* ಏಷ್ಯನ್‌ ಮಹಿಳಾ ಹಾಕಿ ಚಾಂಪಿಯನ್ಸ್‌ ಟೂರ್ನಿ ಮೇಲೆ ಕೊರೋನಾ ವೈರಸ್ ಕೆಂಗಣ್ಣು* ಭಾರತ ಮಹಿಳಾ ಹಾಕಿ ತಂಡದ ಸದಸ್ಯೆಯೊಬ್ಬರಿಗೆ ಕೋವಿಡ್ ಪಾಸಿಟಿವ್* ಭಾರತ-ದಕ್ಷಿಣ ಕೊರಿಯಾ ನಡುವಿನ ಹಾಕಿ ಪಂದ್ಯ ಮುಂದೂಡಿಕೆ

ಡೊಂಗೇ(ಡಿ.09): ಏಷ್ಯನ್‌ ಮಹಿಳಾ ಹಾಕಿ ಚಾಂಪಿಯನ್ಸ್‌ (Asian Champions Trophy) ಟ್ರೋಫಿಯಲ್ಲಿ ಮಾಜಿ ಚಾಂಪಿಯನ್‌ ಭಾರತ ಹಾಗೂ ಆತಿಥೇಯ ದಕ್ಷಿಣ ಕೊರಿಯಾ ನಡುವಿನ ಪಂದ್ಯ ಮುಂದೂಡಿಕೆಯಾಗಿದೆ. ಭಾರತೀಯ ಹಾಕಿ ಆಟಗಾರ್ತಿಗೆ ಸೋಂಕು ತಗುಲಿರುವುದನ್ನು ಹಾಕಿ ಇಂಡಿಯಾ (Hockey India) ಖಚಿತಪಡಿಸಿದೆ. ಆದರೆ ಆಟಗಾರ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಏಷ್ಯನ್‌ ಮಹಿಳಾ ಹಾಕಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿರುವ ಓರ್ವ ಆಟಗಾರ್ತಿಗೆ ಮಾತ್ರ ಕೋವಿಡ್ (COVID 19) ದೃಢಪಟ್ಟಿದೆ ಎಂದು ಮೂಲಗಳು ಪಿಟಿಐ ತಿಳಿಸಿವೆ ಎಂದು ವರದಿಯಾಗಿದೆ.

ಎಂದಿನಂತೆ ನಿತ್ಯ ಕೋವಿಡ್ ಪರೀಕ್ಷೆ (COVID Test) ನಡೆಸಿದಾಗ ಭಾರತ ಹಾಕಿ ತಂಡದ ಸದಸ್ಯೆಯೊಬ್ಬರಿಗೆ ಕೋವಿಡ್ ಟೆಸ್ಟ್ ಪಾಸಿಟಿವ್ ಬಂದಿದೆ ಎಂದು ತಿಳಿಸಲು ವಿಷಾಧಿಸುತ್ತೇವೆ. ಹೀಗಾಗಿ ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಿನ ಹಾಕಿ ಪಂದ್ಯವನ್ನು ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲಿಯೇ ತಿಳಿಸಲಿದ್ದೇವೆ ಎಂದು ಏಷ್ಯನ್ ಹಾಕಿ ಫೆಡರೇಷನ್ ಟ್ವೀಟ್ ಮಾಡಿದೆ. 

ಭಾರತೀಯ ಆಟಗಾರ್ತಿಯರು ಕ್ವಾರಂಟೈನ್‌ನಲ್ಲಿರುವ ಕಾರಣ ಗುರುವಾರ ನಡೆಯಬೇಕಿರುವ ಚೀನಾ ವಿರುದ್ಧದ ಪಂದ್ಯವೂ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಸೋಮವಾರ ನಡೆಯಬೇಕಿದ್ದ ಭಾರತ-ಮಲೇಷ್ಯಾ ಪಂದ್ಯವೂ ಕೋವಿಡ್‌ ಪ್ರಕರಣದ ಕಾರಣ ಮುಂದೂಡಿಕೆಯಾಗಿತ್ತು.

Junior Hockey World Cup: ಭಾರತದ ಕೈ ತಪ್ಪಿದ ಕಂಚು..!

