2 ಸೋಲು ಕಂಡಿದ್ದ ಭಾರತ, ಶನಿವಾರ ಇಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ವಿರುದ್ಧ ನಡೆದ ದ್ವಿತೀಯ ಚರಣದ ಪಂದ್ಯವನ್ನು ಗೆದ್ದುಕೊಂಡಿತು. 

ನಿಗದಿತ 60 ನಿಮಿಷಗಳ ಮುಕ್ತಾಯದ ಬಳಿಕ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದ ಕಾರಣ, ಫಲಿತಾಂಶಕ್ಕಾಗಿ ಶೂಟೌಟ್‌ನ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಭಾರತ 3-1 ಗೋಲುಗಳ ಅಂತರದಲ್ಲಿ ಜಯಗಳಿಸಿ 2 ಅಂಕ ಪಡೆಯಿತು. ಆಸ್ಪ್ರೇಲಿಯಾ 1 ಅಂಕ ಗಳಿಸಿತು.

ಪ್ರೊ ಲೀಗ್ ಹಾಕಿ: ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ 3-4ರ ಸೋಲು

2 ಪಂದ್ಯಗಳಿಂದ ಆಸ್ಪ್ರೇಲಿಯಾ 4 ಅಂಕ ಪಡೆದರೆ, ಮೊದಲ ಪಂದ್ಯವನ್ನು 3-4 ಗೋಲುಗಳ ಅಂತರದಲ್ಲಿ ಸೋತಿದ್ದ ಭಾರತ 2 ಅಂಕಕ್ಕೆ ತೃಪ್ತಿಪಟ್ಟಿತು. ಒಟ್ಟಾರೆ 6 ಪಂದ್ಯಗಳ ಬಳಿಕ ಭಾರತ 10 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ಆಸ್ಪ್ರೇಲಿಯಾ ಸಹ 6 ಪಂದ್ಯಗಳಿಂದ 10 ಅಂಕ ಪಡೆದಿದ್ದು, 3ನೇ ಸ್ಥಾನದಲ್ಲಿದೆ. 14 ಅಂಕ ಕಲೆಹಾಕಿರುವ ಬೆಲ್ಜಿಯಂ ಅಗ್ರಸ್ಥಾನ ಕಾಯ್ದುಕೊಂಡಿದೆ.

ಶನಿವಾರದ ಪಂದ್ಯದಲ್ಲಿ ಭಾರತ ಪರ 25ನೇ ನಿಮಿಷದಲ್ಲಿ ರೂಪಿಂದರ್‌ ಪಾಲ್‌ ಹಾಗೂ 27ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿಕರ್ನಾರ್‌ ಮೂಲಕ ಗೋಲು ಬಾರಿಸಿದರು. ಆಸ್ಪ್ರೇಲಿಯಾ ಪರ 23ನೇ ನಿಮಿಷದಲ್ಲಿ ಮಿಟ್ಟನ್‌, 46ನೇ ನಿಮಿಷದಲ್ಲಿ ಜಾಲೆಲ್ಸ್ಕಿಗೋಲು ಗಳಿಸಿದರು. ಶೂಟೌಟ್‌ನಲ್ಲಿ ಭಾರತದ ಹರ್ಮನ್‌ಪ್ರೀತ್‌, ವಿವೇಕ್‌ ಪ್ರಸಾದ್‌ ಹಾಗೂ ಲಲಿತ್‌ ಉಪಾಧ್ಯ ಗೋಲು ಬಾರಿಸಿದರೆ, ಆಸೀಸ್‌ ಪರ ಬೇಲಿ ಮಾತ್ರ ಗೋಲು ಗಳಿಸಿದರು. ಇನ್ನುಳಿದ ಮೂವರು ವಿಫಲರಾದ ಕಾರಣ ಭಾರತಕ್ಕೆ ಜಯ ದೊರೆಯಿತು.

ಭಾರತ ಹಾಕಿ ತಂಡ ತನ್ನ ಮುಂದಿನ ಪಂದ್ಯಗಳನ್ನು ಏ.25, 26ಕ್ಕೆ ಜರ್ಮನಿ ವಿರುದ್ಧ ಬರ್ಲಿನ್‌ನಲ್ಲಿ ಆಡಲಿದೆ.