ಕೊರೋನಾ ಎಫೆಕ್ಟ್: ಅಜ್ಲಾನ್ ಷಾ ಹಾಕಿ ಟೂರ್ನಿ ಮುಂದೂಡಿಕೆ
ಮಲೇಷ್ಯಾದ ಐಪೋನಲ್ಲಿ ಏಪ್ರಿಲ್ 11ರಿಂದ 18ರ ವರೆಗೆ ನಡೆಯಬೇಕಿದ್ದ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಟೂರ್ನಿ ಕೊರೋನಾ ವೈರಸ್ ಭೀತಿಯಿಂದ ಮುಂದೂಲ್ಪಟ್ಟಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ನವದೆಹಲಿ(ಮಾ.03): ಮಾರಣಾಂತಿಕ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಾಕಷ್ಟುಕ್ರೀಡೆಗಳು ಮುಂದೂಡಿಕೆಯಾಗುತ್ತಿವೆ. ಕೆಲವೊಂದು ಕ್ರೀಡೆಗಳು ರದ್ದುಗೊಂಡಿವೆ. ವೈರಸ್ ಸೋಂಕು ವಿಶ್ವದ ಸುಮಾರು 64 ದೇಶಗಳಿಗೆ ಹರಡಿದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಸಾಕಷ್ಟುಕ್ರೀಡೆಗಳನ್ನು ನಡೆಸದಿರಲು ಚಿಂತನೆ ನಡೆಸಲಾಗಿದೆ.
ರಾಜ್ಯದಲ್ಲಿ ಟೆಕ್ಕಿಗೆ ಕೊರೋನಾ ವೈರಸ್ ಪತ್ತೆ; ಅಧಿಕಾರಿಗಳು ಹೈ ಅಲರ್ಟ್
ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಪಂದ್ಯಾವಳಿಯನ್ನು ಮುಂದೂಡಲಾಗಿದೆ. ಮಲೇಷ್ಯಾದ ಐಪೋನಲ್ಲಿ ಏಪ್ರಿಲ್ 11ರಿಂದ 18ರ ವರೆಗೆ ಈ ಪಂದ್ಯಾವಳಿ ಆಯೋಜನೆಗೊಂಡಿತ್ತು. ಆದರೆ, ಕೊರೋನಾ ವೈರಸ್ ಹರಡುತ್ತಿರುವ ವೇಗದಿಂದ ಕಂಗಾಲಾಗಿರುವ ಆಯೋಜಕರು ಇದೀಗ ಪಂದ್ಯಾವಳಿಯನ್ನೇ ಮುಂದೂಡಿದ್ದಾರೆ. ಸೆಪ್ಟೆಂಬರ್ 24ರಿಂದ ಅ.3ರ ವರೆಗೆ ಅಜ್ಲಾನ್ ಷಾ ಕಪ್ ಟೂರ್ನಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸ್ವತಃ ಆಯೋಜಕರೇ ತಿಳಿಸಿದ್ದಾರೆ.
ಏಷ್ಯನ್ ನಡಿಗೆ ರೇಸ್ ರದ್ದು:
ಜಪಾನ್‌ನಲ್ಲಿ ಮಾರ್ಚ್ 15ರಿಂದ ನಡೆಯಬೇಕಿದ್ದ 20ಕಿ.ಮೀ ಏಷ್ಯನ್ ನಡಿಗೆ ಚಾಂಪಿಯನ್‌ಶಿಪ್ ರದ್ದಾಗಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ಭಾವನಾ ಜಾಟ್ ಸೇರಿದಂತೆ 13 ಮಂದಿ ಭಾರತೀಯರೂ ಪಾಲ್ಗೊಳ್ಳಬೇಕಿತ್ತು. ಆದರೆ ಹೆಚ್ಚಿನ ದೇಶಗಳು ವಿದೇಶ ಪ್ರವಾಸಕ್ಕೆ ವೀಸಾ ನೀಡುವುದನ್ನು ನಿರಾಕರಿಸುತ್ತಿರುವುದರಿಂದ ಆಯೋಜಕರು ಈ ತೀರ್ಮಾನಕ್ಕೆ ಬರುವಂತಾಗಿದೆ. ಇನ್ನು ಥಾಯ್ಲೆಂಡ್‌ನಲ್ಲಿ ಮಾ.20ರಿಂದ 22ರವರೆಗೆ ನಡೆಯಬೇಕಿದ್ದ ಮೋಟೋ ಗ್ರ್ಯಾನ್ ಪ್ರೀ ಮೋಟಾರ್‌ಸೈಕಲ್ ರೇಸ್‌ನ್ನು ಮುಂದೂಡಲಾಗಿದೆ.