ಮಲೇಷ್ಯಾ ತಂಡ ಕೂಡಾ ಕೋವಿಡ್‌ನಿಂದಾಗಿ ಕ್ರೀಡಾಕೂಟದಿಂದ ಮೊದಲೆರಡು ದಿನ ಗೈರು ಹಾಜರಾಗಿತ್ತು. ಕಳೆದ ವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು 13-0 ಅಂತರದಲ್ಲಿ ಥಾಯ್ಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು

ಪೊಲೀಸ್‌ ಹಾಕಿ: ಸೆಮೀಸ್‌ ಪ್ರವೇಶಿಸಿದ ಕರ್ನಾಟಕ

ಬೆಂಗಳೂರು: 70ನೇ ಅಖಿಲ ಭಾರತ ಪೊಲೀಸ್‌ ಹಾಕಿ ಟೂರ್ನಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ ಪ್ರವೇಶಿಸಿದೆ. ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಜಾರ್ಖಂಡ್‌ ವಿರುದ್ಧ 1-0 ಗೋಲಿನಿಂದ ಗೆದ್ದ ಕರ್ನಾಟಕ, ಶುಕ್ರವಾರ ಸೆಮಿಫೈನಲ್‌ನಲ್ಲಿ ಐಟಿಬಿಪಿ ಜಲಂಧರ್‌ ತಂಡದ ವಿರುದ್ಧ ಸೆಣಸಲಿದೆ. 

ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಕರ್ನಾಟಕ ಪರ 54ನೇ ನಿಮಿಷದಲ್ಲಿ ಉಮೇಶ್‌ ಆರ್‌. ಗೆಲುವಿನ ಗೋಲು ಬಾರಿಸಿದರು. ಒಡಿಶಾ ವಿರುದ್ಧ ಗೆದ್ದ ತಮಿಳುನಾಡು, ಸಿಐಎಸ್‌ಎಫ್‌ ದೆಹಲಿ ವಿರುದ್ಧ ಗೆದ್ದ ಪಂಜಾಬ್‌ ತಂಡಗಳು ಸೆಮೀಸ್‌ ಪ್ರವೇಶಿಸಿದ್ದು ಪರಸ್ಪರ ಮುಖಾಮುಖಿಯಾಗಲಿವೆ. ಐಟಿಬಿಪಿ ಜಲಂಧರ್‌ ತಂಡವು ಕ್ವಾರ್ಟರ್‌ ಫೈನಲಲ್ಲಿ ಸಿಆರ್‌ಪಿಎಫ್‌ ಜಲಂಧರ್‌ ತಂಡವನ್ನು ಸೋಲಿಸಿ ಸೆಮೀಸ್‌ಗೇರಿತು.

ಐಎಸ್‌ಎಲ್‌: ಬೆಂಗಳೂರು ಎಫ್‌ಸಿಗೆ ಈ ವರ್ಷ ಮೂರನೇ ಸೋಲು

ಬ್ಯಾಂಬೊಲಿಮ್‌: 8ನೇ ಆವೃತ್ತಿಯ ಇಂಡಿಯನ್ ಸೂಪರ್‌ ಲೀಗ್ (Indian Super League) ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ (Bengaluru FC) ತಂಡವು ಮೂರನೇ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಬೆಂಗಳೂರು ಎಫ್‌ಸಿ ವಿರುದ್ದ ಹೈದರಾಬಾದ್‌ ಎಫ್‌ಸಿ ತಂಡವು 1-0 ಗೋಲುಗಳ ಅಂತರದ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. 

ಪಂದ್ಯದ ಆರಂಭದಲ್ಲೇ ಹೈದರಾಬಾದ್ ಎಫ್‌ಸಿ ತಂಡವು ಗೋಲು ಬಾರಿಸುವ ಮೂಲಕ ಬೆಂಗಳೂರು ತಂಡದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. ಪಂದ್ಯದ ಮೊದಲಾರ್ಧದ 7ನೇ ನಿಮಿಷದಲ್ಲಿ ಆಕಾಶ್ ನೀಡಿದ ಉತ್ತಮ ಪಾಸ್ ಅನ್ನು ನೈಜಿರಿಯಾ ಮೂಲದ ಸ್ಟ್ರೈಕರ್ ಒಬೆಚೆ ಗೋಲಾಗಿ ಪರಿವರ್ತಿಸುವಲ್ಲಿ ಸಫಲರಾದರು. ಇದಾದ ಬಳಿಕ ಬೆಂಗಳೂರು ಎಫ್‌ಸಿ ತಂಡವು ಗೋಲು ಬಾರಿಸಲು ಸಾಕಷ್ಟು ಪ್ರಯತ್ನಿಸಿತಾದರೂ ಯಶಸ್ವಿಯಾಗಲಿಲ್ಲ.